ಶೇ.10 ಕಡಿಮೆ ಖಾದ್ಯ ತೈಲ ಸೇವಿಸಿ, ಬೊಜ್ಜು ಇಳಿಸಿ – ಪ್ರಧಾನಿ ಮೋದಿ ಸಲಹೆ

ತಮ್ಮ ಮಾಸಿಕ ‘ಮನ್ ಕೀ ಬಾತ್’ನಲ್ಲಿ ಮಾತನಾಡಿದ ಅವರು, ‘ಇತ್ತೀಚಿನ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬೊಜ್ಜಿನ ಬಗ್ಗೆ ಮಾತನಾಡಿದ್ದೆ. ಅದು ಹೊಸ ಚರ್ಚೆ ಹುಟ್ಟುಹಾಕಿದೆ. ನಮ್ಮ ದೇಶವನ್ನು ಆರೋಗ್ಯದಾಯಕ ದೇಶ ಮಾಡಲು ಬೊಜ್ಜಿನ ಸಮಸ್ಯೆ ನಿವಾರಿಸಲೇಬೇಕು. ಖಾದ್ಯ ತೈಲದ ಬಳಕೆಯನ್ನು ಶೇ.10ರಷ್ಟು ಕಡಿಮೆ ಮಾಡುವುದು ಬೊಜ್ಜಿನ ಸಮಸ್ಯೆಗೆ ರಾಮಬಾಣ.
ನೀವು ಪ್ರತಿ ತಿಂಗಳು 10% ಕಡಿಮೆ ತೈಲವನ್ನು ಬಳಸೋಣ ಎಂದು ನಿರ್ಧರಿಸಿ. ಅಡುಗೆಗೆ ಎಣ್ಣೆ ಖರೀದಿಸುವಾಗಲೇ ನೀವು 10% ಕಡಿಮೆ ತೈಲ ಖರೀದಿಸಿ. ಇದು ಬೊಜ್ಜು ಕಡಿಮೆ ಮಾಡುವತ್ತ ಒಂದು ಪ್ರಮುಖ ಹೆಜ್ಜೆಯಾಗಲಿದೆ’ ಎಂದರು.
2022 ರಲ್ಲಿ ಪ್ರಪಂಚದಾದ್ಯಂತ ಸುಮಾರು 250 ಕೋಟಿ ಜನರು ಅಧಿಕ ತೂಕ ಹೊಂದಿದ್ದರು. ಒಂದು ಅಧ್ಯಯನದ ಪ್ರಕಾರ, ಇಂದು ಪ್ರತಿ 8 ಜನರಲ್ಲಿ ಒಬ್ಬರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಳೆದ ವರ್ಷಗಳಲ್ಲಿ ಬೊಜ್ಜಿನ ಪ್ರಕರಣಗಳು ದ್ವಿಗುಣಗೊಂಡಿವೆ, ಆದರೆ, ಇನ್ನೂ ಆತಂಕಕಾರಿ ಸಂಗತಿಯೆಂದರೆ ಮಕ್ಕಳಲ್ಲಿಯೂ ಬೊಜ್ಜಿನ ಸಮಸ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ. ಆದರೆಈ ಸವಾಲನ್ನು ಸಣ್ಣ ಪ್ರಯತ್ನಗಳಿಂದ ನಿಭಾಯಿಸಬಹುದು’ ಎಂದರು.