ಬೆಂಗಳೂರಿನಲ್ಲಿ ಅಪರಾಧ, ದುರಂತ ಘಟನೆಗಳು: ಕೊಲೆ, ಆತ್ಮಹತ್ಯೆ, ಗೀಸರ್ ದುರಂತ, ಲೈನ್ಮ್ಯಾನ್ ಸಾವು!

ಬೆಂಗಳೂರು:ಕುಡಿದ ಅಮಲಿನಲ್ಲಿ ಸ್ನೇಹಿತ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ಬೆಂಗಳೂರು (Bengaluru) ನಗರದ ಪೀಣ್ಯ ಬಳಿ ನಡೆದಿದೆ. ರಂಗನಾಥ್ (44 ವರ್ಷ) ಕೊಲೆಯಾದ ವ್ಯಕ್ತಿ. ರಂಗನಾಥ್ ಮೂಲತಃ ತುಮಕೂರು (Tumakur) ಜಿಲ್ಲೆಯ ಚಿಕ್ಕನಾಯಕನಹಳ್ಳಿಯವರು . ಬೆಂಗಳೂರಿನ ನೆಲಗದರನಹಳ್ಳಿಯಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದರು . ರಂಗನಾಥ್ ಟೆಂಪೋ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದರು . ಗುರುವಾರ ( ಜು .17) ರಾತ್ರಿ ರಂಗನಾಥ್ , ಸ್ನೇಹಿತ ಆನಂದ್ನೊಂದಿಗೆ ಎಣ್ಣೆ ಪಾರ್ಟಿ ಮಾಡಿದ್ದಾರೆ . ನಂತರ ಇಬ್ಬರ ನಡುವೆ ಜಗಳವಾಗಿದೆ . ಜಗಳ ತಾರಕಕ್ಕೇರಿದ್ದು , ಆನಂದ್ ಸ್ನೇಹಿತ ರಂಗನಾಥ್ನ ತಲೆಗೆ 15 ನಿಮಿಷಗಳ ಕಾಲ ಕಲ್ಲಿನಿಂದ ಜಜ್ಜಿದ್ದಾನೆ . ಬಳಿಕ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ . ವಿಚಾರ ತಿಳಿದು ಪೀಣ್ಯಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು . ಪೊಲೀಸರು ಆರೋಪಿ ಪತ್ತೆಗೆ ಬಲೆಬೀಸಿದ್ದಾರೆ .

ನೇಣು ಬಿಗಿದುಕೊಂಡು ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ
ಬೆಂಗಳೂರು: ನೇಣು ಬಿಗಿದುಕೊಂಡು ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಆರ್ ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮನೋಜ್ ಕುಮಾರ್ (25) ಮೃತ ದುರ್ದೈವಿ. ಮೃತ ಮನೋಜ್ ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿದ್ದನು. ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್ನಿಂದ ಸಾಲ ಪಡೆದು ಬೆಟ್ಟಿಂಗ್ ಆಡುತ್ತಿದ್ದನು. ಬೆಟ್ಚಿಂಗ್ನಲ್ಲಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದನು. ಇದರಿಂದ ಮನೋಜ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆತ್ಮಹತ್ಯೆಗೂ ಮುನ್ನ ಸೆಲ್ಫಿ ವೀಡಿಯೋ ಮಾಡಿದ್ದರು. ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ಯಾಸ್ ಗೀಸರ್ ಸೋರಿಕೆಯಾಗಿ ಯುವತಿ ಸಾವು
ನೆಲಮಂಗಲ: ಮನೆಯಲ್ಲಿ ಗ್ಯಾಸ್ ಗೀಸರ್ ಸೋರಿಕೆಯಾಗಿ ಯುವತಿ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಎನ್ಎನ್ಟಿ ಬಡಾವಣೆಯಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಮೇಘನಾ (25) ಮೃತದುರ್ದೈವಿ. ಕೆಲಸದ ನಿಮಿತ್ತ ಮೇಘನಾ ಬೆಂಗಳೂರಿನಲ್ಲಿ ಪಿಜಿಯಲ್ಲಿ ವಾಸವಿದ್ದರು. ಸೋಮವಾರ ಸ್ನೇಹಿತ ಸತೀಶ್ ಮನೆಗೆ ಮೇಘನಾ ಬಂದಿದ್ದರು. ಮೇಘನಾ ಮತ್ತು ಸತೀಶ್ ಮದುವೆಯಾಗುವವರಿದ್ದರು. ಶುಕ್ರವಾರ ಬೆಳಗ್ಗೆ ಸ್ನಾನಕ್ಕೆ ತೆರಳಿದ್ದ ವೇಳೆ ಗ್ಯಾಸ್ ಗೀಸರ್ ಲೀಕ್ ಆಗಿ ಮೇಘನಾ ಮೃತಪಟ್ಟಿದ್ದಾರೆ. ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ವಿದ್ಯುತ್ ತಂತಿ ತಗುಲಿ ಲೈನ್ಮ್ಯಾನ್
ಚಿಕ್ಕಮಗಳೂರು: ಹೊನ್ನೇಕೊಪ್ಪ ಗ್ರಾಮದಲ್ಲಿ ಟ್ರಾನ್ಸ್ಫಾರ್ಮರ್ ದುರಸ್ತಿ ವೇಳೆ ವಿದ್ಯುತ್ ತಂತಿ ತಗುಲಿ ಲೈನ್ಮ್ಯಾನ್ ಪ್ರವೀಣ್(27) ಮೃತಪಟ್ಟಿದ್ದಾರೆ. ಪ್ರವೀಣ್ ಬಾಳೆಹೊನ್ನೂರು ವಿಭಾಗದಲ್ಲಿ ಲೈನ್ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಮೆಸ್ಕಾ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
