Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸರ್ವೇ ನಂಬರ್ ಜಮೀನಿಗೆ 9-11 ನಮೂನೆ ನೀಡಿದರೆ ಪಿಡಿಒಗಳ ವಿರುದ್ಧ ಕ್ರಿಮಿನಲ್ ಕೇಸ್: ಕಂದಾಯ ಸಚಿವ ಕೃಷ್ಣಬೈರೇಗೌಡ ಎಚ್ಚರಿಕೆ

Spread the love

ಬೆಂಗಳೂರು:- ಕಂದಾಯ ಇಲಾಖೆಯ ಸರ್ವೇ ನಂಬರ್‌ಗಳ ಜಮೀನುಗಳಿಗೆ ನಮೂನೆ 9-11 ನೀಡುತ್ತಿರುವ ಗ್ರಾಮ ಪಂಚಾಯಿತಿಯ ಪಿಡಿಒಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಆದೇಶಿಸಿದ್ದಾರೆ.ಬೆಳಗಾವಿ ಜಿಲ್ಲೆಯಲ್ಲಿಂದು ಇಲಾಖೆಯ ಪ್ರಗತಿಪರಿಶೀಲನಾ ಸಭೆ ನಡೆಸಿದ ಅವರು, ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸರ್ವೇ ನಂಬರ್‌ನ ಭೂಮಿಗಳಿಗೆ ಪಿಡಿಒಗಳಿಗೆ 9-11 ನಮೂನೆ ನೀಡುವುದಾದರೆ ಕಂದಾಯ ಇಲಾಖೆ ಏಕೆ ಇರಬೇಕು, ಬಾಗಿಲು ಮುಚ್ಚಿಕೊಂಡು ಹೋಗಿ ಎಂದು ಕಿಡಿಕಾರಿದರು.
ಭೂಮಿಯ ಸ್ವಾಧೀನದ ಹಕ್ಕು ಬರುವುದಕ್ಕೆ ಸ್ಪಷ್ಟವಾದ ನಿಯಮಗಳಿವೆ. ಖಾಸಗಿ ಜಮೀನಾದರೆ ದಾನದ ರೂಪದಲ್ಲಿರಬೇಕು ಅಥವಾ ಖರೀದಿ ಮಾಡಿರಬೇಕು.

ಸರ್ಕಾರಿ ಜಮೀನಾದರೆ ಮಂಜೂರಾತಿಯಾಗಿರಬೇಕು. ಇದನ್ನು ಹೊರತುಪಡಿಸಿ ಬೇರೆ ಯಾವುದೇ ರೀತಿ ಮಾಲೀಕತ್ವ ಪ್ರಾಪ್ತಿಯಾಗುವುದಿಲ್ಲ. ಗ್ರಾ.ಪಂ. ಪಿಡಿಒಗಳು 9-11 ನಮೂನೆಯ ಮೂಲಕ ಭೂಮಾಲೀಕತ್ವ ನೀಡುವುದನ್ನು ಕಂದಾಯ ಇಲಾಖೆ ಒಪ್ಪಿಕೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಜನರಿಗೂ ಸಮಸ್ಯೆ ಅರ್ಥವಾಗುವುದಿಲ್ಲ. ಲಂಚ ಕೊಟ್ಟು 9-11 ನಮೂನೆ ಮಾಡಿಸಿಕೊಳ್ಳುತ್ತಾರೆ. ಅಧಿಕಾರಿಗಳು ಎಲ್ಲಿಂದ ಹಣ ಬರುತ್ತದೆ ಎಂದು ಅಂಗಡಿ ಬಾಗಿಲು ತೆಗೆದುಕೊಂಡು ಕುಳಿತಿರುತ್ತಾರೆ. ಅವರು ಕಣ್ಣುಮುಚ್ಚಿ ಈ ರೀತಿ ಅವಾಂತರ ಮಾಡುತ್ತಾರೆ. ಎಲ್ಲವನ್ನೂ ಕಾನೂನುಬದ್ದಗೊಳಿಸಿ ಜನರಿಗೆ ನೆಮ್ಮದಿಯ ವಾತಾವರಣ ಸೃಷ್ಟಿಸಬೇಕು ಎಂಬುದು ತಮ್ಮ ಉದ್ದೇಶ. ಹೀಗಾಗಿ ಹಲವು ಬಾರಿ ನಾನು ತಿಳಿವಳಿಕೆ ಹೇಳಿದ್ದೇನೆ. ಇನ್ಯಾವ ಭಾಷೆಯಲ್ಲಿ ನನಗೆ ಅರ್ಥ ಮಾಡಿಸಬೇಕೋ ಗೊತ್ತಿಲ್ಲ ಎಂದು ಸಿಡಿಮಿಡಿಗೊಂಡರು.

ಜಂಟಿ ಆರ್‌ಟಿಸಿಗಳ ಬಗ್ಗೆ ಸಾಕಷ್ಟು ತಕರಾರುಗಳಿವೆ. ಅವುಗಳನ್ನು ಪ್ರತ್ಯೇಕಗೊಳಿಸಿ ಪೋಡಿಮುಕ್ತ ಅಭಿಯಾನದಲ್ಲಿ ಸಂಬಂಧಪಟ್ಟ ಮಾಲೀಕರಿಗೆ ಹಕ್ಕು ಪ್ರಾಪ್ತಿ ಮಾಡಿಕೊಡುವುದು ಇಲಾಖೆಯ ಉದ್ದೇಶ. ಜಂಟಿ ಸರ್ವೇ ನಂಬರ್‌ಗಳನ್ನು ಹಾಗೆಯೇ ಬಿಟ್ಟುಬಿಡಲು ಸಾಧ್ಯವಿಲ್ಲ. ಈ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಬಡವರಿಗೆ ಹಕ್ಕುಪತ್ರ ನೀಡಲು ತಕರಾರು ಮಾಡುವುದು ಸರಿಯಲ್ಲ ಎಂದರು.

ಬೆಳಗಾವಿ ಜಿಲ್ಲೆಯ ಜೆಜೆಎಂ ಅಡಿ 2004 ಗ್ರಾಮಗಳಿವೆ ಎಂಬ ಮಾಹಿತಿ ಇದೆ. ಕಂದಾಯ ಇಲಾಖೆಯಲ್ಲಿ 1800 ಗ್ರಾಮಗಳು ಮಾತ್ರ ಲೆಕ್ಕಕ್ಕಿವೆ. ಹೊಸದಾಗಿ 70 ಗ್ರಾಮಗಳನ್ನು ಕಂದಾಯ ಗ್ರಾಮಗಳ ಘೋಷಣೆಗೆ ಪ್ರಸ್ತಾವನೆ ಸಿದ್ದಗೊಂಡಿದೆ. ಆದರೆ ಇನ್ನಷ್ಟು ಗ್ರಾಮಗಳು ಇದರ ವ್ಯಾಪ್ತಿಗೆ ಒಳಪಡುವ ಅಗತ್ಯವಿಲ್ಲದಂತೆ ಕಾಣುತ್ತಿದೆ. ಅಧಿಕಾರಿಗಳು ಕಂದಾಯ ಗ್ರಾಮಗಳ ಕುರಿತ ಮಾರ್ಗಸೂಚಿಗಳನ್ನು ಸರಿಯಾಗಿ ಓದಿಕೊಂಡು ಕೆಲಸ ನಿರ್ವಹಿಸಿ ಎಂದು ಸೂಚಿಸಿದರು.

ಈ ಬಾರಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದೆ. ಕೃಷ್ಣ ನದಿಗೆ 1 ಲಕ್ಷ ಕ್ಯೂಸೆಕ್ಸ್ ನೀರಿನ ಒಳಹರಿವಿದೆ. ಮಹಾರಾಷ್ಟ್ರದಲ್ಲಿ ಶೇ.50ರಷ್ಟು ಜಲಾಶಯ ಭರ್ತಿಯಾಗಿದೆ. ಸದ್ಯಕ್ಕೆ ಅಲ್ಲಿಂದ ನೀರಿನ ಹರಿವು ಕಾಣುತ್ತಿಲ್ಲ. ಹೀಗಾಗಿ ನೆರೆಯ ಭೀತಿ ಇಲ್ಲ. ಆದರೆ ಮುಂದಿನ ದಿನಗಳಲ್ಲಿ ಸೂಕ್ತ ಎಚ್ಚರಿಕೆ ಅಗತ್ಯವಿದೆ ಎಂದರು.

ಅನಾಹುತಗಳಾದಾಗ ಪರಿಹಾರ ನೀಡುವುದು ಸರ್ಕಾರದ ಆದ್ಯತೆ ಅಲ್ಲ. ತೊಂದರೆಗಳಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಮೊದಲ ಆದ್ಯತೆ. ಕೃಷಿ ಹಾನಿಯನ್ನು ತಪ್ಪಿಸುವುದು ಕಷ್ಟ. ಆದರೆ ಜನವಸತಿ ಪ್ರದೇಶಗಳಲ್ಲಿ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಬಲವಂತವಾಗಿಯಾದರೂ ಜನರನ್ನು ನೆರೆ ಪೀಡಿತ ಪ್ರದೇಶದಿಂದ ಸ್ಥಳಾಂತರಗೊಳಿಸಬೇಕು. ಇದರ ಜಾಗೃತಿಗಾಗಿ ಅಗತ್ಯ ಅನುದಾನವನ್ನು ಒದಗಿಸಲಾಗುವುದು. ಗ್ರಾಮ ಪಂಚಾಯಿತಿಯ ಕಾರ್ಯಪಡೆಗಳು ಸಕ್ರಿಯಗೊಳ್ಳಬೇಕು ಎಂದು ಸೂಚಿಸಿದರು.


Spread the love
Share:

administrator

Leave a Reply

Your email address will not be published. Required fields are marked *