ಬೆಂಗಳೂರಿನಲ್ಲಿ ‘ಡಿಜಿಟಲ್ ಅರೆಸ್ಟ್’ ಹೆಸರಲ್ಲಿ ಸೈಬರ್ ವಂಚನೆ: ಇಬ್ಬರು ಮಹಿಳೆಯರಿಗೆ ಕಿರುಕುಳ, ಹಣ ಲೂಟಿ!

ಬೆಂಗಳೂರು: ಅಕ್ರಮ ಹಣ ವರ್ಗಾವಣೆ, ಮಾನವ ಕಳ್ಳ ಸಾಗಣೆಯ ಆರೋಪದ ಮಾಡಿ ಕರೆ ಮಾಡಿದ ಸೈಬರ್ ವಂಚಕನೊಬ್ಬ, ಡಿಜಿಟಲ್ ಅರೆಸ್ಟ್ ಮಾಡಿ ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಕಿರುಕುಳ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ 46 ವರ್ಷದ ಮಹಿಳೆಯೊ ಬ್ಬರು ನೀಡಿದ ದೂರಿನ ಮೇರೆಗೆ ಪೂರ್ವ ವಿಭಾಗದ ಸೈಬರ್ ಠಾಣೆ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 318(4) ಅಡಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಆರೋಪಿ ಇಬ್ಬರು ಮಹಿಳೆಯರಿಗೆ ಸುಮಾರು 9 ಗಂಟೆಗಳ ಕಾಲ ಡಿಜಿಟಲ್ ಅರೆಸ್ಟ್ ಮಾಡಿದಲ್ಲದೆ, ಅವರ ಬ್ಯಾಂಕ್ ಖಾತೆಯಿಂದ 58,477 ರೂ.ಅನ್ನೂ ವರ್ಗಾಯಿಸಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.
ಥಾಯ್ಲೆಂಡ್‌ನಲ್ಲಿ ಬೋಧಕಿಯಾಗಿರುವ ಮಹಿಳೆ, ತನ್ನ ಬಾಲ್ಯ ಸ್ನೇಹಿತೆಯನ್ನು ಭೇಟಿಯಾಗಲು ಬೆಂಗಳೂರಿಗೆ ಬಂದಿದ್ದರು. ಸ್ನೇಹಿತೆಯ ಮನೆಯಲ್ಲಿ ತಂಗಿದ್ದ ಮಹಿಳೆಗೆ ಜುಲೈ 17ರಂದು ಬೆಳಗ್ಗೆ 11ರ ಸುಮಾರಿಗೆ ಅನಾಮಧೇಯ ನಂಬರ್‌ನಿಂದ ಕರೆ ಬಂದಿದೆ. ಕರೆ ಮಾಡಿದ್ದ ವ್ಯಕ್ತಿ, ತಾನು ಮುಂಬೈನ ಕೊಲಾಬಾ ಪೊಲೀಸ್ ಠಾಣೆಯ ಅಧಿಕಾರಿ ಎಂದು ಹೇಳಿಕೊಂಡಿದ್ದಾನೆ. ಜೆಟ್ ಏರ್‌ವೆಸ್‌ಗೆ ಸಂಬಂಧಿಸಿದ ಹಣ ವರ್ಗಾವಣೆಯಲ್ಲಿ ತಾವು ಭಾಗಿಯಾಗಿದ್ದು, ಅಕ್ರಮ ಹಣ ವರ್ಗಾವಣೆ, ಮಾನವ ಕಳ್ಳಸಾಗಣೆ ಹಾಗೂ ಹತ್ಯೆ ಪ್ರಕರಣದಲ್ಲೂ ತಮ್ಮ ಹೆಸರು ಕೇಳಿ ಬಂದಿದೆ. ಅದಕ್ಕೆ ಸಂಬಂಧಿಸಿದಂತೆ ದಾಖಲೆಗಳು ತಮ್ಮ ಬಳಿಯಿವೆ ಎಂದು ಹೇಳಿದ್ದ. ಅದ್ದರಿಂದ ಆಘಾ ತಕ್ಕೊಳಗಾದ ಮಹಿಳೆ, ತಾನು ಕೆಲವು ದಿನಗಳ ಹಿಂದೆಯಷ್ಟೇ ಭಾರತಕ್ಕೆ ಭೇಟಿ ನೀಡಿದ್ದೇನೆ. ಆ ಪ್ರಕರಣಗಳಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ವಿವರಿಸಿದ್ದರು. ಆದರೆ ಆತನ ಮಹಿಳೆಯ ಡೆಬಿಟ್ ಕಾರ್ಡ್ ನಂಬರ್ ಅನ್ನು ಸರಿಯಾಗಿ ಹೇಳಿದ್ದ. ಅದರಿಂದ ನಂಬಿದ ಮಹಿಳೆ, ಕೆಲವೊಂದು ವಿಚಾರಗಳನ್ನು ಆತನಿಗೆ ತಿಳಿಸಿದ್ದಾಳೆ. ಬಳಿಕ ತನ್ನೊಂದಿಗೆ ಇರುವ ಸ್ನೇಹಿತೆ ಬಗ್ಗೆಯೂ ಹೇಳಿಕೊಂಡಿದ್ದಾಳೆ. ಹೀಗಾಗಿ ಇಬ್ಬರನ್ನು ಬೆದರಿಸಿ ಡಿಜಿಟಲ್ ಅರೆಸ್ಟ್ ಮಾಡಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖೀಸಿದ್ದಾರೆ.
ಅದಾದ ಕೆಲವೇ ಹೊತ್ತಿನಲ್ಲಿ ಮಹಿಳೆಯರಿಗೆ ನಕಲಿ ಬಂಧನದ ವಾರಂಟ್ ಕಳುಹಿಸಿದ್ದ ವಂಚಕ, ಬ್ಯಾಂಕ್ ಖಾತೆಗಳಲ್ಲಿರುವ ಹಣವನ್ನು ವರ್ಗಾವಣೆ ಮಾಡುವಂತೆಯೂ ಬೆದರಿಕೆ ಹಾಕಿದ್ದ. ಹೆದರಿದ ಮಹಿಳೆಯರು, 58,477 ರೂ.ಅನ್ನು ಆರೋಪಿ ಹೇಳಿದ್ದ ಖಾತೆಗೆ ಹಾಕಿದ್ದರು. ಈ ಪ್ರಕರಣದಿಂದ ಕೈಬಿಡಬೇಕಾದರೆ ದೈಹಿಕ ತಪಾಸಣೆ ನಡೆಸಬೇಕು. ವಿವಸ್ತ್ರಗೊಂಡು ಮೈಮೇಲಿರುವ ಮಚ್ಚೆ ಅಥವಾ ಗುರುತುಗಳನ್ನು ತೋರಿಸುವಂತೆ ಸೂಚಿಸಿದ್ದ. ಅದರಂತೆ ನಾವು ವಿವಸ್ತ್ರಗೊಂಡಿದ್ದೇವು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖೀಸಿದ್ದಾರೆ.