ಮತ್ತೆ ಸದ್ದುಮಾಡುತ್ತಿರುವ ಕೊರೊನಾ: ಹೊಸಕೋಟೆಯಲ್ಲಿ 9 ತಿಂಗಳ ಮಗು ಪಾಸಿಟಿವ್

ಬೆಂಗಳೂರು: ನಾಲ್ಕು ವರ್ಷಗಳ ಹಿಂದೆ ಭಾರೀ ಪರಿಣಾಮ ಬೀರಿದ್ದ ಮಾರಕ ಕೊರೊನಾ ವೈರಸ್ ಈಗ ಮತ್ತೊಮ್ಮೆ ಸದ್ದು ಮಾಡುತ್ತಿದೆ. ದೇಶದ ಹಲವೆಡೆ ಮೇ ತಿಂಗಳಿನಲ್ಲಿ ಕೊರೊನಾ ದೃಢಪಟ್ಟ ಹಲವಾರು ಪ್ರಕರಣಗಳು ಕೇಳಿರುತ್ತಿದ್ದು, ನಗರದಲ್ಲೂ ಸಹ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿವೆ.
ಇಂದು ( ಮೇ 23 ) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ 9 ತಿಂಗಳ ಮಗುವಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ನಗರದ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಈ ಪ್ರಕರಣ ದೃಢಪಟ್ಟಿದ್ದು, ಇದರ ಬೆನ್ನಲ್ಲೇ ಹೊಸಕೋಟೆ ಆರೋಗ್ಯಾಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ.
ಇನ್ನು ಮೇ ತಿಂಗಳೊಂದರಲ್ಲಿಯೇ ರಾಜ್ಯದಲ್ಲಿ ಒಟ್ಟು 33 ಪ್ರಕರಣಗಳು ದಾಖಲಾಗಿದ್ದು, ಜನರಲ್ಲಿ ಈ ಸಂಖ್ಯೆ ತುಸು ಆತಂಕ ಹೆಚ್ಚಿಸಿದೆ. ಆದರೆ ಜನರು ಇದಕ್ಕೆ ಯಾವುದೇ ಭಯ ಪಡಬೇಕಾದ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಜನವರಿಯಲ್ಲಿ ಕೇವಲ 3 ಪ್ರಕರಣಗಳು ಬೆಳಕಿಗೆ ಬಂದರೆ, ಫೆಬ್ರವರಿಯಲ್ಲಿ 1, ಮಾರ್ಚ್ನಲ್ಲಿ 3, ಏಪ್ರಿಲ್ನಲ್ಲಿ 3 ಹಾಗೂ ಈ ತಿಂಗಳು ಇಲ್ಲಿಯವರೆಗೆ 33 ಪ್ರಕರಣಗಳು ರಾಜ್ಯದಲ್ಲಿ ಕಂಡುಬಂದಿವೆ.