ಟೆಕಿಗಳಿಗೆಂದೇ ಹೊಸ ದ್ವೀಪ ಕಟ್ಟಲು ‘ನೆಟ್ವರ್ಕ್ ಸ್ಟೇಟ್’ ನಿರ್ಮಾಣ ಆರಂಭ

ನವದೆಹಲಿ:ಭಾರತೀಯ ಅಮೆರಿಕನ್ ಉದ್ಯಮಿ ಬಾಲಾಜಿ ಶ್ರೀನಿವಾಸನ್ (Balaji Srinivasan) ಅವರು ತಂತ್ರಜ್ಞಾನ ಉದ್ಯಮಿಗಳಿಗೆಂದು ಪ್ರತ್ಯೇಕ ರಾಷ್ಟ್ರವನ್ನೇ ನಿರ್ಮಿಸಲು ಹೊರಟಿದ್ದಾರೆ. ಕಾಯಿನ್ಬೇಸ್ ಎನ್ನುವ ಕ್ರಿಪ್ಟೋ ತಂತ್ರಜ್ಞಾನ ಕಂಪನಿಯ ಮಾಜಿ ಸಿಟಿಒ ಹಾಗೂ ಕೌನ್ಸಿಲ್ (Counsyl) ಎನ್ನುವ ಕಂಪನಿಯ ಸಹ-ಸಂಸ್ಥಾಪಕರೂ ಆದ ಬಾಲಾಜಿ ಶ್ರೀನಿವಾಸನ್ ಅವರು ತಮ್ಮ ಕನಸಿನ ‘ನೆಟ್ವರ್ಕ್ ಸ್ಟೇಟ್’ (Network State) ಸ್ಥಾಪಿಸಲಿದ್ದಾರೆ.

ಇದಕ್ಕಾಗಿ ಸಿಂಗಾಪುರದ ಬಳಿ ಒಂದು ಖಾಸಗಿ ದ್ವೀಪವನ್ನು ಅವರು ಖರೀದಿಸಿದ್ದಾರೆ.
ನೆಟ್ವರ್ಕ್ ಸ್ಟೇಟ್ ಎನ್ನುವ ವಿಶೇಷ ರಾಷ್ಟ್ರ…
ಬಾಲಾಜಿ ಶ್ರೀನಿವಾಸನ್ ಅವರು ‘ನೆಟ್ವರ್ಕ್ ಸ್ಟೇಟ್’ ಎನ್ನುವ ಪುಸ್ತಕ ಬರೆದಿದ್ದಾರೆ. ಅದರಲ್ಲಿ ಒಂದೇ ರೀತಿಯ ಮೌಲ್ಯಗಳನ್ನು ಅನುಸರಿಸುವ ಆನ್ಲೈನ್ ಸಮುದಾಯಗಳನ್ನು ಒಟ್ಟುಗೂಡಿಸುವುದು, ಹಾಗು ಒಂದು ನಿರ್ದಿಷ್ಟ ಭೌತಿಕ ಪ್ರದೇಶದಲ್ಲಿ ಇವರನ್ನು ನೆಲಸುವಂತೆ ಮಾಡುವುದು, ಹಾಗೂ ಈ ಪ್ರದೇಶಕ್ಕೆ ಜಾಗತಿಕ ಮನ್ನಣೆ ಪಡೆಯುವುದು, ಇದು ನೆಟ್ವರ್ಕ್ ಸ್ಟೇಟ್ನ ಕನಸು ಹಾಗೂ ಉದ್ದೇಶ.

ನೆಟ್ವರ್ಕ್ ಸ್ಟೇಟ್ನ ಈ ಕನಸನ್ನು ಸಾಕಾರ ಮಾಡುವ ನಿಟ್ಟಿನಲ್ಲಿ ಬಾಲಾಜಿ ಶ್ರೀನಿವಾಸನ್ ಅವರು ದೊಡ್ಡ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಸಿಂಗಾಪುರದ ಬಳಿ ಖಾಸಗಿ ದ್ವೀಪವೊಂದನ್ನು ಖರೀದಿಸಿರುವುದು ಒಂದು ಪ್ರಮುಖ ಹೆಜ್ಜೆ. ಈಗ ಒಂದೇ ಮನಸ್ಥಿತಿಯ ವ್ಯಕ್ತಿಗಳನ್ನು ಆನ್ಲೈನ್ನಲ್ಲಿ ಕ್ರೋಢೀಕರಣ ಮಾಡುತ್ತಿದ್ದಾರೆ.
ಕಾಯಿನ್ಬೇಸ್ನ ಮಾಜಿ ಸಿಟಿಒ ಆದ ಬಾಲಾಜಿ ಶ್ರೀನಿವಾಸನ್ 2024ರ ಸೆಪ್ಟೆಂಬರ್ನಲ್ಲಿ ನೆಟ್ವರ್ಕ್ ಸ್ಕೂಲ್ ಅನ್ನು ಸ್ಥಾಪಿಸಿದ್ದಾರೆ. ಅದರಲ್ಲಿ ಅವರು ತಮ್ಮ ಕನಸ್ಸಿನ ನೆಟ್ವರ್ಕ್ ಸ್ಟೇಟ್ಗೆ ದ್ಯೋತಕವಾಗುವಂತೆ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಹೊಸದಾಗಿ ಖರೀದಿಸಲಾಗಿರುವ ದ್ವೀಪದಲ್ಲಿ ಈಗಾಗಲೇ ವಿವಿಧ ಸೌಲಭ್ಯಗಳನ್ನು ಸ್ಥಾಪಿಸುವ ಕೆಲಸ ಮಾಡುತ್ತಿದ್ದಾರೆ. ಈಗ ಮೂರು ತಿಂಗಳ ಯೋಜನೆಯೊಂದನ್ನು ಆರಂಭಿಸುತ್ತಿದ್ದು, ವಿವಿಧ ಸ್ಟಾರ್ಟಪ್ಗಳ ಸಂಸ್ಥಾಪಕರು ಮತ್ತು ಫಿಟ್ನೆಸ್ ಆಸಕ್ತರನ್ನು ಈ ದ್ವೀಪದಲ್ಲಿ ಸೇರಿಸುವ ಕೆಲಸ ಅವರದ್ದು. ಅಂತಿಮವಾಗಿ, ವಿಕೇಂದ್ರೀಕೃತ ಅಧಿಕಾರದ ಮತ್ತು ಡಿಜಿಟಲ್ ಫಸ್ಟ್ ಪರಿಕಲ್ಪನೆಯ ‘ನೆಟ್ವರ್ಕ್ ಸ್ಟೇಟ್’ ನಿರ್ಮಾಣ ಮಾಡುವುದು ಅವರ ಮುಖ್ಯ ಉದ್ದೇಶ.
ಸೆಪ್ಟೆಂಬರ್ 23ರಿಂದ ಡಿಸೆಂಬರ್ 23ರವರೆಗೆ ಶಿಬಿರ…
ಸಿಂಗಾಪುರ ಬಳಿಯ ದ್ವೀಪದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ನೆಟ್ವರ್ಕ್ ಸ್ಟೇಟ್ ಸಭೆ ನಡೆಯಲಿದೆ. ಅದಾದ ಬಳಿಕ ಮೂರು ತಿಂಗಳು, ಅಂದರೆ ಸೆಪ್ಟೆಂಬರ್ 23ರಂದು ಆರಂಭವಾಗಿ ಡಿಸೆಂಬರ್ 23ರವರೆಗೂ 90 ದಿನಗಳ ಕಾಲ ಶಿಬಿರ ಇರುತ್ತದೆ. ಈ ಪ್ರೋಗ್ರಾಮ್ಗೆ ಸೇರಿಸಲು ಬಯಸುವವರು ತಿಂಗಳಿಗೆ 2,000 ಡಾಲರ್ ಬಾಡಿಗೆ ಕೊಡಬೇಕು. ಜೊತೆಗಾರರೊಂದಿಗೆ ರೂಮು ಹಂಚಿಕೊಂಡರೆ ಒಬ್ಬರಿಗೆ ತಿಂಗಳಿಗೆ 1,000 ಡಾಲರ್ ಬಾಡಿಗೆ ಇರುತ್ತದೆ. ಹೀಗೆಂದು ಬಾಲಾಜಿ ಶ್ರೀನಿವಾಸನ್ ಅವರು ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.
