‘ಕಸ್ಟಮ್ಸ್ ಕಿರುಕುಳ’: ತಮಿಳುನಾಡಿನ ವಿನ್‌ಟ್ರ್ಯಾಕ್ ಲಾಜಿಸ್ಟಿಕ್ಸ್‌ನಿಂದ ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತ

ನವದೆಹಲಿ: ಕಳೆದ 45 ದಿನಗಳಿಂದ ಚೆನ್ನೈನಲ್ಲಿರುವ ಕಸ್ಟಮ್ಸ್ (Chennai Customs) ನಿರಂತರ ಕಿರುಕುಳ ನೀಡುತ್ತಿದೆ ಎಂದು ಉಲ್ಲೇಖಿಸಿ ತಮಿಳುನಾಡು ಮೂಲದ ಲಾಜಿಸ್ಟಿಕ್ಸ್ ಸಂಸ್ಥೆ ವಿನ್‌ಟ್ರ್ಯಾಕ್ (Wintrack) ಭಾರತದಲ್ಲಿ (India) ತನ್ನ ಆಮದು-ರಫ್ತು ಕಾರ್ಯಾಚರಣೆಯನ್ನು ನಿಲ್ಲಿಸುವುದಾಗಿ ಪ್ರಕಟಿಸಿದೆ.

ಈ ವರ್ಷ ಚೆನ್ನೈನ ಕಸ್ಟಮ್ಸ್ ಅಧಿಕಾರಿಗಳು 2 ಬಾರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನಾವು ಇದಕ್ಕೆ ಒಪ್ಪದೇ ಅವರ ಬೇಡಿಕೆಗಳನ್ನು ಬಹಿರಂಗಪಡಿಸಿದ್ದರಿಂದ ನಮ್ಮ ಮೇಲೆ ದ್ವೇಷ ಸಾಧಿಸಿ ಪ್ರತೀಕಾರ ತೀರಿಸಿಕೊಂಡಿದ್ದಾರೆ. ಭಾರತದಲ್ಲಿ ನಮ್ಮ ವ್ಯವಹಾರವು ದುರ್ಬಲಗೊಂಡು ನಾಶವಾಗಿದೆ ಎಂದು ಎಕ್ಸ್‌ನಲ್ಲಿ ಕಂಪನಿ ಹೇಳಿಕೊಂಡಿದೆ.
ಕಂಪನಿಯ ಟ್ವೀಟ್ ಬೆನ್ನಲ್ಲೇ ಹಲವು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರತಿಕ್ರಿಯಿಸಿದ್ದು, ನಿಜವಾಗಿಯೂ ಇದು ನಿರಾಶಾದಾಯಕ ಎಂದಿದ್ದಾರೆ.
ಆರಿನ್ ಕ್ಯಾಪಿಟಲ್‌ನ ಅಧ್ಯಕ್ಷ ಮತ್ತು ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಮೋಹನದಾಸ್ ಪೈ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿ, ನಮ್ಮ ಬಂದರುಗಳಲ್ಲಿ ವ್ಯವಸ್ಥಿತ ಭ್ರಷ್ಟಾಚಾರವನ್ನು ಹತ್ತಿಕ್ಕುವಲ್ಲಿ ನೀವು ವಿಫಲರಾಗಿದ್ದೀರಿ. ದಯವಿಟ್ಟು ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ.
ಚೆನ್ನೈನಲ್ಲಿರುವ ಕಸ್ಟಮ್ಸ್ ಇಲಾಖೆ ಕಂಪನಿಯ ಆರೋಪವನ್ನು ಅಲ್ಲಗೆಳೆದಿದ್ದು, ಯಾವುದೇ ಲಂಚವನ್ನು ಕೇಳಿಲ್ಲ ಎಂದಿದೆ. ಆರೋಪ ಬಂದ ಬೆನ್ನಲ್ಲೇ ಕೇಂದ್ರ ಸರ್ಕಾರ ತನಿಖಗೆ ಆದೇಶಿಸಿದೆ.