ಇರಾನ್ ವಿರುದ್ಧ ಎನ್‌ಡಿಟಿವಿ ಹಿರಿಯ ಸಂಪಾದಕರ ವಿವಾದಾತ್ಮಕ ಟ್ವೀಟ್: ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ

ಹೊಸದಿಲ್ಲಿ: NDTV ಹಿರಿಯ ಸಂಪಾದಕ ಆದಿತ್ಯ ರಾಜ್ ಕೌಲ್ ಅವರು ಇರಾನ್ “ಭಯೋತ್ಪಾದಕ ಆಡಳಿತ” ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೆ ಅವರು ತಮ್ಮ ಪೋಸ್ಟ್ ಅನ್ನು ಡಿಲಿಟ್ ಮಾಡಿದ್ದಾರೆ.
ಆದಿತ್ಯ ರಾಜ್ ಕೌಲ್ ಅವರು ಇರಾನ್ ಸರಕಾರವನ್ನು “ಭಯೋತ್ಪಾದಕ ಆಡಳಿತ” ಎಂದು ತಮ್ಮ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದರು. ಇರಾನ್ ಮೇಲೆ ಇಸ್ರೇಲ್-ಅಮೆರಿಕ ಜಂಟಿ ದಾಳಿ ಮತ್ತು ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಅವರ ಈ ಪೋಸ್ಟ್ ವ್ಯಾಪಕವಾಗಿ ಚರ್ಚೆಗೆ ಕಾರಣವಾಗಿದೆ.

ಈ ಪೋಸ್ಟ್ ಬಗ್ಗೆ ರಾಜಕಾರಣಿಗಳು, ಪತ್ರಕರ್ತರು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಟೀಕೆಯನ್ನು ವ್ಯಕ್ತಪಡಿಸಿದ್ದು, ಮುಖ್ಯವಾಹಿನಿ ಮಾಧ್ಯಮವೊಂದರ ಸಂಪಾದಕರೊಬ್ಬರು ಬಳಸಿದ ಭಾಷೆ ವರದಿಗಾರಿಕೆ ಮತ್ತು ರಾಜಕೀಯ ವಕಾಲತ್ತು ನಡುವಿನ ಗೆರೆಯನ್ನು ದಾಟಿದೆ ಎಂದು ಟೀಕಿಸಿದ್ದಾರೆ.
ಟೀಕೆ ಬೆನ್ನಲ್ಲೆ ಕೌಲ್ ಅವರು ತನ್ನ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ. ಆದರೆ ಪೋಸ್ಟ್ ಕುರಿತ ಸ್ಟೀನ್ ಶಾಟ್ ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಪತ್ರಿಕೋದ್ಯಮದಲ್ಲಿನ ವೃತ್ತಿಪರ ಮಾನದಂಡಗಳು ಮತ್ತು ಸುದ್ದಿಯನ್ನು ರೂಪಿಸುವಲ್ಲಿ ಸಾಮಾಜಿಕ ಜಾಲತಾಣಗಳ ಹೆಚ್ಚುತ್ತಿರುವ ಪಾತ್ರದ ಬಗ್ಗೆ ಚರ್ಚೆ ನಡೆದಿದೆ.
ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿದ ಲೇಖಕ ಸಲ್ಮಾನ್ ಅನೀಸ್ ಸೋಝ್, ಎನ್‌ಡಿಟಿವಿ ಸಂಪಾದಕರು ಬಳಸಿದ ಭಾಷೆ ಬಗ್ಗೆ ಟೀಕಿಸಿದ್ದಾರೆ. “ಭಾರತದ ಪ್ರಮುಖ ಸುದ್ದಿ ಸಂಸ್ಥೆಯ ಹಿರಿಯ ಸಂಪಾದಕರೊಬ್ಬರು ಭಾರತವು ರಾಜತಾಂತ್ರಿಕ ಸಂಬಂಧ ಹೊಂದಿರುವ ದೇಶದ ಸರಕಾರವನ್ನು ‘ಭಯೋತ್ಪಾದಕ ಆಡಳಿತ’ ಎಂದು ಬಣ್ಣಿಸಿರುವುದು ಆಘಾತಕಾರಿಯಾಗಿದೆ. ಯುದ್ಧದ ಕುರಿತು ಪತ್ರಕರ್ತರು ವರದಿ ಮಾಡಬೇಕು. ಆದರೆ ಒಂದು ಪಕ್ಷದ ವಕ್ತಾರರಂತೆ ವರ್ತಿಸಬಾರದು ಎಂದು ಸೋಝ್ ಹೇಳಿದ್ದಾರೆ.
“ಇದು ಪತ್ರಿಕೋದ್ಯಮವಲ್ಲ. ಇದು ಯೋಜಿತ ಪ್ರಚಾರ. ಮುಖ್ಯವಾಹಿನಿ ಸುದ್ದಿ ಸಂಸ್ಥೆಯೊಂದರ ಹಿರಿಯ ಸಂಪಾದಕರೊಬ್ಬರು ಯುದ್ಧಕ್ಕೆ ಸಂಬಂಧಿಸಿ ಒಂದು ಪಕ್ಷದ ನಿರೂಪಣೆಯನ್ನು ಹೇಳುವುದು ಪತ್ರಿಕೋದ್ಯಮ ವೃತ್ತಿಯ ವಿಶ್ವಾಸಾರ್ಹತೆಯನ್ನು ದುರ್ಬಲಗೊಳಿಸುತ್ತದೆ ಮತ್ತೋರ್ವರು ಪ್ರತಿಕ್ರಿಯಿಸಿದ್ದಾರೆ.
“ಭಾರತವು ರಾಜತಾಂತ್ರಿಕ ಸಂಬಂಧ ಹೊಂದಿರುವ ದೇಶದ ಸರಕಾರವನ್ನು ‘ಭಯೋತ್ಪಾದಕ ಆಡಳಿತ’ ಎಂದು ಕರೆಯುವುದು ವರದಿಯಲ್ಲ. ಅದು ವಕಾಲತ್ತು ಎಂದು ಮತ್ತೋರ್ವರು ಬರೆದಿದ್ದಾರೆ.
ಈ ವಿವಾದದ ಹಿನ್ನೆಲೆಯಲ್ಲಿ Karvaan India ಭಾರತದಲ್ಲಿನ ಇರಾನ್ ರಾಯಭಾರ ಕಚೇರಿ ಮತ್ತು ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಹೇಳಿಕೆಗಳು ಮತ್ತು ಇಸ್ರೇಲ್-ಇರಾನ್ ಸಂಘರ್ಷದ ಕುರಿತ ನಿರೂಪಣೆ ಬಗ್ಗೆ ಅಧಿಕೃತ ಪ್ರತಿಕ್ರಿಯೆ ನೀಡುವಂತೆ ಕೋರಿದೆ.
ಈ ಬೆಳವಣಿಗೆ ಮತ್ತೊಮ್ಮೆ ಸಂಘರ್ಷಗಳ ಕುರಿತ ವರದಿಗಾರಿಕೆಯಲ್ಲಿ ಪತ್ರಕರ್ತರ ಹೊಣೆಗಾರಿಕೆ, ಹಾಗೆಯೇ ಯುದ್ಧದಂತಹ ಸೂಕ್ಷ್ಮ ಸಂದರ್ಭಗಳಲ್ಲಿ ವೃತ್ತಿನಿಷ್ಠೆ ನಿಖರತೆ ಮತ್ತು ತಟಸ್ಥತೆಯನ್ನು ಕಾಪಾಡಿಕೊಳ್ಳುವ ಅಗತ್ಯತೆಯ ಬಗ್ಗೆ ಗಮನ ಸೆಳೆದಿದೆ.