ಹಸುವಿನ ಮೇಲೆ ಕ್ರೌರ್ಯ: ರಾಮನಗರದಲ್ಲಿ ದುಷ್ಕರ್ಮಿಗಳಿಂದ ಕೆಚ್ಚಲು ಕೊಯ್ದು ಅಮಾನವೀಯ ಕೃತ್ಯ

ರಾಮನಗರ: ಕರ್ನಾಟಕದಲ್ಲಿ ಜಾನುವಾರುಗಳ ಮೇಲಿನ ಕ್ರೌರ್ಯ ಮತ್ತೆ ಮುಂದುವರಿದಿದೆ. ರಾಜ್ಯದಲ್ಲಿ ಇತ್ತೀಚೆಗೆ ಕೆಲ ಕಿಡಿಗೇಡಿಗಳು ಹಸುವಿನ ಕೆಚ್ಚಲು ಕೊಯ್ದು ಕ್ರೌರ್ಯ ಮೆರೆಯುತ್ತಿರುವಂತಹ ಘಟನೆಗಳು ಹೆಚ್ಚಾಗುತ್ತಿವೆ. ಚಾಮರಾಜಪೇಟೆ, ಬಾಗಲಕೋಟೆ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಯ ಸೇರಿದಂತೆ ಕೆಲವೆಡೆ ಮೂಕ ಪ್ರಾಣಿಯ ಕೆಚ್ಚಲು ಕೊಯ್ದು ದುಷ್ಕರ್ಮಿಗಳು ಕೌರ್ಯ ಎಸಗುತ್ತಿದ್ದಾರೆ. ಇದೀಗ ಇಂತಹದ್ದೇ ಮತ್ತೊಂದು ಘಟನೆ ನಗರದಲ್ಲಿ ನಡೆದಿದೆ.

ಬೆಂಗಳೂರು ದಕ್ಷಿಣ ತಾಲೂಕಿನ ಸೂಲಿವಾರ ಗ್ರಾಮದಲ್ಲಿ ಹಸುವಿನ ಕೆಚ್ಚಲು ಕೊಯ್ದು ದುಷ್ಕರ್ಮಿಗಳು ಕ್ರೌರ್ಯ ಮೆರೆದಿರುವಂತಹ ಘಟನೆ ನಡೆದಿದೆ. ಹಾಲಿನ ಡೇರಿ ಅಧ್ಯಕ್ಷ ಮರಿಬಸವಯ್ಯ ಎಂಬುವರಿಗೆ ಹಸು ಸೇರಿತ್ತು.

ಗುರುಸಿದ್ದಪ್ಪ ಎಂಬುವರರ ಜಮೀನಿನಲ್ಲಿ ಹಸುವಿನ ಮೇಲೆ ಕೌರ್ಯ ಎಸಗಲಾಗಿದ್ದು, ಅವರ ವಿರುದ್ಧ ಹಸುವಿನ ಮಾಲೀಕ ಮರಿಬಸವಯ್ಯ ಆರೋಪ ಮಾಡಿದ್ದಾರೆ. ಈ ಹಿಂದೆ ಡೇರಿ ಅಧ್ಯಕ್ಷ ಚುನಾವಣೆ ವೇಳೆ ಮರಿಬಸವಯ್ಯ ಮತ್ತು ಗುರುಸಿದ್ದಪ್ಪ ನಡುವೆ ವೈಮನಸ್ಸು ಏರ್ಪಟ್ಟಿತು. ಹೀಗಾಗಿ ಗುರುಸಿದ್ದಪ್ಪ ವಿರುದ್ಧ ಹಸುವಿನ ಕೆಚ್ಚಲು ಕೊಯ್ದಿರುವ ಆರೋಪ ಮಾಡಲಾಗಿದೆ. ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಘಟನೆ ನಡೆದಿದೆ.

ಕರ್ನಾಟಕದ ಹಲವೆಡೆ ಕೃತ್ಯ
- ಬೆಂಗಳೂರಿನ ಚಾಮರಾಜಪೇಟೆಯ ವಿನಾಯಕನಗರದಲ್ಲಿ ಮೂರು ಹಸುಗಳ ಕೆಚ್ಚಲು ಕತ್ತರಿಸಿ ಕಿಡಿಗೇಡಿ ಕ್ರೌರ್ಯ ಮೆರೆದ ಘಟನೆ ಜನವರಿ 12ರಂದು ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ದೂರು ಸಹ ದಾಖಲಾಗಿತ್ತು. ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಈ ಘಟನೆ ಸಾಕಷ್ಟು ಸುದ್ದಿಯಾಗಿತ್ತು.
- ಬೆಂಗಳೂರಿನ ಘಟನೆ ಮಾಸುವ ಮುನ್ನವೇ ಜನವರಿ 12ರಂದು ಮೈಸೂರಿನಲ್ಲಿ ಸಹ ಮಚ್ಚಿನಿಂದ ಹಸುವಿನ ಬಾಲ ಕತ್ತರಿಸಿ ವಿಕೃತಿ ಮೆರೆಯಲಾಗಿತ್ತು.
- ಇನ್ನು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸಾಲ್ಕೋಡು ಗ್ರಾಮದಲ್ಲಿ ಹಸುವಿನ ತಲೆ ಕಡಿದು ಬಳಿಕ ಅದರ ದೇಹವನ್ನು ತೆಗೆದುಕೊಂಡು ಹೋಗಲಾಗಿತ್ತು. ಕೃಷ್ಣ ಆಚಾರಿ ಎಂಬುವವರಿಗೆ ಹಸು ಸೇರಿತ್ತು.
