2 ವರ್ಷದ ಕಂದನನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ದಂಪತಿ

2 ವರ್ಷದ ಪುಟ್ಟ ಕಂದನನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ಬಂದ ಪೋಷಕರು ನಂತರ ವಿಷ ಸೇವಿಸಿ ಸಾವಿಗೆ ಶರಣಾದ ಆಘಾತಕಾರಿ ಘಟನೆ ಕಾಸರಗೋಡಿನ ಮಂಜೇಶ್ವರದಲ್ಲಿ ನಡೆದಿದೆ. 35 ವರ್ಷದ ಅಜಿತ್ ಹಾಗೂ ಅವರ ಪತ್ನಿ 27 ವರ್ಷದ ಶ್ವೇತಾ ಮೃತಪಟ್ಟವರು. ಈ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.
2 ವರ್ಷದ ಮಗುವನ್ನು ಅನಾಥನಾಗಿ ಮಾಡಿದ ದಂಪತಿ
ಕಾಸರಗೋಡು: 2 ವರ್ಷದ ಪುಟ್ಟ ಕಂದನನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ಬಂದ ಪೋಷಕರು ನಂತರ ವಿಷ ಸೇವಿಸಿ ಸಾವಿಗೆ ಶರಣಾದ ಆಘಾತಕಾರಿ ಘಟನೆ ಕಾಸರಗೋಡಿನ ಮಂಜೇಶ್ವರದಲ್ಲಿ ನಡೆದಿದೆ. ಮಂಜೇಶ್ವರದ ಕಡಂಬಾರ್ನ ಚೆಂಬಪದವು ನಿವಾಸಿ 35 ವರ್ಷದ ಅಜಿತ್ ಹಾಗೂ ಅವರ ಪತ್ನಿ 27 ವರ್ಷದ ಶ್ವೇತಾ ಮೃತಪಟ್ಟವರು. ಶ್ವೇತಾ ಅವರು ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.

ಸೋಮವಾರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಶ್ವೇತಾ ಹಾಗೂ ಅಜಿತ್ ವಿಷ ಸೇವಿಸಿದ್ದು, ಸಂಜೆ ಹೊತ್ತಿಗೆ ಮನೆಯಿಂದ ನರಳಾಟದ ಸದ್ದು ಕೇಳಿ ಬಂದಿದೆ. ಹೀಗಾಗಿ ನೆರೆಮನೆಯವರು ಕೂಡಲೇ ಸ್ಥಳಕ್ಕೆ ಬಂದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅಜಿತ್ ಮತ್ತು ಶ್ವೇತಾರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಇಬ್ಬರ ಪರಿಸ್ಥಿತಿ ಗಂಭೀರವಾಗಿದ್ದರಿಂದ ಅಲ್ಲಿ ವೈದ್ಯರು ಅವರನ್ನು ಮಂಗಳೂರಿಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಅದರಂತೆ ಅವರ ಕುಟುಂಬದವರು ಅವರನ್ನು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಜಿತ್ ಮಧ್ಯರಾತ್ರಿ 12.30ರ ಸುಮಾರಿಗೆ ಕೊನೆಯುಸಿರೆಳೆದರೆ, ಶ್ವೇತಾ ಮಂಗಳವಾರ ಬೆಳಗಿನ ಜಾವ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಮಗುವನ್ನು ಸಂಬಂಧಿಗಳ ಮನೆಯಲ್ಲಿ ಬಿಟ್ಟು ಬಂದು ಸಾವಿಗೆ ಶರಣಾದ ದಂಪತಿ
ಘಟನೆ ನಡೆದ ದಿನ ಬೆಳಗ್ಗೆ ಅಜಿತ್ ತಮ್ಮ ಎರಡು ವರ್ಷದ ಮಗುವನ್ನು ತನ್ನ ಸಹೋದರಿಯ ಮನೆಯಲ್ಲಿ ಬಿಟ್ಟು ಬಂದಿದ್ದರು. ತಾವು ಕೆಲವು ಕಡೆ ಹೋಗಬೇಕಿದ್ದು,ಹೋಗಿ ಬಂದ ನಂತರ ಸಂಜೆ ಮಗುವನ್ನು ಕರೆದುಕೊಂಡು ಹೋಗುವುದಾಗಿ ಅಜಿತ್ ತಮ್ಮ ಸೋದರಿಯ ಬಳಿ ಹೇಳಿದ್ದರು ಎಂದು ಅವರ ಸಹೋದರಿ ತಿಳಿಸಿದ್ದಾರೆ. ಅಜಿತ್ ಅವರ ತಾಯಿ ಶರ್ಮಿಳಾ ಸ್ಥಳೀಯ ಬೊಂಡದ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಅವರು ಕೆಲಸಕ್ಕೆ ತೆರಳಿದ ನಂತರ, ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ದಂಪತಿ ಈ ಕೆಟ್ಟ ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಮೃತ ಶ್ವೇತಾ ಅವರು ವರ್ಕಾಡಿ ಬೇಕರಿ ಜಂಕ್ಷನ್ ಸಮೀಪದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.
ದಂಪತಿ ಇಂತಹ ನಿರ್ಧಾರ ಕೈಗೊಳ್ಳುವುದಕ್ಕೆ ಆರ್ಥಿಕ ಸಂಕಷ್ಟವೇ ಕಾರಣವಿರಬಹುದು ಎಂದು ಅರಿಮಳ ವಾರ್ಡ್ ಸದಸ್ಯೆಯೊಬ್ಬರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ, ಮಂಜೇಶ್ವರ ಪೊಲೀಸರು ದಂಪತಿ ಸಾವಿಗೆ ನಿಖರ ಕಾರಣ ಏನು ಎಂಬುದನ್ನು ಖಚಿತಪಡಿಸಿಲ್ಲ. ನಮ್ಮ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ಲಭ್ಯವಾದ ನಂತರ ನಿಖರ ಕಾರಣ ತಿಳಿಯಲಿದೆ ಎಂದು ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆಅಜಿತ್ ಅವರ ಭಾವಮೈದುನ ಮಾತನಾಡಿ, ಕುಟುಂಬದ ಅಗತ್ಯಕ್ಕಾಗಿ ಸಹಕಾರಿ ಬ್ಯಾಂಕ್ನಿಂದ ಪಡೆದ ಒಂದು ಸಾಲದ ಬಗ್ಗೆ ಮಾತ್ರ ನನಗೆ ತಿಳಿದಿದೆ. ಆ ಸಾಲವನ್ನು ಅಜಿತ್, ಅವರ ಸಹೋದರಿ ಮತ್ತು ತಾಯಿ ಪ್ರತಿ ತಿಂಗಳು ಯಾವುದೇ ಲೋಪವಿಲ್ಲದೆ ಮರುಪಾವತಿ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ದಂಪತಿಯ ಸಾವಿಗೆ ನಿಖರ ಕಾರಣ ಏನೆಂಬುದು ಪೊಲೀಸರ ತನಿಖೆಯ ನಂತರವೇ ಹೊರಬೀಳಲಿದೆ