ಆರ್‌ಬಿಐನಿಂದ ಗ್ರಾಹಕ ಕೇಂದ್ರಿತ ಕ್ರಮಗಳು: ಪುನರ್ ಕೆವೈಸಿ, ಮೃತ ಗ್ರಾಹಕರ ಹಣ ವಿತರಣೆ ಪ್ರಕ್ರಿಯೆ ಸರಳ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಸಂಜಯ್ ಮಲ್ಹೋತ್ರಾ ಇಂದು ಪ್ರಕಟಿಸಿದ ಎಂಪಿಸಿ ಸಭೆ (RBI MPC meeting) ನಿರ್ಧಾರಗಳಲ್ಲಿ ಕೆಲ ಗ್ರಾಹಕ ಕೇಂದ್ರಿತ ಕ್ರಮಗಳೂ (consumer centric steps) ಒಳಗೊಂಡಿವೆ. ಗ್ರಾಹಕರ ಅನುಕೂಲತೆ, ಹಣಕಾಸು ಒಳಗೊಳ್ಳುವಿಕೆಯನ್ನು ಗಮನದಲ್ಲಿಟ್ಟುಕೊಂಡು ಕ್ರಮಗಳನ್ನು ರೂಪಿಸಲಾಗಿದೆ ಎಂದು ಮಲ್ಹೋತ್ರಾ ತಿಳಿಸಿದ್ದಾರೆ. ಮೃತ ಗ್ರಾಹಕರ ಅಕೌಂಟ್ಗಳನ್ನು ಅವರ ವಾರಸುದಾರರಿಗೆ ಸೆಟಲ್ಮೆಂಟ್ ಮಾಡುವ ಪ್ರಕ್ರಿಯೆ ಸರಳಗೊಳಿಸಿರುವುದೂ ಈ ಕ್ರಮಗಳಲ್ಲಿ ಒಳಗೊಳ್ಳಲಾಗಿದೆ.

ಜನರ ಬಳಿಗೇ ಹೋಗಿ ಪುನರ್ಕೆವೈಸಿ ಪಡೆಯುವ ವ್ಯವಸ್ಥೆ
ಪಿಎಂ ಜನ್ ಧನ್ ಯೋಜನೆ ಶುರುವಾಗಿ 10 ವರ್ಷ ಆಗಿದೆ. ಈ ಸ್ಕೀಮ್ ಅಡಿ ಶುರುವಾದ ಹೆಚ್ಚಿನ ಬ್ಯಾಂಕ್ ಅಕೌಂಟ್ಗಳಿಗೆ ಮತ್ತೊಮ್ಮೆ ಕೆವೈಸಿ ಪಡೆಯಬೇಕಿದೆ. ಇದಕ್ಕಾಗಿ, ಪಂಚಾಯತ್ ಮಟ್ಟದಲ್ಲಿ ಬ್ಯಾಂಕುಗಳು ಜುಲೈ 1ರಿಂದ ಸೆಪ್ಟೆಂಬರ್ 30ರವರೆಗೆ ಶಿಬಿರಗಳನ್ನು ನಡೆಸಲಿವೆ. ಇಲ್ಲಿ ಬ್ಯಾಂಕ್ ಖಾತೆದಾರರಿಗೆ ಮರು-ಕೆವೈಸಿ ಪ್ರಕ್ರಿಯೆಯಲ್ಲಿ ನೆರವು ನೀಡಲಾಗುತ್ತದೆ. ಹಾಗೆಯೇ, ಮೈಕ್ರೋ ಇನ್ಷೂರೆನ್ಸ್, ಪೆನ್ಷನ್ ಸ್ಕೀಮ್ ಇತ್ಯಾದಿ ಸಂಬಂಧಿತ ಸೇವೆ ಹಾಗೂ ಮಾಹಿತಿಯನ್ನೂ ಈ ಶಿಬಿರಗಳಲ್ಲಿ ನೀಡಲಾಗುತ್ತದೆ ಎಂದು ಆರ್ಬಿಐ ಗವರ್ನರ್ ತಿಳಿಸಿದ್ದಾರೆ.
ಮೃತ ಗ್ರಾಹಕರ ಬ್ಯಾಂಕ್ ಹಣಕ್ಕೆ ಕ್ಲೇಮ್ ಸಲ್ಲಿಸುವುದು ಸರಳ
ಮೃತ ಬ್ಯಾಂಕ್ ಗ್ರಾಹಕರ ಖಾತೆಯಲ್ಲಿನ ಹಣಕ್ಕೆ ವಾರಸುದಾರರು ಸಲ್ಲಿಸಿದ ಕ್ಲೇಮ್ ಅನ್ನು ಸೆಟಲ್ಮೆಂಟ್ ಮಾಡುವ ಪ್ರಕ್ರಿಯೆಯನ್ನು ಸರಳಗೊಳಿಸುವುದಾಗಿ ಆರ್ಬಿಐ ಹೇಳಿದೆ.
ಆರ್ಬಿಐ ರೀಟೇಲ್ ಡೈರೆಕ್ಟ್
ಆರ್ಬಿಐ ತನ್ನ ರೀಟೇಲ್ ಡೈರೆಕ್ಟ್ ಪ್ಲಾಟ್ಫಾರ್ಮ್ ಅನ್ನು ಅಪ್ಗ್ರೇಡ್ ಮಾಡಿದೆ. ಸರ್ಕಾರಿ ಬಾಂಡ್ ಇತ್ಯಾದಿ ಗವರ್ನ್ಮೆಂಟ್ ಸೆಕ್ಯೂರಿಟೀಸ್ಗಳಲ್ಲಿ ವ್ಯಕ್ತಿಗಳು ಹೂಡಿಕೆ ಮಾಡಲು ಈ ವೇದಿಕೆ ಅವಕಾಶ ಮಾಡಿಕೊಡುತ್ತದೆ. ಈ ರೀಟೇಲ್ ಹೂಡಿಕೆದಾರರು ತಮ್ಮ ಹೂಡಿಕೆಗಳನ್ನು ಮತ್ತಷ್ಟು ಉತ್ತಮವಾಗಿ ನಿಭಾಯಿಸಲು ಸಹಾಯವಾಗುವಂತಹ ಮತ್ತಷ್ಟು ಪರಿಕರಗಳನ್ನು ರೀಟೇಲ್ ಡೈರೆಕ್ಟ್ ಪ್ಲಾಟ್ಫಾರ್ಮ್ನಲ್ಲಿ ನೀಡಲಾಗಿದೆ.
