ನ್ಯಾಯಮೂರ್ತಿಗಳ ಮನೆಗೆ ನುಗ್ಗಿ ₹5 ಲಕ್ಷ ದೋಚಿದ ಕ್ರಿಮಿನಲ್ಗಳು: ವಿಡಿಯೋ ವೈರಲ್

ನಿವೃತ್ತ ನ್ಯಾಯಮೂರ್ತಿಯ ಮನೆಗೆ ನುಗ್ಗಿದ ಮೂವರು ಕ್ರಿಮಿನಲ್ ಗಳು ಕೇವಲ 4 ನಿಮಿಷ 10 ಸೆಕೆಂಡ್ ಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ನಗದು ಹಾಗೂ ಚಿನ್ನಾಭರಣ ದೋಚಿದ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.

ನಿವೃತ್ತ ನ್ಯಾಯಮೂರ್ತಿ ರಮೇಶ್ ಗರ್ಗ್ ಅವರ ವಿಜಯನಗರದಲ್ಲಿರುವ ಬಂಗಲೆಗೆ ನುಗ್ಗಿದ ದರೋಡೆಕೋರರು ಸುಮಾರು 5 ಲಕ್ಷ ರೂ.
ಮೂವರು ದರೋಡೆಕೋರರು ಭಾನುವಾರ ಮುಂಜಾನೆ 3.30ರ ಸುಮಾರಿಗೆ ಬಂಗಲೆಗೆ ನುಗ್ಗಿದ್ದಾರೆ. ನ್ಯಾಯಮೂರ್ತಿಯ ಪುತ್ರ ಮಲಗಿದ್ದು, ಪಕ್ಕದಲ್ಲೇ ಇದ್ದ ಅಲ್ಮೆರಾ ತೆರೆದು ಅದರೊಳಗಿದ್ದ ನಗ-ನಗದು ದೋಚಿದ್ದಾರೆ.
ಒಬ್ಬ ಅಲ್ಮೆರಾ ತೆಗೆದು ದೋಚುತ್ತಿದ್ದರೆ, ಮತ್ತೊಬ್ಬ ನ್ಯಾಯಮೂರ್ತಿಯ ಮಗ ರಿತ್ವಿಕ್ ಎದ್ದರೆ ಹಲ್ಲೆ ಮಾಡಿ ಕೊಲೆ ಮಾಡಲು ರಾಡ್ ಹಿಡಿದು ಸಿದ್ಧನಾಗಿ ನಿಂತಿದ್ದಾನೆ. ಈ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಭಯಾನಕ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮನೆಯ ಹೊರಗೆ ಭದ್ರತಾ ಸಿಬ್ಬಂದಿ ಇದ್ದಾಗಲೇ ಒಳಗೆ ನುಗ್ಗಿದ ದರೋಡೆಕೋರರು ಕಿಟಕಿಯ ಸರಳುಗಳನ್ನು ಮುರಿದ ಬಂಗಲೆಯೊಳಗೆ ಪ್ರವೇಶಿಸಿದ್ದಾರೆ. ಮತ್ತೊಂದು ಕೋಣೆಯಲ್ಲಿ ರಿತ್ವಿಕ್ ಅವರ ಪತ್ನಿ ಹಾಗೂ ಮಗು ಮಲಗಿದ್ದರು.
ವಿಶೇಷ ಅಂದರೆ ಮನೆಗೆ ಅಲರಾಂ ಹಾಕಲಾಗಿದ್ದು ಅಲರಾಂ ಬಡಿದುಕೊಳ್ಳದೇ ಇರುವುದು ದರೋಡೆ ಮಾಡಲು ಸಹಾಯಕವಾಗಿದೆ. ಮತ್ತೊಂದೆಡೆ ಅಲಾರಂ ಬಡಿದುಕೊಳ್ಳದ ಕಾರಣ ರಿತ್ವಿಕ್ ಎಚ್ಚರಗೊಳ್ಳದೇ ಇರುವ ಕಾರಣ ಸಾವಿನಿಂದ ಪಾರಾಗಿದ್ದಾರೆ ಎಂದೇ ಹೇಳಬಹುದು.
ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಸಿಸಿಟಿವಿ ದೃಶ್ಯ ಸೇರಿದಂತೆ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ತನಿಖೆ ಆರಂಭಿಸಿದ್ದಾರೆ.