ಭಾವನಗರ್ ಶಾಲೆಯಲ್ಲಿ ವಿವಾದಾತ್ಮಕ ನಾಟಕ: ಬುರ್ಖಾಧಾರಿಗಳನ್ನು ಭಯೋತ್ಪಾದಕರಂತೆ ಚಿತ್ರಿಸಿ ಆಕ್ರೋಶ

ಭಾವ್ನಗರ್: ಗುಜರಾತ್ ನ ಭಾವ್ನಗರ್ ನ ಶಾಲೆಯೊಂದರಲ್ಲಿ ನಡೆದಿರುವ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಂದರ್ಭ ಪ್ರದರ್ಶಿಸಲಾದ ನಾಟಕದಲ್ಲಿ ಬುರ್ಖಾಧಾರಿಗಳನ್ನು ಭಯೋತ್ಪಾದಕರಂತೆ ಬಿಂಬಿಸಿದ್ದು, ಇದರ ವಿಡೀಯೋ ವೈರಲ್ ಆಗಿದೆ. ಈ ಸಂಬಂಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಪಹಲ್ಗಾಮ್ ದಾಳಿ ಹಾಗೂ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಆಧರಿಸಿದ್ದ ಈ ನಾಟಕದಲ್ಲಿ ಬಿಳಿ ಸಲ್ವಾರ್ ಕಮೀಝ್ ಹಾಗೂ ಕೇಸರಿ ದುಪಟ್ಟಾ ಧರಿಸಿರುವ ಬಾಲಕಿಯರು ಶಾಂತಿಯುತ ಕಾಶ್ಮೀರವನ್ನು ವರ್ಣಿಸುತ್ತಿರುತ್ತಾರೆ. ಆಗ ಹಿನ್ನೆಲೆಯಲ್ಲಿ ಕಾಶ್ಮೀದರದ ವಿಡಿಯೊ ಪ್ರದರ್ಶನಗೊಳ್ಳುತ್ತಿರುತ್ತದೆ. ಮುಂದಿನ ದೃಶ್ಯದಲ್ಲಿ ಬಂದೂಕು ಹಿಡಿದ ಬುರ್ಖಾಧಾರಿ ಬಾಲಕಿಯರು ಪ್ರವೇಶಿಸುವ ಮೂಲಕ, ಅವರು ಭಯೋತ್ಪಾದಕರು ಎಂಬ ಸುಳಿವನ್ನು ನೀಡುತ್ತಾರೆ. ಬಳಿಕ ಅವರು ಹಾಡುತ್ತಾ, ನರ್ತಿಸುತ್ತಿದ್ದ ಬಾಲಕಿಯರ ಮೇಲೆ ಗುಂಡಿನ ದಾಳಿ ನಡೆಸುವ ಹಾಗೆ ವಿಡಿಯೋದಲ್ಲಿ ಕಂಡುಬಂದಿದೆ.
ಈ ಪ್ರದರ್ಶನದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಬುರ್ಖಾಧಾರಿಗಳನ್ನು ಭಯೋತ್ಪಾದಕರಂತೆ ಚಿತ್ರಿಸಿರುವ ಕುರಿತು ಬಗ್ಗೆ ವ್ಯಾಪಕ ಟೀಕೆ ಹಾಗೂ ಕಳವಳ ವ್ಯಕ್ತವಾಗಿದೆ.
ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಸ್ಪಷ್ಟನೆ ನೀಡಿರುವ ಶಾಲಾ ಪ್ರಾಂಶುಪಾಲ ರಾಜೇಂದ್ರ ದವೆ, “ಈ ಪ್ರದರ್ಶನವು ಪಹಲ್ಗಾಮ್ ದಾಳಿ ಹಾಗೂ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಆಧರಿಸಿತ್ತು. ಈ ಪ್ರದರ್ಶನವನ್ನು ಶಾಲೆಯ ಕನ್ಯಾ ವಿದ್ಯಾಲಯ ವಿಭಾಗದ ವಿದ್ಯಾರ್ಥಿನಿಯರು ನೀಡಿದ್ದರು” ಎಂದು ಹೇಳಿದ್ದಾರೆ.
“ಈ ಪ್ರದರ್ಶನದಲ್ಲಿ ಕೆಲವು ವಿದ್ಯಾರ್ಥಿನಿಯರು ಭಯೋತ್ಪಾದಕರು, ಕೆಲವರು ಯೋಧರು ಹಾಗೂ ಇತರರು ಸಂತ್ರಸ್ತ ಮಹಿಳೆಯರ ಪಾತ್ರ ನಿರ್ವಹಿಸಿದ್ದರು. ಭಯೋತ್ಪಾದಕರ ಪಾತ್ರ ನಿರ್ವಹಿಸಿದ್ದವರಿಗೆ ಕಪ್ಪು ಬಣ್ಣದ ಬಟ್ಟೆ ಧರಿಸುವಂತೆ ಸೂಚಿಸಲಾಗಿತ್ತು. ಆದರೆ, ಅವರು ಬುರ್ಖಾ ಹಾಕಿಕೊಳ್ಳುವ ಆಯ್ಕೆ ಮಾಡಿದ್ದಾರೆ. ಯಾವುದೇ ಸಮುದಾಯ ಅಥವಾ ಗುಂಪಿನ ಧಾರ್ಮಿಕ ಭಾವನೆಗೆ ಘಾಸಿಯುಂಟು ಮಾಡುವುದು ನಮ್ಮ ಉದ್ದೇಶವಾಗಿರಲಿಲ್ಲ. ಬದಲಿಗೆ, ಶಾಲಾ ವಿದ್ಯಾರ್ಥಿಗಳಲ್ಲಿ ಸ್ವಾತಂತ್ರ್ಯೋತ್ಸವ ಹಾಗೂ ಸಶಸ್ತ್ರ ಪಡೆಗಳ ಬಗ್ಗೆ ಗೌರವ ಮೂಡಿಸುವುದಾಗಿತ್ತು” ಎಂದು ಅವರು ಸಮಜಾಯಿಷಿ ನೀಡಿದ್ದಾರೆ.
ಈ ಪ್ರದರ್ಶನವನ್ನು ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಭದ್ರತೆ ಕುರಿತು ದೇಶ ಪ್ರೇಮ ಹಾಗೂ ಜಾಗೃತಿ ಮೂಡಿಸುವ ಪ್ರಯತ್ನವಾಗಿ ಭಾಗವಾಗಿ ನೀಡಲಾಗಿತ್ತು. ಇದರ ಹಿಂದೆ ಯಾವುದೇ ಕೋಮುವಾದಿ ಅಥವಾ ರಾಜಕೀಯ ಉದ್ದೇಶವಿರಲಿಲ್ಲ ಎಂದು ಶಾಲಾ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಭಾವ್ನಗರ್ ಮುನಿಸಿಪಲ್ ಕಾರ್ಪೊರೇಷನ್ ಪ್ರಾಥಮಿಕ ಶಿಕ್ಷಣ ಸಮಿತಿಯ ಆಡಳಿತಾಧಿಕಾರಿ ಮುಂಜಲ್ ಬಲ್ದಾನಿಯಾ, “ಸಾಮಾಜಿಕ ಮಾಧ್ಯಮಗಳ ಮೂಲಕ ಈ ವಿಷಯ ನಮ್ಮ ಗಮನಕ್ಕೆ ಬಂದಿದೆ. ಈ ಸಂಬಂಧ ತನಿಖೆಯನ್ನು ಕೈಗೊಳ್ಳಲಾಗಿದೆ” ಎಂದು ದೃಢಪಡಿಸಿದ್ದಾರೆ.
“ಈ ವಿಡಿಯೊ ಬಗ್ಗೆ ತನಿಖೆ ನಡೆಯುತ್ತಿದೆ. ಮಧ್ಯದಲ್ಲಿ ರಜಾದಿನಗಳಿದ್ದವು. ಆದರೆ, ತನಿಖೆ ಸಂಪೂರ್ಣಗೊಂಡ ನಂತರ, ಶಾಲಾ ಪ್ರಾಂಶುಪಾಲರು ಹಾಗೂ ಶಿಕ್ಷಕರಿಗೆ ಶೋಕಾಸ್ ನೋಟಿಸ್ ನೀಡಲಾಗುವುದು. ಈ ಶಾಲೆಯನ್ನು ಭಾವ್ನಗರ್ ಮುನಿಸಿಪಲ್ ಕಾರ್ಪೊರೇಷನ್ ನಿರ್ವಹಿಸುತ್ತಿರುವುದರಿಂದ, ಪ್ರಾಥಮಿಕ ಶಿಕ್ಷಣ ಸಮಿತಿಯು ವಿಚಾರಣೆ ನಡೆಸಲಿದೆ ಹಾಗೂ ಮುಂದಿನ ಕ್ರಮ ಕೈಗೊಳ್ಳಲಿದೆ” ಎಂದೂ ಅವರು ಹೇಳಿದ್ದಾರೆ ಎಂದು indiatoday.in ವರದಿ ಮಾಡಿದೆ.