ಮಳೆಯ ನಡುವೆ ಮನೆಗೆ ಹೋಗಲು ಮಿನಿ ಟ್ರಕ್ ಬುಕ್ ಮಾಡಿದ ಕಾರ್ಪೊರೇಟ್ ಉದ್ಯೋಗಿಗಳು: ವೈರಲ್ ವಿಡಿಯೋ

ಬೆಂಗಳೂರು: ಇನ್ನೇನು ಆಫೀಸ್ ಕೆಲಸ ಮುಗಿಸಿ ಮನೆಗೆ ಹೊರಡಲು ಬ್ಯಾಗ್ ಪ್ಯಾಕ್ ಮಾಡ್ಬೇಕು ಅಷ್ಟರಲ್ಲಿ ಎಲ್ಲೂ ಇಲ್ಲದ ಮಳೆ ಜೋರಾಗಿ ಸುರಿಯಲು ಶುರುವಾಗುತ್ತದೆ. ಕೈಯಲ್ಲಿ ಛತ್ರಿ ಇರಲ್ಲ, ಲ್ಯಾಪ್‌ಟಾಪ್, ಫೋನ್, ಟ್ಯಾಬ್ ಮುಂತಾದ ಇಲೆಕ್ಟ್ರಿಕ್ ವಸ್ತುಗಳಿರುವ ಬ್ಯಾಗನ್ನು ಎತ್ತಿಕೊಂಡು ಸುರಿಯುತ್ತಿರುವ ಮಳೆಯ ಮಧ್ಯೆ ಆಗಿದ್ದಾಗಲಿ ಅಂತ ಹೋಗುವುದಕ್ಕೂ ಆಗುವುದಿಲ್ಲ, ಏಕೆಂದರೆ ನೀರು ಸಮೀಪ ಸುಳಿದರೂ ಈ ಇಲೆಕ್ಟ್ರಿಕ್ ವಸ್ತುಗಳು ಕೆಲಸ ನಿಲ್ಲಿಸಿ ಬಿಡುತ್ತವೆ. ಲ್ಯಾಪ್‌ಟಾಪ್ ಕಚೇರಿಯದ್ದಾಗಿದ್ದಾರೆ ದಂಡ ಕಟ್ಟಲು ಸಿದ್ಧರಾಗಿರಬೇಕಾಗುತ್ತದೆ.

ಮಳೆಯ ಹನಿ ನೆಲಕ್ಕೆ ಬೀಳುತ್ತಿದ್ದಂತೆ ದುಬಾರಿಯಾಗುವ ಓಲಾ, ಉಬರ್:
ಮತ್ತೊಂದೆಡೆ ಆಟೋ ಕ್ಯಾಬ್ ಮಾಡಿ ಹೋಗೋಣ ಎಂದರೆ ಒಂದೇ ಒಂದು ಆಟೋ ಆಗಲಿ ಕ್ಯಾಬ್ ಆಗಲಿ ಆ ಕ್ಷಣಕ್ಕೆ ಕೈಗೆ ಸಿಗಲ್ಲ, ಸಿಕ್ಕಿದರೂ ಒಂದು ವೇಳೆ ದುಬಾರಿ ಹಣ ಪಾವತಿ ಮಾಡಬೇಕಾಗುತ್ತದೆ. ಆಟೋ ಚಾಲಕರಂತೂ ತಲೆಯ ಮೇಲೆ ದರ ಹೇಳುತ್ತಾರೆ. ಇಂತಹ ಅನುಭವ ನಿಮಗೂ ಆಗಿರಬಹುದು. ಹೀಗಿರುವಾಗ ಇಲ್ಲೊಂದು ಕಡೆ ಕಚೇರಿ ಉದ್ಯೋಗಿಗಳೆಲ್ಲಾ ಸೇರಿ ಈ ಮಳೆಯ ಮಧ್ಯೆ ಉಕ್ಕಿ ಹರಿಯುತ್ತಿರುವ ನೀರಿನ ನಡುವೆ ಸುರಕ್ಷಿತವಾಗಿ ಮನೆ ತಲುಪಲು ಹೊಸ ಐಡಿಯಾ ಕಂಡು ಹಿಡಿದಿದ್ದರೆ, ಅದೇನು ದೋಣಿ ತಂದ್ರಾ ಅಂತ ಅಚ್ಚರಿ ಆಗ್ಬೇಡಿ ಎಲ್ಲಾ ಉದ್ಯೋಗಿಗಳು ಸೇರಿ ಮಿನಿ ಟ್ರಕ್ ಬುಕ್ ಮಾಡಿದ್ದಾರೆ ಅದರಲ್ಲಿ ಎಲ್ಲರೂ ಹತ್ತಿ ಮನೆ ತಲುಪಿಸಿದ್ದಾರೆ. ಇದರ ಫೋಟೋ ವೀಡಿಯೋಗಳನ್ನು ಉದ್ಯೋಗಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ.
ಮಳೆಯ ಮಧ್ಯೆ ಮನೆಗೆ ಹೋಗಲು ಮಿನಿಟ್ರಕ್ ಬುಕ್ ಮಾಡಿದ ಉದ್ಯೋಗಿಗಳು:
ಅಂದಹಾಗೆ ಈ ಘಟನೆ ನಡೆದಿರುವುದು ರಾಷ್ಟ್ರ ರಾಜಧಾನಿಗೆ ಸಮೀಪದ ಗುರುಗ್ರಾಮದಲ್ಲಿ. ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್‌ನಲ್ಲಿ @GargiRawat ಎಂಬುವವರು ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. 33 ಸೆಕೆಂಡ್‌ನ ವೀಡಿಯೋದಲ್ಲಿ ಮಿನಿ ಟ್ರಕ್ಕೊಂದು ಕಚೇರಿ ಆವರಣಕ್ಕೆ ಬಂದಿದ್ದು, ಅದರಲ್ಲಿ ಎಲ್ಲಾ ಉದ್ಯೋಗಿಗಳು ಹತ್ತಿಕೊಂಡು ಹೊರಟು ಹೋಗುವುದನ್ನು ಕಾಣಬಹುದಾಗಿದೆ. ಗುರುಗ್ರಾಮ್‌ನ ಯುವ ಕಾರ್ಪೊರೇಟ್‌ಗಳ ಗುಂಪೊಂದು ಮಳೆಯ ಮಧ್ಯೆ ಮನೆಗೆ ಹೋಗುವುದಕ್ಕೆ ಮಿನಿ ಟ್ರಕ್ ಅನ್ನು ಬಾಡಿಗೆಗೆ ಪಡೆದಿದೆ. ಇದು ಸುರಕ್ಷಿತ ಆಯ್ಕೆಯಲ್ಲ ಆದರೆ ಉಬರ್/ಓಲಾ/ರಾಪಿಡೋ ಲಭ್ಯವಿಲ್ಲದ ಈ ಸಮಯದಲ್ಲಿ ಅಥವಾ ತುಂಬಾ ದುಬಾರಿಯಾಗಿದ್ದ ವೇಳೆ ಅವರು ಟ್ರಕ್ ಬುಕ್ ಮಾಡಿದರು. ಇವರಿಗೆ ಯಾರೋ ‘ಕಾರ್ಪೊರೇಟ್ ಕೂಲಿಗಳು’ ಎಂದು ಕಾಮೆಂಟ್ ಮಾಡಿದ್ದಾರೆ. ಹೈಲೆವೆಲ್ ಕಾರ್ಪೊರೇಟ್ ಕೇಂದ್ರದ ದುಃಸ್ಥಿತಿ ಎಂದು ಬರೆದುಕೊಂಡಿದ್ದಾರೆ. ಈ ವೀಡಿಯೋವನ್ನು 6 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
ನೆಟ್ಟಿಗರಿಂದ ಹಾಸ್ಯಮಯ ಕಾಮೆಂಟ್: ಟ್ರ್ಯಾಕ್ಟರ್ ಬೆಸ್ಟ್ ಎಂದ ನೆಟ್ಟಿಗ
ಈ ವೀಡಿಯೋ ನೋಡಿದ ಹಲವರು ಕಾಮೆಂಟ್ ಮಾಡಿದ್ದಾರೆ. ಈ ಎಲ್ಲಾ ಅವ್ಯವಸ್ಥೆಯಲ್ಲಿ ಟ್ರ್ಯಾಕ್ಟರ್‌ಗಳು ಬೆಸ್ಟ್, ತುಂಬಾ ಅಗ್ಗವಾಗಿದ್ದು, ತುಂಬಾ ಬಲಿಷ್ಠವಾಗಿವೆ., ಕೆಟ್ಟದಾದ ರಸ್ತೆಯಲ್ಲಿ, ಮಣ್ಣು ಮತ್ತು ಕೆಸರಿನ ರಸ್ತೆಯಲ್ಲಿ ಇದು ಸಾಗುತ್ತದೆ. ಸರ್ಕಾರ ಇದಕ್ಕೆ ಸಬ್ಸಿಡಿ ನೀಡುತ್ತದೆ ಮತ್ತು ಅದರ ಟ್ರಾಲಿಯಲ್ಲಿ 30 ಜನರನ್ನು ಸಾಗಿಸಬಹುದು ಎಂದು ಒಬ್ಬರು ಹಾಸ್ಯಮಯವಾಗಿ ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಒಬ್ಬರು ಇದು ತಮಾಷೆಯಲ್ಲ ಬಹುಶಃ ಅವುಗಳನ್ನು ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ ಇಟ್ಟಿರಬಹುದು ಎಂದು ಹೇಳಿದ್ದಾರೆ. ನಮ್ಮ ಪ್ಲಂಬರ್ ನಮ್ಮ ಸ್ಥಳದಲ್ಲಿ ಕ್ಯಾಬ್ ಲಭ್ಯವಿಲ್ಲದೆ ಸಿಲುಕಿಕೊಂಡರು. ಆದ್ದರಿಂದ, ನಮ್ಮ ಗುತ್ತಿಗೆದಾರ ಕೂಡ ಪೋರ್ಟರ್ ಮೂಲಕ ಅವರಿಗೆ ಟ್ರಕ್ ಬುಕ್ ಮಾಡಿದರು. ಆದರೆ ಅದು ಕೂಡ ರದ್ದಾಯ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಗುರುಗ್ರಾಮದ ಅವ್ಯವಸ್ಥೆಯ ಬಗ್ಗೆ ಮಾತನಾಡಿದ್ದು, ಪೇಪರ್‌ಗಳ ಮೇಲಷ್ಟೇ ಸ್ಮಾರ್ಟ್‌ಸಿಟಿ, ವಾಸ್ತವದಲ್ಲಿ ಇದೊಂದು ಮುಳುಗುವ ಸಿಟಿ ಎಂದು ಟೀಕಿಸಿದ್ದಾರೆ. ಮತ್ತೆ ಕೆಲವು ಕಾರ್ಪೋರೇಟ್ ಕೂಲಿಯಾಳುಗಳು ಎಂದು ಕರೆದಿದ್ದಾರೆ.
ಸಾಮಾನ್ಯವಾಗಿ ಹಳ್ಳಿಗಳ ಕಡೆ ಸರಿಯಾದ ಸಂಪರ್ಕ ಸಾರಿಗೆಗಳಿರುವುದಿಲ್ಲ, ಈ ವೇಳೆ ಕೆಲಸದ ಗುತ್ತಿಗೆ ಪಡೆದ ಗುತ್ತಿಗೆದಾರ ಕೂಲಿಯಾಳುಗಳನ್ನು ತನ್ನ ಟ್ರ್ಯಾಕ್ಟರ್ ಅಥವಾ ಮಹೀಂದ್ರಾ ಮಿನಿ ಮಾರಿಯಲ್ಲಿ ಕರೆದುಕೊಂಡು ಹೋಗುತ್ತಾರೆ. ಆದರೆ ಇಲ್ಲಿ ಸಾಫ್ಟ್‌ವೇರ್ ಉದ್ಯೋಗಿಗಳನ್ನು ಹೀಗೆ ಕರೆದುಕೊಂಡು ಹೋಗಿರುವುದನ್ನು ನೋಡಿದ ಅನೇಕರಿಗೆ ಹಳ್ಳಿ ಆ ಲೈಫ್ ಕಣ್ಣ ಮುಂದೆ ಹಾದು ಹೋದಂತಾಗಿದೆ. ಈ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ…
