‘ಗೋವು’ ಹೆಸರಲ್ಲಿ ದುಷ್ಕೃತ್ಯ: ಸರಕು ಸಾಗಾಟ ಲಾರಿ ಅಡ್ಡಗಟ್ಟಿ ಚಾಲಕನ ಮೇಲೆ ದೊಣ್ಣೆ ಏಟು, ನಗದು ದೋಚಿದ ದುಷ್ಕರ್ಮಿಗಳು!

ಸಕಲೇಶಪುರ : ಗೋ ಸಾಗಾಟದ ಲಾರಿ ಎಂದು ಭಾವಿಸಿ ಸರಕು ಸಾಗಾಟ ಮಾಡುತ್ತಿದ್ದ ವಾಹನದ ಚಾಲಕನ ಮೇಲೆ ಸಂಘಪರಿವಾರದ ಕಾರ್ಯಕರ್ತರು ದೊಣ್ಣೆಯಿಂದ ಹಲ್ಲೆ ನಡೆಸಿ, ನಗದು ದೋಚಿರುವ ಘಟನೆ ಸಕಲೇಶಪುರ ತಾಲೂಕಿನ ಬಾಳುಪೇಟೆ ಸಮೀಪದಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದೀರಜ್, ನವೀನ್ ಮತ್ತು ರಾಜು ಎಂಬವರನ್ನು ಬಂಧಿಸಿ, ಕಾರು ಮತ್ತು ಹಲ್ಲೆಗೆ ಬಳಸಿದ್ದ ದೊಣ್ಣೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ತಾಲೂಕಿನ ಬಾಗೆ ಗ್ರಾಮದ ಹೆದ್ದಾರಿ 75ರ ಬಳಿ ಚಲಿಸುತ್ತಿದ್ದ ಲಾರಿಯನ್ನು ಕಾರಿನಲ್ಲಿ ಬಂದ ಯುವಕರು ಏಕಾಏಕಿ ಅಡ್ಡಗಟ್ಟಿ, ಚಾಲಕ ಮಹಮ್ಮದ್ ನಿಶಾನ್ರ ಮೇಲೆ ಹಲ್ಲೆ ನಡೆಸಿ, ಹಣ ದೋಚಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಯ ವಿವರ:
ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಗ್ರಾಮದ ನಿವಾಸಿ ಮಹಮ್ಮದ್ ನಿಶಾನ್ ಕಳೆದ 15 ವರ್ಷಗಳಿಂದ ವಾಹನ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬುಧವಾರ ತಡರಾತ್ರಿ ನಿಶಾನ್ ಅವರು 1 ಗಂಟೆಗೆ ಮಂಗಳೂರಿನಿಂದ ಬೆಂಗಳೂರಿಗೆ ಫೈವುಡ್ ಸಾಗಾಟ ಮಾಡುತ್ತಿದ್ದರು. ಈ ವೇಳೆ ಬಾಗೆ ಗ್ರಾಮದ ಸಮೀಪ ಸಂಘಪರಿವಾರದ ಕಾರ್ಯಕರ್ತರು ಲಾರಿಯನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ವಾಹನದ ಗಾಜನ್ನು ಒಡೆದು, ಚಾಲಕನನ್ನು ಕೆಳಗಿಳಿಯುವಂತೆ ಒತ್ತಾಯಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ಸಂದರ್ಭದಲ್ಲಿ ಬಸ್ವೊಂದು ಸ್ಥಳದಿಂದ ಹಾದುಹೋಗುವುದನ್ನು ಬಳಸಿಕೊಂಡು ಚಾಲಕ ನಿಶಾನ್ ಬಾಗೆ ಗ್ರಾಮದಿಂದ ಪಾಳ್ಯ ಗ್ರಾಮದತ್ತ ಸಾಗಿ, ವಾಹನವನ್ನು ತಿರುಗಿಸಿ ಪೆಟ್ರೋಲ್ ಬಂಕ್ ಮುಂದೆ ನಿಲ್ಲಿಸಿ ಪಕ್ಕದಲ್ಲಿದ್ದ ತೋಟಕ್ಕೆ ಓಡಿಹೋಗಿ ತಪ್ಪಿಸಿಕೊಂಡಿದ್ದಾರೆ ಎಂದು ಎನ್ನಲಾಗಿದೆ.
ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. ಆರೋಪಿಗಳು ಮತ್ತು ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಹಲ್ಲೆಗೆ ಒಳಗಾಗಿದ್ದ ಚಾಲಕ ಮಹಮ್ಮದ್ ನಿಶಾನ್ ಸಕಲೇಶಪುರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, “ನನ್ನ ವಾಹನವನ್ನು ಕಾರಿನಲ್ಲಿ ಬಂದ ಮೂವರು ಏಕಾಏಕಿ ಅಡ್ಡಗಟ್ಟಿದರು. ದೊಣ್ಣೆ ಮತ್ತು ಕತ್ತಿಯಿಂದ ವಾಹನದ ಗ್ಲಾಸ್ ಒಡೆದು ಹಾಕಿದರು. ನನ್ನ ಅಂಗಿಯನ್ನು ಎಳೆದರು ಹಾಗೂ 18,000 ಹಣವನ್ನು ಕಿತ್ತುಕೊಂಡರು. ನಾನು ಹೇಗೂ ತಪ್ಪಿಸಿಕೊಂಡು ವಾಹನವನ್ನು ಚಲಾಯಿಸಿಕೊಂಡು ಬಂದೆ. ನಂತರ ಪಾಳ್ಯ ಬಳಿಯ ಪೆಟ್ರೋಲ್ ಬ್ಯಾಂಕ್ ಬಳಿ ವಾಹನ ನಿಲ್ಲಿಸಿ ಒಂದು ತೋಟಕ್ಕೆ ಓಡಿ ಹೋಗಿ ಪ್ರಾಣ ಉಳಿಸಿಕೊಂಡೆ. ಇವರ ವರ್ತನೆ ನೋಡಿ ನಾನು ಸತ್ತು ಹೋಗುತ್ತೇನೆ ಎಂದು ತಿಳಿದುಕೊಂಡಿದ್ದೆ” ಎಂದು ಹೇಳಿಕೊಂಡಿದ್ದಾರೆ.
