ಬಿಗ್‌ಬಾಸ್ ಮನೆಗೆ ಸ್ಪರ್ಧಿಗಳ ಮರುಪ್ರವೇಶ: ದೊಡ್ಮನೆ ಬೀಗ ತೆರೆದ ನಂತರ ಮರಳಿ ಆಗಮನ

ರಾಮನಗರ: ಬಿಗ್‌ಬಾಸ್ (Bigg Boss) ಮನೆಯ ಬೀಗ ತೆಗೆದ ಬೆನ್ನಲ್ಲೇ ಇಂದು ಮುಂಜಾನೆ ಬಿಡದಿಯ ಈಗಲ್ಟನ್ ರೆಸಾರ್ಟ್‌ನಿಂದ ಸ್ಪರ್ಧಿಗಳು ಮತ್ತೆ ದೊಡ್ಮನೆಗೆ ಆಗಮಿಸಿದ್ದಾರೆ.ಬಿಗ್ ಬಾಸ್ ಆಯೋಜಕರು ಕಾರಿನಲ್ಲಿ ಸ್ಪರ್ಧಿಗಳನ್ನು ಕರೆತಂದಿದ್ದಾರೆ. ಸ್ಪರ್ಧಿಗಳು ಮನೆ ಪ್ರವೇಶ ಮಾಡಿದ ಬೆನ್ನಲ್ಲೇ ವಾಹಿನಿ ಎಂದಿನಂತೆ ಅದೇ ಸಮಯಕ್ಕೆ ಶೋ ಪ್ರಸಾರವಾಗಲಿದೆ ಎಂದು ಪ್ರೋಮೋ ಬಿಟ್ಟಿದೆ.

ಬಿಗ್‌ಬಾಸ್ ಮನೆಗೆ ಬೆಂಗಳೂರು ದಕ್ಷಿಣ ಜಿಲ್ಲಾಡಳಿತ ಬೀಗ ಜಡಿದ ನಂತರ ಸ್ಪರ್ಧಿಗಳನ್ನು 6 ಕಿ.ಮೀ ದೂರದಲ್ಲಿರುವ ಈಗಲ್ಟನ್ ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗಿತ್ತು. ಜಾಲಿವುಡ್ ಸ್ಟುಡಿಯೋ (Jollywood Studios) ಮಾಲಿನ್ಯ ನಿಯಮ ಪಾಲನೆ ಮಾಡದ್ದಕ್ಕೆ ಈ ರೆಸಾರ್ಟ್‌ಗೆ ನಿಮ್ಮನ್ನು ಕರೆತರಲಾಗಿದೆ ಎಂಬ ವಿಚಾರವನ್ನು ಆಯೋಜಕರು ಸ್ಪರ್ಧಿಗಳಿಗೆ ತಿಳಿಸಿದ್ದರು.
ರೆಸಾರ್ಟ್‌ನಲ್ಲೂ (Resort) ಬಿಗ್ ಬಾಸ್ ನಿಯಮ ಅನ್ವಯವಾಗುತ್ತಿತ್ತು. ಯಾರ ಜೊತೆಯೂ ಸಂಪರ್ಕ ಇಟ್ಟುಕೊಳ್ಳುವಂತಿಲ್ಲ. ರೆಸಾರ್ಟ್ ಸಿಬ್ಬಂದಿಯ ಜೊತೆಯೂ ಮಾತುಕತೆ ಆಡುವಂತಿಲ್ಲ, ಊಟ, ತಿಂಡಿ ಇತ್ಯಾದಿಗಳನ್ನು ಕೋಣೆಗೆ ಕಳುಹಿಸಲಾಗುತ್ತಿದೆ ಎಂದು ಆಯೋಜಕರು ಸ್ಪರ್ಧಿಗಳಿಗೆ ಸೂಚಿಸಿದ್ದರು. ಅಷ್ಟೇ ಅಲ್ಲದೇ ಮೊಬೈಲ್, ಇಂಟರ್ನೆಟ್, ಟಿವಿ ಯಾವ ಸೌಲಭ್ಯಗಳನ್ನು ಸಹ ನೀಡಿರಲಿಲ್ಲ.