‘ಪ್ರೇಮದ ಕಾರಣಕ್ಕೆ ನಡೆದ ಅಪರಾಧ’: ಸಂತ್ರಸ್ತೆಯನ್ನೇ ಮದುವೆಯಾಗಿ ಮಗು ಪಡೆದಿದ್ದ ವ್ಯಕ್ತಿಯ ಪೋಕ್ಸೋ ಶಿಕ್ಷೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಸಂತ್ರಸ್ತೆಯನ್ನು ವಿವಾಹವಾಗಿ ಮಗು ಪಡೆದಿದ್ದು, ದಂಪತಿ ಶಾಂತಿಯುತ ಕೌಟುಂಬಿಕ ಜೀವನ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆ ಅಡಿಯಲ್ಲಿ ವ್ಯಕ್ತಿಯೊಬ್ಬನಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.

ಆರೋಪಿ ಮತ್ತು ಸಂತ್ರಸ್ತೆಯ ನಡುವಿನ ಸಂಬಂಧ ಸಮ್ಮತಿಯಿಂದ ಕೂಡಿತ್ತು. ಜೊತೆಗೆ ಕಾಮದ ಕಾರಣಕ್ಕಲ್ಲದೇ ಪ್ರೇಮದ ಕಾರಣಕ್ಕೆ ಅಪರಾಧ ನಡೆದಿದೆ ಎಂದು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಎ.ಜಿ ಮಸೀಹ್ ಅವರ ಪೀಠ ಅಭಿಪ್ರಾಯಪಟ್ಟಿತು
ಪೋಕ್ಸೋ ಕಾಯ್ದೆಯಡಿ ಮೇಲ್ಮನವಿದಾರ ಮಾಡಿದ್ದಾನೆ ಎನ್ನಲಾದ ಅಪರಾಧವನ್ನ ಪರಿಗಣಿಸುವ ಸಂದರ್ಭದಲ್ಲಿ, ಆ ಘಟನೆ ಕಾಮದ ಪ್ರೇರಣೆಯಿಂದಲ್ಲದೆ, ಪ್ರೇಮದ ಹಿನ್ನೆಲೆಯಿಂದ ನಡೆದಿದೆ ಅನ್ನೋದನ್ನ ನಾವು ಗಮನಿಸಿದ್ದೇವೆ. ಆಪಾದಿತ ಯುವತಿಯೇ ಸ್ವತಃ, ಮೇಲ್ಮನವಿದಾರನೊಂದಿಗೆ ಶಾಂತ ಮತ್ತು ಸ್ಥಿರವಾದ ಕೌಟುಂಬಿಕ ಜೀವನ ನಡೆಸಲು ಬಯಸುವುದಾಗಿಯೂ ಇದರಿಂದ ಮೇಲ್ಮನವಿದಾರ ಅಪರಾಧಿ ಎಂಬ ಕಪ್ಪುಚುಕ್ಕೆ ಇಲ್ಲದೆ ಇರುತ್ತಾನೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾಳೆ ಎಂಬುದಾಗಿ ನ್ಯಾಯಾಲಯ ಹೇಳಿದೆ
ಅಪ್ರಾಪ್ತ ಬಾಲಕಿಯೊಂದಿಗೆ ಓಡಿಹೋಗಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 366 ಮತ್ತು ಪೋಕ್ಸೊ ಕಾಯಿದೆಯ ಸೆಕ್ಷನ್ 6ರ ಅಡಿಯಲ್ಲಿ ಶಿಕ್ಷೆಗೊಳಗಾದ ವ್ಯಕ್ತಿಯೊಬ್ಬ ಮೇಲ್ಮನವಿ ಸಲ್ಲಿಸಿದ್ದ. ಆತನಿಗೆ ಕ್ರಮವಾಗಿ 5 ಮತ್ತು 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿತ್ತು. ಮದ್ರಾಸ್ ಹೈಕೋರ್ಟ್ ಸೆಪ್ಟೆಂಬರ್ 2021ರಲ್ಲಿ ಆತನ ಅಪರಾಧ ಎತ್ತಿಹಿಡಿದಿತ್ತು. ಹೀಗಾಗಿ ಆತ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ. ಹೈಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇದ್ದಂತೆಯೇ ಇಬ್ಬರೂ ಮೇ 2021 ರಲ್ಲಿ ವಿವಾಹವಾಗಿದ್ದರು.
ಸುಪ್ರೀಂ ಕೋರ್ಟ್ ಆದೇಶದಂತೆ ಇಬ್ಬರ ಕೌಟುಂಬಿಕ ಜೀವನ ಪರಿಶೀಲಿಸಿದ್ದ ತಮಿಳುನಾಡು ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಇಬ್ಬರೂ ಸಂತೋಷದಿಂದ ದಾಂಪತ್ಯ ಜೀವನ ನಡೆಸುತ್ತಿದ್ದು ದಂಪತಿಗೆ ಗಂಡು ಮಗು ಇದೆ ಎಂದು ವರದಿ ಸಲ್ಲಿಸಿತ್ತು. ಆಕೆ ಮೇಲ್ಮನವಿದಾರನೊಂದಿಗೆ ಶಾಂತಿಯುತ ಕೌಟುಂಬಿಕ ಜೀವನ ಮುಂದುವರೆಸುವ ಇಂಗಿತ ವ್ಯಕ್ತಪಡಿಸಿದ್ದಾಳೆ ಎಂದಿತ್ತು
ವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್ ದೂರು ನೀಡಿದ್ದ ಯುವತಿಯ ತಂದೆಯೊಂದಿಗೆ ಮಾತುಕತೆ ನಡೆಸಿತ್ತು. ಪ್ರಕರಣ ಇತ್ಯರ್ಥಕ್ಕೆ ತನ್ನ ಅಭ್ಯಂತರವಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು. ಇದೇ ವೇಳೆ ಪೋಕ್ಸೋ ಗಂಭೀರ ಅಪರಾಧ ನಡೆದಿರುವುದು ಸಾಬೀತಾಗಿದ್ದರೂ ನ್ಯಾಯಾಲಯ ದೋಷಾರೋಪ ರದ್ದುಪಡಿಸಬಹುದೇ ಎಂಬುದನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್ ಅಪರಾಧವೆಂಬುದು ಕೇವಲ ವ್ಯಕ್ತಿಯ ವಿರುದ್ಧದ ಹಾನಿ ಮಾತ್ರವಲ್ಲ; ಅದು ಸಮಗ್ರ ಸಮಾಜದ ಅಂತರಾತ್ಮದ ಮೇಲೆ ಗಾಯ. ಆದರೆ, ಕಾನೂನಿನ ಅನ್ವಯವು ವಾಸ್ತವ ಜೀವನದ ಪರಿಸ್ಥಿತಿಗಳಿಂದ ಬೇರ್ಪಟ್ಟಂತೆ ನಡೆಯಬಾರದು, ಎಂದಿತು.
ಅಲ್ಲದೇ ನ್ಯಾಯದಾನ ಮಾಡುವಾಗ ಸೂಕ್ಷ್ಮ ಮತ್ತು ಸಂದರ್ಭಾಧಾರಿತವಾಗಿ ಮಾಡುವುದು ಅಗತ್ಯ. ಅಗತ್ಯವಿದ್ದ ಕಡೆ ಕಠಿಣತೆ ಪ್ರಯೋಗಿಸಬೇಕು, ಅಗತ್ಯವಿರುವೆಡೆ ದಯೆ ತೋರಬೇಕು. ಸಾಧ್ಯವಾದಲ್ಲಿ ವಿವಾದಕ್ಕೆ ಅಂತ್ಯಹಾಡಿ ಸಮಾಜದ ಹಿತ ಕಾಯುವುದು ಕೂಡ ನ್ಯಾಯಾಲಯದ ಕರ್ತವ್ಯ ಎಂದು ಪೀಠ ಹೇಳಿತು.
ಕಾನೂನು ಈ ಬಗೆಯ ಅಪರಾಧಗಳನ್ನು ಮನ್ನಿಸಲು ಅವಕಾಶ ನಿಷೇಧಿಸಿದ್ದರೂ ಅಪರೂಪದ ಸಂದರ್ಭ ಮತ್ತು ಸನ್ನಿವೇಶವನ್ನಾಧರಿಸಿ ಸಂಪೂರ್ಣ ನ್ಯಾಯದಾನ ಮಾಡುವ ಉದ್ದೇಶದಿಂದ ಸಂವಿಧಾನದ 142ನೇ ವಿಧಿಯನ್ನು ಬಳಸಲು ಅದು ಸಮರ್ಥನೆ ಒದಗಿಸುತ್ತದೆ ಎಂದ ಆರೋಪಿ ವಿರುದ್ಧದ ತೀರ್ಪು ಮತ್ತು ಶಿಕ್ಷೆಯನ್ನು ರದ್ದುಗೊಳಿಸಿ ಕ್ರಿಮಿನಲ್ ವಿಚಾರಣೆ ಮುಕ್ತಾಯಗೊಳಿಸುವಂತೆ ಆದೇಶಿಸಿತು.
ಇದೇ ವೇಳೆ ಹೆಂಡತಿ ಮತ್ತು ಮಗುವನ್ನು ಆರೋಪಿ ತೊರೆಯಬಾರದು. ಅವರಿಬ್ಬರನ್ನೂ ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಷರತ್ತನ್ನು ನ್ಯಾಯಾಲಯ ವಿಧಿಸಿತು. ಮತ್ತೊಂದೆಡೆ ವಿಶೇಷ ಪರಿಸ್ಥಿತಿ ಆಧರಿಸಿಯಷ್ಟೇ ಈ ಬಗೆಯ ತೀರ್ಪು ನೀಡಲಾಗಿದ್ದು ಇದನ್ನು ಉಳಿದ ಪ್ರಕರಣಗಳಿಗೆ ಪೂರ್ವ ನಿದರ್ಶನವಾಗಿ ಬಳಸುವಂತಿಲ್ಲ ಎಂದಿತು.