ಮದುವೆಗೂ ಮುನ್ನ ಜನಿಸಿದ ಕಂದನನ್ನು ಅನಾಥಾಶ್ರಮದ ಮುಂದೆ ಬಿಟ್ಟುಹೋದ ಜೋಡಿ: ಪೋಷಕರ ಪತ್ತೆ

ಮುಂಬೈ: ಮದುವೆಗೂ ಮುನ್ನ ಜನಿಸಿದ ಕಂದನನ್ನು ಅನಾಥಾಶ್ರಮದ ಮುಂದೆ ಬಿಟ್ಟುಹೋದ ಜೋಡಿ: ಪೋಷಕರ ಪತ್ತೆಮದುವೆಯಾಗಿ ಮಕ್ಕಳಿಲ್ಲದವರದ್ದು ಮಕ್ಕಳಿಲ್ಲ ಎಂದು ಗೋಳಾದರೆ ಮಕ್ಕಳಿರುವ ಪೋಷಕರದ್ದು ಮಕ್ಕಳ ಸಾಕಲಾಗುತ್ತಿಲ್ಲ ಎಂಬ ಗೋಳು. ಹೀಗಿರುವಾಗ ಮದುವೆಯಾಗದೇ ಮಕ್ಕಳಾದ ಜೋಡಿಯೊಂದು ಸಮಾಜ ನಮ್ಮನ್ನೆಲ್ಲಿ ಕಳಂಕಿತರೆಂದು ಭಾವಿಸುವುದೋ ಎಂದು ತಮಗೆ ಜನಿಸಿದ ಪುಟ್ಟ ಕಂದನನ್ನು ಕ್ಷಮಿಸಿಬಿಡು ಕಂದ ಎಂದು ಬರೆದು ಅನಾಥಾಶ್ರಮವೊಂದರ ಮುಂದೆ ಬಿಟ್ಟು ಹೋದಂತಹ ಮನಕಲುಕುವ ಘಟನೆ ಮುಂಬೈನಲ್ಲಿ ನಡೆದಿದೆ.

ಮುಂಬೈನ ಪನ್ವೇಲ್‌ನ ಅನಾಥಾಶ್ರಮದ ಹೊರಗಿನ ಪಾದಚಾರಿ ಮಾರ್ಗದಲ್ಲಿ ಶನಿವಾರ ಬೆಳಗ್ಗೆ ನವಜಾತ ಶಿಶವೊಂದು ಪತ್ತೆಯಾಗಿತ್ತು. ಈ ಮಗುವನ್ನು ಕಂಬಳಿಯಲ್ಲಿ ಸುತ್ತಿ ಪ್ಲಾಸ್ಟಿಕ್ ಬುಟ್ಟಿಯಲ್ಲಿ ಇಡಲಾಗಿತ್ತು. ಅದರಲ್ಲಿ ಮಗುವಿನ ಆಹಾರ, ಹಾಲಿನ ಬಾಟಲ್ ಹಾಗೂ ಮಗುವಿನ ಬಟ್ಟೆಗಳಿದ್ದವು. ಇದೇ ಬುಟ್ಟಿಯಲ್ಲಿ ಇಂಗ್ಲೀಷ್‌ನಲ್ಲಿ ಬರೆಯಲಾದ ಒಂದು ಪುಟ್ಟ ಭಾವುಕ ಪತ್ರವೂ ಇತ್ತು. ನಿನ್ನನ್ನು ತ್ಯಜಿಸಿ ಹೋಗುತ್ತಿರುವುದಕ್ಕೆ ಕ್ಷಮಿಸಿ ಬಿಡು ಕಂದ ಎಂದು ಆ ಪತ್ರದಲ್ಲಿ ಬರೆಯಲಾಗಿತ್ತು. ತಾವು ನಿನ್ನನ್ನು ಸಾಕಲು ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಅಶಕ್ತರಾಗಿದ್ದೇವೆ. ತಾವು ನಿನ್ನ ಸಮೀಪದಲ್ಲೇ ಇದ್ದು, ಬಹುಶಃ ಒಂದು ದಿನ ನಾವು ಬಂದು ನಿನ್ನನ್ನು ಕರೆದೊಯ್ಯಬಹುದು. ಈಗ ನಿನ್ನ ಇಲ್ಲಿ ಬಿಟ್ಟು ಹೋಗುತ್ತಿರುವುದಕ್ಕೆ ದಯವಿಟ್ಟು ಕ್ಷಮಿಸು ಎಂದು ಅವರು ಆ ಪತ್ರದಲ್ಲಿ ಅವರು ಬರೆದಿದ್ದರು.
ಪ್ರಸ್ತುತ ಈ ಮಗುವನ್ನು ಅಲಿಬಾಗ್‌ನ ವಾಸ್ತಲ್ಯ ಚಾರಿಟೇಬಲ್ ಟ್ರಸ್ಟ್‌ನಲ್ಲಿ ಸಿಬ್ಬಂದಿಗಳ ಆರೈಕೆಯಲ್ಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪನ್ವೇಲ್ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು.

ಮಗುವಿನ ಜೈವಿಕ ಪೋಷಕರ ಪತ್ತೆ ಮಾಡಿದ ಪೊಲೀಸರು
ಈ ಘಟನೆಯ ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಲವು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ನಂತರ ಭಾನುವಾರ ಈ ಮಗುವಿನ ಜೈವಿಕ ಪೊಲೀಸರನ್ನು ಪೋಷಕರು ಪತ್ತೆ ಮಾಡಿದ್ದಾರೆ. ಪೊಲೀಸರು ಮಗುವಿನ ತಂದೆಯನ್ನು ಬಿವಂಡಿ ನಿವಾಸಿ 23 ವರ್ಷದ ಅಮನ್ ಕೊಂಡ್ಕರ್ ಎಂದು ಗುರುತಿಸಿದ್ದಾರೆ. ಆತ ಇಂಜಿನಿಯರಿಂಗ್ ಓದಿದ್ದು, ನಿರುದ್ಯೋಗಿಯಾಗಿದ್ದ. ಈತ ಮುಂಬ್ರಾದಲ್ಲಿರುವ ತನ್ನ ದೂರದ ಸಂಬಂಧಿ 20 ವರ್ಷದ ಯುವತಿಯನ್ನು ಪ್ರೀತಿಸುತ್ತಿದ್ದ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಈ ಜೋಡಿಯ ಪ್ರೀತಿಗೆ ಅವರ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಇತ್ತ ಯುವತಿ ಗರ್ಭಿಣಿಯಾಗಿದ್ದು, ಮುಂಬ್ರಾದ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಮಗು ಜನಿಸಿದ ಖಾಸಗಿ ಆಸ್ಪತ್ರೆಯಲ್ಲಿ ಈ ಜೋಡಿ ತಾವು ಮದುವೆಯಾಗಿದ್ದೇವೆ ಎಂದು ಹೇಳಿಕೊಂಡಿದ್ದರು ಎಂದು ಸಹಾಯಕ ಪೊಲೀಸ್ ಆಯುಕ್ತ ಅಜಯ್ ಲ್ಯಾಂಡ್ಗೆ ಹೇಳಿದ್ದರು.
ಈ ಜೋಡಿ ಕಾರಿನಲ್ಲಿ ಸ್ಥಳಕ್ಕೆ ಬಂದಿದ್ದರು. ಹೀಗಾಗಿ ಆ ವಾಹನದ ನೋಂದಣಿ ಸಂಖ್ಯೆಯನ್ನು ನೋಡಿ ಪೊಲೀಸರಿಗೆ ಅವರನ್ನು ಪತ್ತೆ ಮಾಡುವುದಕ್ಕೆ ಸಹಾಯವಾಗಿದೆ. ಹಾಗೆಯೇ ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳು ಕೂಡ ಪೊಲೀಸರಿಗೆ ದಂಪತಿಗಳ ಮೇಲೆ ಕಣ್ಣಿಡಲು ಸಹಾಯ ಮಾಡಿದ್ದವು. ಒಂದು ಸಿಸಿಟಿವಿಯಲ್ಲಿ ಬುರ್ಖಾ ಧರಿಸಿದ್ದ ಮಹಿಳೆಯೊಬ್ಬಳು ಪ್ಲಾಸ್ಟಿಕ್ ಬುಟ್ಟಿಯಲ್ಲಿ ಮಗುವನ್ನು ಎತ್ತಿಕೊಂಡು ಸ್ವಪ್ನಲೆ ಬಾಲಕಿಯರ ಅನಾಥಾಶ್ರಮದ ಹೊರಗಿನ ಪಾದಚಾರಿ ಮಾರ್ಗದಲ್ಲಿ ಮಗುವಿದ್ದ ಬುಟ್ಟಿಯನ್ನು ಇಟ್ಟು ಹೋಗುವುದು ರೆಕಾರ್ಡ್ ಆಗಿತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಸ್ತುತ ಮಗುವನ್ನು ದತ್ತಿ ಸಂಸ್ಥೆಯೊಂದು ನೋಡಿಕೊಳ್ಳುತ್ತಿದೆ. ಈ ಮಗುವನ್ನು ಪೋಷಕರಿಗೆ ಹಸ್ತಾಂತರಿಸಬೇಕೆ ಬೇಡವೇ ಎಂಬ ಬಗ್ಗೆ ರಾಜ್ಯ ಮಕ್ಕಳ ಕಲ್ಯಾಣ ಸಮಿತಿ ನಿರ್ಧರಿಸಲಿದೆ. ತನ್ನ ಈ ಕೃತ್ಯಕ್ಕೆ ಪಶ್ಚಾತಾಪ ಪಟ್ಟು ಮಗುವನ್ನು ಮರುದಿನ ಮರಳಿ ತರಲು ನಿರ್ಧರಿಸಿದ್ದಾಗಿ ಮಹಿಳೆ ಹೇಳಿಕೊಂಡಿದ್ದಾಳೆ. ಈ ಜೋಡಿ ಮದುವೆಯಾಗಿದ್ದಾರೋ ಇಲ್ಲವೋ ಎಂಬುದನ್ನು ಇನ್ನಷ್ಟೇ ಖಚಿತಪಡಿಸಿಕೊಳ್ಳಬೇಕಿದೆ ಎಂದು ಪನ್ವೇಲ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ನಿತಿನ್ ಠಾಕರೆ ಹೇಳಿದ್ದಾರೆ.
ಮಗುವನ್ನು ಹೀಗೆ ತ್ಯಜಿಸಿದ್ದಕ್ಕಾಗಿ ಈ ಜೋಡಿ ವಿರುದ್ಧ ಕೇಸ್ ದಾಖಲಾಗಿದ್ದು, ಬಂಧಿಸಿಲ್ಲ, ಆದರೆ ತನಿಖೆಯಲ್ಲಿ ಭಾಗವಹಿಸುವಂತೆ ನೋಟೀಸ್ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಬಗ್ಗೆ ಮನೋವೈದ್ಯೆ ಡಾ ಪ್ರಿಯಾಂಕಾ ಮಹಾರಾಜ್ ಮಾತನಾಡಿ, ಮದುವೆಗೂ ಮೊದಲು ಮಗು ಜನಿಸಿದ್ದರೆ, ಕಳಂಕಿತಳು ಎಂಬ ಸಮಾಜದ ಕೆಟ್ಟ ದೃಷ್ಟಿಗೆ ಒಳಗಾಗುವ ಆಕೆಗೆ ಆ ಕಳಂಕದಿಂದ ಮುಕ್ತಳಾಗಬೇಕಾದ ಅಪಾರ ಸಾಮಾಜಿಕ ಒತ್ತಡವಿರುತ್ತದೆ. ಇತ್ತ ತಾಯಿ ಹಾಗೂ ಮಗುವಿನ ನಡುವಿನ ನೈಸರ್ಗಿಕ ಬಾಂಧವ್ಯದಿಂದಾಗಿ ತಾಯಿಗೆ ಅಪರಾಧ ಪ್ರಜ್ಞೆ ಮತ್ತು ಪಶ್ಚಾತಾಪ ಉಂಟಾಗುತ್ತದೆ ಎಂದು ಡಾ. ಮಹಾಜನ್ ಹೇಳಿದ್ದಾರೆ.
