🛑 ‘ವಿಬಿ-ಜಿ ರಾಮ್ ಜಿ’ ಮಸೂದೆ ಗ್ರಾಮೀಣ ಕಾರ್ಮಿಕರಿಗೆ ಬಗೆಯುವ ದ್ರೋಹ: ಕೇಂದ್ರದ ಹೊಸ ಕಾನೂನಿನ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ ತೀವ್ರ ಆಕ್ರೋಶ

ದೆಹಲಿ : ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಮಂಡಿಸಿರುವ ‘ವಿಕಸಿತ್ ಭಾರತ್-ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಮಸೂದೆ 2025’ (VB–G RAM G Bill) ಅತ್ಯಂತ ಕೆಟ್ಟ ಶಾಸನವಾಗಿದ್ದು, ಇದು ಗ್ರಾಮೀಣ ಕಾರ್ಮಿಕರು ಮತ್ತು ರೈತ ಕುಟುಂಬಗಳಿಗೆ ಮಾಡುವ ದೊಡ್ಡ ದ್ರೋಹ ಎಂದು ಸಂಯುಕ್ತ ಕಿಸಾನ್ ಮೋರ್ಚಾ (SKM) ತೀವ್ರವಾಗಿ ಖಂಡಿಸಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (MGNREGA) ಹಂತಹಂತವಾಗಿ ರದ್ದುಗೊಳಿಸಿ, ಅದರ ಮೂಲಕ ಜನರಿಗಿದ್ದ ಶಾಸನಬದ್ಧ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳಲು ಈ ಹೊಸ ಮಸೂದೆಯನ್ನು ತರಲಾಗಿದೆ ಎಂದು ಆರೋಪಿಸಿರುವ ರೈತ ಸಂಘಟನೆಗಳ ಒಕ್ಕೂಟವು, ಈ ಕ್ರಮವು ಮಹಿಳೆಯರು, ದಲಿತರು ಮತ್ತು ಆದಿವಾಸಿಗಳ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದೆ.


ನರೇಗಾ ಯೋಜನೆಯು ಕೇವಲ ಉದ್ಯೋಗ ನೀಡುವ ಯೋಜನೆಯಾಗಿರದೆ ಗ್ರಾಮೀಣ ಮೂಲಸೌಕರ್ಯಾಭಿವೃದ್ಧಿಯ ಆಧಾರಸ್ತಂಭವಾಗಿತ್ತು, ಆದರೆ ಹೊಸ ಮಸೂದೆಯು ಅದನ್ನು ಕಾರ್ಪೊರೇಟ್ ಕಂಪನಿಗಳ ಹಿತಾಸಕ್ತಿಗೆ ಪೂರಕವಾದ ಸರ್ಕಾರಿ ಹೂಡಿಕೆ ಚಾಲಿತ ಕಾರ್ಯಕ್ರಮವನ್ನಾಗಿ ಪರಿವರ್ತಿಸುತ್ತಿದೆ ಎಂದು ಟೀಕಿಸಿರುವ ಎಸ್‌ಕೆಎಂ, ನರೇಗಾವನ್ನು ರಕ್ಷಿಸಲು ವರ್ಷಕ್ಕೆ 200 ದಿನಗಳ ಕೆಲಸ ಮತ್ತು ದಿನಕ್ಕೆ ಕನಿಷ್ಠ 700 ರೂ. ವೇತನ ನೀಡುವಂತೆ ತಿದ್ದುಪಡಿ ತರಬೇಕೆಂದು ಒತ್ತಾಯಿಸುವುದರ ಜೊತೆಗೆ, ಈ ಜನವಿರೋಧಿ ಮಸೂದೆಯ ವಿರುದ್ಧ ಒಗ್ಗೂಡಿ ಹೋರಾಡುವಂತೆ ದೇಶದ ಕಾರ್ಮಿಕರು ಹಾಗೂ ಯುವಜನತೆಗೆ ಕರೆ ನೀಡಿದೆ.

