ಕ್ರಿಕೆಟ್ ಅಭಿಮಾನಿಗಳಿಗೆ ಸಂತಸ: ಏಷ್ಯಾಕಪ್ ಫೈನಲ್‌ನಲ್ಲಿ ಭಾರತ-ಪಾಕಿಸ್ತಾನ ಕಾದಾಟ?

ಬಾಂಗ್ಲಾದೇಶ ವಿರುದ್ಧದ ಸೂಪರ್-4 ಪಂದ್ಯದಲ್ಲಿ ಜಯಗಳಿಸುವ ಮೂಲಕ ಭಾರತ ತಂಡವು ಏಷ್ಯಾ ಕಪ್ 2025 ರ ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಸುಲಭವಾಗಿ ಖಚಿತಪಡಿಸಿಕೊಂಡಿದೆ. ಸದ್ಯ ಪ್ರಶಸ್ತಿ ಪಂದ್ಯದಲ್ಲಿ ಟೀಮ್ ಇಂಡಿಯಾ ಯಾವ ತಂಡವನ್ನು ಎದುರಿಸಲಿದೆ ಎಂಬ ನಿರ್ಧಾರವನ್ನು ಸೆಪ್ಟೆಂಬರ್ 25 ರಂದು ನಿರ್ಧಾರವಾಗುತ್ತದೆ.

2025 ರ ಏಷ್ಯಾ ಕಪ್‌ನಲ್ಲಿ ಸೂರ್ಯಕುಮಾರ್ ಯಾದವ್ (Suryakumar Yadav) ನಾಯಕತ್ವದಲ್ಲಿ ಭಾರತೀಯ ತಂಡದಿಂದ ಎಲ್ಲಾ ಅಭಿಮಾನಿಗಳು ನಿರೀಕ್ಷಿಸಿದ್ದ ಪ್ರದರ್ಶನ ಇಲ್ಲಿಯವರೆಗೆ ಮೈದಾನದಲ್ಲಿ ನೋಡಲಾಗಿದೆ. ಗುಂಪು ಹಂತದಲ್ಲಿ ಟೀಮ್ ಇಂಡಿಯಾ ತನ್ನ ಎಲ್ಲಾ ಪಂದ್ಯಗಳನ್ನು ಸುಲಭವಾಗಿ ಗೆದ್ದಿತು. ಬಳಿಕ ಶುರುವಾದ ಸೂಪರ್-4 ಹಂತದ ಪಂದ್ಯದಲ್ಲೂ ಇದೇ ರೀತಿಯ ಪ್ರದರ್ಶನ ನೀಡಿದ್ದಾರೆ. ಸೂಪರ್ 4 ನಲ್ಲಿ ಮೊದಲಿಗೆ ಭಾರತ ತಂಡವು ಪಾಕಿಸ್ತಾನವನ್ನು ಸೋಲಿಸಿತು, ಸೆಪ್ಟೆಂಬರ್ 24 ರಂದು ಬಾಂಗ್ಲಾದೇಶ ವಿರುದ್ಧದ ಪಂದ್ಯವನ್ನೂ 41 ರನ್‌ಗಳಿಂದ ಗೆದ್ದಿತು ಮತ್ತು ಸೂಪರ್-4 ನಲ್ಲಿ ಒಂದು ಪಂದ್ಯ ಬಾಕಿ ಇರುವಾಗ, ಫೈನಲ್‌ಗೆ ಸ್ಥಾನ ಪಡೆದಿದೆ. ಸದ್ಯ ಪ್ರಶಸ್ತಿ ಪಂದ್ಯದಲ್ಲಿ ಟೀಮ್ ಇಂಡಿಯಾ ಯಾವ ತಂಡವನ್ನು ಎದುರಿಸಲಿದೆ ಎಂಬ ನಿರ್ಧಾರವನ್ನು ಸೆಪ್ಟೆಂಬರ್ 25 ರಂದು ನಿರ್ಧಾರವಾಗುತ್ತದೆ.
ಭಾರತದ ಗೆಲುವಿನಿಂದ ಶ್ರೀಲಂಕಾದ ಕನಸು ನುಚ್ಚುನೂರು
2025 ರ ಏಷ್ಯಾ ಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಜಯಗಳಿಸಿದ ನಂತರ, ಶ್ರೀಲಂಕಾ ಪಂದ್ಯಾವಳಿಯ ಸೂಪರ್ 4 ಹಂತದಿಂದ ಹೊರಬಿತ್ತು. ಪಾಯಿಂಟ್‌ಗಳ ಪಟ್ಟಿಯಲ್ಲಿ ನೋಡಿದರೆ, ಭಾರತವು ತನ್ನ ಮೊದಲ ಸೂಪರ್ 4 ಪಂದ್ಯಗಳಲ್ಲಿ ಎರಡೂ ಪಂದ್ಯಗಳನ್ನು ಗೆದ್ದಿದ್ದು, ಪ್ರಸ್ತುತ 4 ಅಂಕಗಳು ಮತ್ತು 1.357 ರ ನಿವ್ವಳ ರನ್ ದರದೊಂದಿಗೆ ಅಗ್ರಸ್ಥಾನದಲ್ಲಿದೆ. ಎರಡು ಪಂದ್ಯಗಳಿಂದ ಒಂದು ಗೆಲುವು ಮತ್ತು ಒಂದು ಸೋಲಿನೊಂದಿಗೆ ಪಾಕಿಸ್ತಾನವು 0.226 ರ ನಿವ್ವಳ ರನ್ ದರದೊಂದಿಗೆ ಎರಡನೇ ಸ್ಥಾನದಲ್ಲಿದೆ. ಒಂದು ಗೆಲುವು ಮತ್ತು -0.969 ರ ನಿವ್ವಳ ರನ್ ದರದೊಂದಿಗೆ ಬಾಂಗ್ಲಾದೇಶವು ಮೂರನೇ ಸ್ಥಾನದಲ್ಲಿದೆ. ಸೂಪರ್ 4 ರಲ್ಲಿ ಒಂದು ಪಂದ್ಯ ಬಾಕಿ ಇರುವ ಶ್ರೀಲಂಕಾ ಸೆಪ್ಟೆಂಬರ್ 26 ರಂದು ಭಾರತದ ವಿರುದ್ಧ ಆಡಲಿದೆ, ಆದರೆ ಅವರು ಈಗಾಗಲೇ ಅಂತಿಮ ರೇಸ್‌ನಿಂದ ಹೊರಬಿದ್ದಿದ್ದಾರೆ.
ಬಾಂಗ್ಲಾದೇಶ vs ಪಾಕಿಸ್ತಾನ ವರ್ಚುವಲ್ ಸೆಮಿಫೈನಲ್ ಪಂದ್ಯ
ಸೆಪ್ಟೆಂಬರ್ 25 ರಂದು ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಮೇಲೆ ಈಗ ಎಲ್ಲರ ಕಣ್ಣುಗಳಿವೆ. ಈ ಪಂದ್ಯದ ವಿಜೇತರು ಫೈನಲ್‌ಗೆ ಸ್ಥಾನ ಪಡೆಯುತ್ತಾರೆ. ಆದ್ದರಿಂದ, ಈ ಪಂದ್ಯ ಎರಡೂ ತಂಡಗಳಿಗೆ ನಿರ್ಣಾಯಕವಾಗಿರುತ್ತದೆ. ಬಾಂಗ್ಲಾದೇಶಕ್ಕೆ ಒಂದು ದಿನವೂ ವಿರಾಮ ಇಲ್ಲದೆ ಪಾಖ್ ವಿರುದ್ಧ ಪಂದ್ಯವನ್ನು ಆಡಲಿದೆ. ಅತ್ತ ಪಾಕಿಸ್ತಾನ ಶ್ರೀಲಂಕಾ ವಿರುದ್ಧದ ಗೆಲುವಿನ ನಂತರ ಅದೇ ಲಯವನ್ನು ಮುಂದುವರೆಸುತ್ತ ನೋಡಬೇಕು. ಪಾಕ್ ಗೆದ್ದರೆ ಫೈನಲ್‌ನಲ್ಲಿ ಪುನಃ ಭಾರತ ವಿರುದ್ಧ ಸೆಣೆಸಾಡಲಿದೆ.
ಟೀಮ್ ಇಂಡಿಯಾಕ್ಕೆ ಫೀಲ್ಡಿಂಗ್ನದ್ದೇ ಚಿಂತೆ
ಈ ಏಷ್ಯಾಕಪ್‌ನಾದ್ಯಂತ ಭಾರತ ತಂಡ ಕಳಪೆ ಫೀಲ್ಡಿಂಗ್ ಪ್ರದರ್ಶಿಸಿದೆ. ನಿನ್ನೆಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲೂ ಭಾರತ ಒಟ್ಟು ಐದು ಕ್ಯಾಚ್‌ಗಳನ್ನು ಕೈಬಿಟ್ಟಿತು. ಸೂಪರ್ ಫೋರ್‌ನಲ್ಲಿ ಪಾಕಿಸ್ತಾನ ವಿರುದ್ಧವೂ ಕೆಲವು ಕ್ಯಾಚ್‌ಗಳನ್ನು ಕೈಬಿಟ್ಟಿತು. ಇದಲ್ಲದೆ, ಈ ಟೂರ್ನಮೆಂಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಕೈಬಿಟ್ಟ ತಂಡವೆಂದರೆ ಟೀಮ್ ಇಂಡಿಯಾ, ಇದುವರೆಗೆ 12 ಕ್ಯಾಚ್‌ಗಳನ್ನು ಕೈಬಿಟ್ಟಿದೆ. ಫೈನಲ್‌ಗೆ ಮುನ್ನ ಭಾರತಕ್ಕೆ ಇದು ಕಳವಳಕ್ಕೆ ಕಾರಣವಾಗಿದೆ.
