ಸಿಲಿಂಡರ್ ಸ್ಫೋಟ: ಅಕ್ರಮ ಗ್ಯಾಸ್ ರಿಫಿಲ್ಲಿಂಗ್ ಬಯಲು

ಅದೊಂದು ಐತಿಹಾಸಿಕ ಪಟ್ಟಣ, ಆ ಪಟ್ಟಣದ ಜನರೆಲ್ಲಾ ರಾತ್ರಿ ಊಟ ಮಾಡಿ ಇನ್ನೇನು ಆಗಷ್ಟೇ ಮಲಗಿರೋ ಹೊತ್ತಲ್ಲಿ ದೊಡ್ಢ ಸ್ಪೋಟವೊಂದು ಊರಿನ ಜನರನ್ನೇ ಬೆಚ್ಚಿ ಬೀಳಿಸಿತ್ತು, ಹೊರ ಬಂದು ನೋಡುವಷ್ಟರಲ್ಲಿ ಅಂಗಡಿಯೊಂದು ಹೊತ್ತಿ ಬಾದಾಮಿ ಶಿವಾಜಿ ಸರ್ಕಲ್ ಬಳಿಉರಿದಿತ್ತು, ಇಷ್ಟೆಲ್ಲಾ ಅವಾಂತರಕ್ಕೆ ಅಕ್ರಮ ಸಿಲಿಂಡರ್ ರಿಫಿಲ್ಲಿಂಗ್ ದಂಧೆ ಕಾರಣವಾಗಿತ್ತು.

ಹಾಗಾದ್ರೆ ಇದು ಆಗೆದ್ದೆಲ್ಲಿ? ಯಾಕೆ? ಹೇಗೆ ? ಅಂತೀರಾ, ಈ ಕುರಿತು ವರದಿ ಇಲ್ಲಿದೆ.
ರಸ್ತೆ ತುಂಬ ಆವರಿಸಿಕೊಂಡು ಆತಂಕ ತಂದ ಸ್ಪೋಟ, ಸ್ಪೋಟದ ರಭಸವಾಗಿ ಹೊತ್ತಿ ಉರಿದ ಅಂಗಡಿ ಮುಂಗಟ್ಟು, ಇವುಗಳ ಮಧ್ಯೆ ಸ್ಪೋಟದಿಂದ ಗಾಯಗೊಂಡು ಆಸ್ಪತ್ರೆ ಸೇರಿದ ಅಕ್ಕಪಕ್ಕದ ಜನ, ಅಂದಹಾಗೆ ಇಂತಹವೊಂದು ಘಟನೆ ನಡೆದಿದ್ದು ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಬಾದಾಮಿ ಪಟ್ಟಣದಲ್ಲಿ.
ಹೌದು, ನಗರದ ಮಾರ್ಕೆಟ್ ನಲ್ಲಿ ಶಿವಾಜಿ ಸರ್ಕಲ್ ಬಳಿ ಇದ್ದ ಸೈಕಲ್ ಶಾಪ್ ಧಗಧಗನೆ ಹೊತ್ತಿ ಉರಿದಿತ್ತು. ಜಾಮದಾರ ಕುಟುಂಬಕ್ಕೆ ಸೇರಿದ ವಾಸೀಮ್ ಮತ್ತು ಸಲೀಮ್ ಸಹೋದರರಿಗೆ ಸೇರಿದ ಸೈಕಲ್ ಶಾಪ್ ಇದಾಗಿದ್ದು, ನಿನ್ನೆ ರಾತ್ರಿ ಕೆಲಸ ಮಾಡೋ ವೇಳೆ ವಿದ್ಯುತ್ ಸ್ಥಗಿತವಾಗಿದೆ. ಈ ವೇಳೆ ಆನ್ ಆಗಿದ್ದ ಸಾಲ್ಟರ್ ವೆಲ್ಡಿಂಗನ್ ಹಾಗೆ ಇಟ್ಟು ಮನೆಗೆ ಹೋಗಿದ್ದಾರೆ. ಇತ್ತ ಮತ್ತೆ ಕರೆಂಟ್ ಬರುತ್ತಲೇ ಅದು ಕಾಯ್ದು ಕಾಯ್ದು ಬೆಂಕಿ ಹೊತ್ತಿಕೊಂಡಿದೆ. ಇತ್ತ ಹೊತ್ತಿಕೊಂಡ ಬೆಂಕಿ ಆರಿಸೋಕೆ ಜನರು ಮುಂದಾಗುತ್ತಿದ್ದಂತೆ ಅಂಗಡಿಯಲ್ಲಿದ್ದ 5ಕೆಜಿಯ ಎರಡು ಸಿಲಿಂಡರ್ ಗಳು ಸ್ಪೋಟಗೊಂಡಿವೆ. ಇದರಿಂದ ಅಂಗಡಿ ಸೇರಿ ರಸ್ತೆಗೂ ಸ್ಪೋಟದಿಂದ ಬೃಹತ್ ಬೆಂಕಿ ಆವರಿಸಿದೆ. ತಕ್ಷಣ ಸ್ಥಳಕ್ಕೆ ಪೋಲಿಸರು ಮತ್ತು ಅಗ್ನಿಶಾಮಕದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಮಧ್ಯೆ ಸ್ಥಳದ ಸಮೀಪ ಇದ್ದ ಮೂವರು ಹೋಮ್ ಗಾರ್ಡ್ಸ್ ಸೇರಿದಂತೆ 8ಕ್ಕೂ ಅಧಿಕ ಜನರು ಗಾಯಗೊಂಡು, ಬಾದಾಮಿ ಸರ್ಕಾರಿ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಈ ಸ್ಪೋಟದ ಬೆನ್ನು ಹತ್ತಿದ ಪೋಲಿಸರಿಗೆ ಈ ಅಂಗಡಿಯಲ್ಲಿ ಅಕ್ರಮ ಗ್ಯಾಸ್ ರಿಫಿಲ್ಲಿಂಗ್ ದಂಧೆ ನಡೆಯುತ್ತಿರೋ ಮಾಹಿತಿ ಸಿಕ್ಕಿದೆ. ಯಾವುದೇ ಪರವಾನಿಗೆ ಇಲ್ಲದೆ ಈ ಅಂಗಡಿಯಲ್ಲಿ ಗ್ಯಾಸ್ ರಿಫಿಲ್ಲಿಂಗ್ ಮಾಡ್ತಿರೋದು ಕಂಡು ಬಂದಿದೆ.
ಘಟನೆ ಬೆನ್ನಲ್ಲೆ ಸ್ಥಳಕ್ಕೆ ಬಾಗಲಕೋಟೆ ಎಸ್.ಪಿ. ಸಿದ್ಧಾರ್ಥ ಗೋಯಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು, ಈ ವೇಳೆ ಸೈಕಲ್ ಶಾಪ್ ನಲ್ಲಿ ಅನಧಿಕೃತವಾಗಿ ಇರುವ 14 ಕೆಜಿಯ ಎರಡು ಎಲ್.ಪಿ.ಜಿ ಸಿಲಿಂಡರ್, 5 ಕೆಜಿಯ 20 ಎಲ್.ಪಿ.ಜಿ ಸಿಲಿಂಡರ್ ಗಳು ಪತ್ತೆಯಾಗಿದ್ದು ಸಧ್ಯ ಅಂಗಡಿ ಮಾಲೀಕರಾದ ವಾಸೀಮ್ ಮತ್ತು ಸಲೀಮ್ ಎಂಬುವವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಸನ್ 120 (A) ಮತ್ತು 120(B) , 287,288 ಸ್ಪೋಟಕ ಕಾಯಿದೆಯನ್ವಯ ಕೇಸ್ ದಾಖಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ಈ ಮಧ್ಯೆ ಅಕ್ರಮವಾಗಿ ಗ್ಯಾಸ್ ರಿಫಿಲ್ಲಿಂಗ್ ದಂಧೆಯನ್ನ ಮಾರ್ಕೆಟ್ ನ ಜನನಿಬಿಡ ಪ್ರದೇಶದಲ್ಲಿ ನಡೆಸುತ್ತಿರೋದು ತೀವ್ರ ಆತಂಕ ಮೂಡಿಸಿದ್ದು, ಈಗಾಗಲೇ ಸಂಭಂದಿಸಿದವರ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿದೆ. ಈ ಸಂಬಂಧ ಇಡೀ ಜಿಲ್ಲೆಯಾದ್ಯಂತ ತಂಡಗಳನ್ನ ರೂಪಿಸಿ ಅಕ್ರಮ ಗ್ಯಾಸ್ ರಿಫಿಲ್ಲಿಂಗ್ ದಂಧೆ ಮೇಲೆ ಸೂಕ್ತ ಕ್ರಮಕೈಗೊಳ್ಳಲಾಗುವುದೆಂದು ಬಾಗಲಕೋಟೆ ಎಸ್.ಪಿ. ಸಿದ್ಧಾರ್ಥ ಹೇಳಿದ್ದಾರೆ.
ಒಟ್ಟಿನಲ್ಲಿ ಜನನಿಬಿಡ ಪ್ರದೇಶದಲ್ಲಿ ಅಕ್ರಮ ಗ್ಯಾಸ್ ರಿಪಿಲ್ಲಿಂಗ್ ದಂಧೆ ನಡೆದಿದ್ದು, ಸ್ಪೋಟವು ರಾತ್ರಿ ವೇಳೆಯಾಗಿದ್ದರಿಂದ ಅದೃಷ್ಟವಶಾತ್ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಇಷ್ಟಕ್ಕೂ ಇನ್ಮುಂದೆ ಜಿಲ್ಲೆಯಾದ್ಯಂತ ಇಂತಹ ಅಕ್ರಮ ಗ್ಯಾಸ್ ರಿಫಿಲ್ಲಿಂಗ್ ದಂಧೆ ವಿರುದ್ಧ ಕಠಿಣ ಕ್ರಮಕೈಗೊಂಡು ಮುಂದೆ ಇಂತಹ ಅನಾಹುತ ಆಗದಂತೆ ಕ್ರಮಕೈಗೊಳ್ಳಬೇಕಾಗಿದೆ.
