ಕ್ರಿಕೆಟಿಗ ತಮೀಮ್ ಇಕ್ಬಾಲ್‌ಗೆ ಹೃದಯಾಘಾತ: ಸ್ಥಿತಿ ಗಂಭೀರ

ಬಾಂಗ್ಲಾದೇಶದ ಮಾಜಿ ನಾಯಕ ತಮೀಮ್ ಇಕ್ಬಾಲ್ ಅವರಿಗೆ ಹೃದಯಾಘಾತವಾಗಿದೆ. ಢಾಕಾ ಪ್ರೀಮಿಯರ್ ಡಿವಿಷನ್ ಕ್ರಿಕೆಟ್ ಲೀಗ್ ಪಂದ್ಯ ಆಡುತ್ತಿದ್ದ ವೇಳೆ ಹೃದಯಾಘಾತವಾಗಿದ್ದು ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ. ತಮೀಮ್ ಇಕ್ಬಾಲ್ ಅವರ ಆರೋಗ್ಯದ ಸ್ಥಿತಿ ಪ್ರಸ್ತುತ ಗಂಭೀರವಾಗಿದ್ದು, ಅವರಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಮುಖ್ಯ ವೈದ್ಯ ದೇಬಾಶಿಶ್ ಚೌಧರಿ ಬಹಿರಂಗಪಡಿಸಿದ್ದಾರೆ.
ಸೋಮವಾರ ಢಾಕಾ ಪ್ರೀಮಿಯರ್ ಲೀಗ್‌ನ ಭಾಗವಾಗಿ ಮೊಹಮ್ಮದನ್ ಸ್ಪೋರ್ಟಿಂಗ್ ಕ್ಲಬ್ ಮತ್ತು ಶಿನೆಪುಕರ್ ಕ್ರಿಕೆಟ್ ಕ್ಲಬ್ ನಡುವಿನ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಮೊಹಮ್ಮದನ್ ಕ್ಲಬ್‌ನ ನಾಯಕ ತಮೀಮ್ ಟಾಸ್ ಮಾಡಲು ಮೈದಾನಕ್ಕೆ ಬಂದರು. ಪಂದ್ಯ ಆರಂಭವಾಗುತ್ತಿದ್ದಂತೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಸ್ಥಳೀಯ ಫಜಿಲಾತುನ್ನೆಸ್ ಆಸ್ಪತ್ರೆಗೆ ಪರೀಕ್ಷೆಗೆ ಕರೆದೊಯ್ಯಲಾಗಿದ್ದು, ಹೃದಯಾಘಾತವಾಗಿದೆ ಎಂದು ತಿಳಿದು ಬಂದಿದೆ
ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಢಾಕಾಗೆ ಸಾಗಿಸಲು ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಹೆಲಿಪ್ಯಾಡ್‌ಗೆ ಹೋಗುವ ದಾರಿಯಲ್ಲಿ, ಅವರಿಗೆ ಮತ್ತೆ ಹೃದಯಾಘಾತವಾಗಿದ್ದು, ಮತ್ತೆ ಅದೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರ ಪ್ರಕಾರ ಸದ್ಯ, ತಮಿಮ್ ಅವರ ಆರೋಗ್ಯದ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ಈ ವರ್ಷದ ಜನವರಿಯಲ್ಲಿ ತಮೀಮ್ ಇಕ್ಬಾಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಅಂದಿನಿಂದ, ಅವರು ಲೀಗ್ ಪಂದ್ಯಗಳನ್ನು ಆಡುತ್ತಿದ್ದಾರೆ ಮತ್ತು ವೀಕ್ಷಕ ವಿವರಣೆ ಕೆಲಸ ಮಾಡುತ್ತಿದ್ದರು. ಅವರು ಕೊನೆಯ ಬಾರಿಗೆ 2023 ರಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರು. ತಮೀಮ್ ಬಾಂಗ್ಲಾದೇಶ ಪರ ಒಟ್ಟು 70 ಟೆಸ್ಟ್ ಮತ್ತು 78 ಟಿ20 ಪಂದ್ಯಗಳನ್ನು ಆಡಿದ್ದಾರೆ. 243 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿ 8,357 ರನ್ ಗಳಿಸಿದ್ದಾರೆ.