ಗಣಿ ಅಧಿಕಾರಿಣಿ ಕೃಷ್ಣವೇಣಿ ವಿರುದ್ಧ ಸಂಚು – ಅಕ್ರಮ ಮರಳುಗಾರಿಕೆ ಮಾಫಿಯಾದ ಕೌಶಲ್ಯ


ಆಕೆ ಗಣಿಯನ್ನೇ ನುಂಗಿ ನೀರು ಕುಡಿದಿದ್ದಾಳೆ.! ಈಕೆ ಬರೀ ಕೃಷ್ಣವೇಣಿಯಲ್ಲ; ಚಿನ್ನದ ಗಣಿ. ಹೀಗೆ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೃಷ್ಣವೇಣಿ ವಿರುದ್ಧ ಸಾಲು ಸಾಲು ಆರೋಪಗಳನ್ನು ಹಾಕುತ್ತಿದ್ದರೂ ಕೃಷ್ಣವೇಣಿ ಮಗುಮ್ಮಾಗಿ ಕುಳಿತಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಹೆಚ್ಚುತ್ತಿದ್ದು, ಇದಕ್ಕೆಲ್ಲ ಗಣಿ ಇಲಾಖೆಯ ಅಧಿಕಾರಿಗಳ ವೈಫಲ್ಯವೇ ಕಾರಣವೆಂದು ಪಕ್ಷ ಭೇದ ಮರೆತು ಎಲ್ಲರ ಗುರಿಯೂ ಕೃಷ್ಣವೇಣಿಯೇ ಆಗಿದ್ದರು.
ತಾವು ಮಾತ್ರ ಸತ್ಯ ಹರಿಶ್ಚಂದ್ರರು, ಗಣಿ ಇಲಾಖೆ ಮಾತ್ರ ಅಕ್ರಮ ಮರಳುಗಾರಿಕೆ ತಡೆಯುವಲ್ಲಿ ವಿಫಲ ವಾಗಿದೆ ಎಂದು ಜನಪ್ರತಿ ನಿಧಿಗಳು, ಪೊಲೀಸ್ ಅಧಿಕಾರಿಗಳು ತಮ್ಮ ಬೆನ್ನನ್ನೇ ತಾವು ತಟ್ಟಿಕೊಳ್ಳುತ್ತಿದ್ದರು.

ಅಕ್ರಮ ಮರಳುಗಾರಿಕೆಯಲ್ಲಿ ಕೇವಲ ಗಣಿ ಇಲಾಖೆ ಮಾತ್ರ ಆರೋಪಿನಾ.? ಕೆಡಿಪಿ ಸಭೆಯಲ್ಲಿ ಪ್ರಶ್ನೆಗೆ ಉತ್ತರಿಸಿದ ಕೃಷ್ಣವೇಣಿ ‘ನಮ್ಮಲ್ಲಿ ಸಿಬ್ಬಂದಿ ಕೊರತೆ ಇದೆ, ಆದಾಗ್ಯೂ ಕೆಲವು ಕಡೆ ದಾಳಿ ಮಾಡಿದ್ದೇವೆ. ಸಿಸಿಟಿವಿ ಇಲ್ಲದ ಕಡೆ ಪೊಲೀಸರ ಸಹಾಯ ಕೇಳಿದ್ದೇವೆ.
ಸರಿಯಾದ ಸ್ಪಂದನೆ ಸಿಕ್ಕಿಲ್ಲ ಅನ್ನುವುದು ನಿಜ ತಾನೇ. ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಯಾವ ರೀತಿ ತನ್ನ ಕಬಂಧ ಬಾಹು ಗಳನ್ನು ಚಾಚಿದೆ ಎಂದು ಅಕ್ರಮ ಮರಳುಗಾರಿಕೆ ನಡೆಯುವ ಪ್ರದೇಶಕ್ಕೆ ಹೋದರೆ ತಿಳಿಯುತ್ತದೆ. ಗ್ರಾಮ ಪಂಚಾಯತ್ ಸದಸ್ಯನಿಂದ ಹಿಡಿದು, ಅಧ್ಯಕ್ಷ, ಪಿಡಿಓಗೆ ಮಾಮೂಲಿ ಕೊಡಬೇಕು. ಸ್ಥಳೀಯ ಪೊಲೀಸ್ ಠಾಣೆಗೆ ತಿಂಗಳ ಮಂತ್ರಿ ಇಂತಿಷ್ಟು ಕೊಡಲೇಬೇಕು. ಇನ್ನು ಪ್ರತಿ ಲಾರಿ ಟ್ರಿಪ್ಪಿಗೂ ಸ್ಥಳೀಯ ಪೊಲೀಸರಿಗೆ ಕೊಟ್ಟರಷ್ಟೇ ಅಕ್ರಮ ಮರಳುಗಾರಿಕೆ ನಡೆಸಲು ಸಾಧ್ಯ. ಇನ್ನು ಕಾಂಗ್ರೆಸ್-ಬಿಜೆಪಿ ಭೇದಭಾವವಿಲ್ಲದೆ ಭಾಯಿಭಾಯಿಯಾಗಿ ಮರಳು ಲೂಟಿ ಮಾಡುವುದರಲ್ಲಿ ನಿಸ್ಸಿಮರು.

ಸ್ಥಳೀಯ ರಾಜಕಾರಣಿ ಇವರೆಲ್ಲ ಬೈಟು ಬೈಟು ಮಾಡಿ ಮರಳು ಲೂಟಿ ಹೊಡೆಯುತ್ತಿದ್ದರೆ ಮಲ್ಲಿಕಟ್ಟೆಯಿಂದ ಬೆರಳೆಣಿಕೆಯ ಸಿಬ್ಬಂದಿ ಜತೆ ಕೃಷ್ಣವೇಣಿ ಬಂದು ಫಿಚ್ಚರಿನಲ್ಲಿ ತೋರಿಸುವಂತೆ ಲೇಡಿ ಡಾನ್ ಆಗಿ ಈ ಎಲ್ಲ ಅಕ್ರಮ ಮರಳು ಗಾರಿಕೆಯನ್ನು ನಿಲ್ಲಿಸಬೇಕಂತೆ. ವ್ಹಾವ್.. ಎಷ್ಟೊಂದು ಚಂದ ಅಲ್ವಾ… ಹಿರಿಯ ಪೊಲೀಸ್ ಅಧಿಕಾರಿಗಳು ಉಸ್ತುವಾರಿ ಸಮ್ಮುಖದಲ್ಲಿ ಮರಳುಗಾರಿಕೆ ವಿಚಾರದಲ್ಲಿ ನೇರವಾಗಿ ನಮಗೆ ಕ್ರಮ ತೆಗೆದುಕೊಳ್ಳಲು ಬರುವುದಿಲ್ಲ. ಗಣಿ ಇಲಾಖೆಯವರ ಕೆಲಸ ಎಂದು ತಮ್ಮ ಭುಜ ತಪ್ಪಿಸಿಕೊಳ್ಳುವ ಕೆಲಸ ಮಾಡಿದ್ದಾರೆ.
ಪ್ರತಿಯೊಂದು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುವುದರಿಂದ ಮಂತ್ರಿ ಲಕ್ಷ ಲಕ್ಷ ಪೀಕಿಸಿಕೊಳ್ಳುವುದು ಯಾಕೆ.? ದುಡ್ಡು ನಿಮಗೆ ಬೇಕು. ಕ್ರಮ ಗಣಿ ಇಲಾಖೆ ತೆಗೆದುಕೊಳ್ಳಬೇಕು. ಇನ್ನು ಗಣಿ ಇಲಾಖೆ ಬೆರಳೆಣಿಕೆಯಷ್ಟು ಸಿಬ್ಬಂದಿಗಳನ್ನು ಕಟ್ಟಿಕೊಂಡು ಅಕ್ರಮ ಮರಳುಗಾರಿಕೆಯನ್ನು ನಿಲ್ಲಿಸಲು ಸಾಧ್ಯವೇ.? ಇನ್ನು ಮಂತ್ರಿ ಮಾಮೂಲಿ ಪಡೆಯುವ ಪಂಚಾಯತ್, ಸ್ಥಳೀಯ ಪೊಲೀಸ್ ಇಲಾಖೆ ಅಕ್ರಮ ಮರಳುಗಾರಿಕೆ ನಡೆಸುವವರಿಗೆ ಮಾಹಿತಿ ನೀಡಿ ತಪ್ಪಿಸಿಕೊಳ್ಳಲು ಸಹಾಯ ಮಾಡುವುದಿಲ್ಲವೇ.?ಕೃಷ್ಣವೇಣಿಯೊಬ್ಬರೆ ಚಕ್ರವ್ಯೂಹ ಬೇಧಿಸಬೇಕೆಂದು ನಿರೀಕ್ಷಿಸುವುದು ಮೂರ್ಖತನವಲ್ಲದೆ ಇನ್ನೇನು.?

ಕೃಷ್ಣವೇಣಿ ವರ್ಗಾವಣೆಯಾಗಿ ಮಂಗಳೂರಿಗೆ ಬಂದು ಮೂರು ತಿಂಗಳಾಗುವಾಗಲೇ ಅವರ ವೆಲೆನ್ಸಿಯಾದ ಅಪಾರ್ಟೆಂಟ್ಗೆ ಲೋಕಾಯುಕ್ತರಿಂದ ಧಾಳಿ ನಡೆಯುತ್ತದೆ. ಇದರ ಹಿಂದೆ ಕೆಲವರ ಚಿತಾವಣೆ ಇರುವುದಂತೂ ಸುಳ್ಳಲ್ಲ. ಕೃಷ್ಣವೇಣಿ ಯಾವುದಕ್ಕೂ ಜಗ್ಗದ ಬಗ್ಗದ ಗಟ್ಟಿಗಿತ್ತಿ ಮಹಿಳೆ. ಅಕ್ರಮ ದಂಧೆಕೋರರನ್ನು, ಬಕೆಟ್ ಹಿಡಿಯುವ ಅಧಿಕಾರಿಗಳನ್ನು ಹತ್ತಿರ ಸೇರಿಸುವ ಕೆಲಸ ಮಾಡುತ್ತಿಲ್ಲ. ಇದೇ ಕಾರಣಕ್ಕೆ ಲೋಕಾಯುಕ್ತ ರೈಡ್ ಮಾಡಿಸಲಾಗಿದೆ ಅನ್ನುವ ಪುಕಾರಿದೆ. ತಮಗೆ ಬಗ್ಗದ ಅಧಿಕಾರಿಗಳನ್ನು ಯಾವೆಲ್ಲ ಕಷ್ಟ ಕೊಟ್ಟು ಅಸಹಾಯಕರಾಗಿ ಮಾಡುತ್ತಾರೆ ಅನ್ನುವುದಕ್ಕೆ ಕೃಷ್ಣವೇಣಿ ಉತ್ತಮ ಉದಾಹರಣೆ.
ಕೆಲವು ದಿನಗಳ ಹಿಂದೆಯಷ್ಟೇ ಇಲಾಖೆಯ ಕೆಲವರ ಮಾನಸಿಕ ಒತ್ತಡಕ್ಕೆ ನಲುಗಿದ ಈಕೆ ರಜೆ ಮೇಲೆ ಹೋಗಿದ್ದರು ಅನ್ನಲಾಗಿದೆ. ಇದೀಗ ಮತ್ತೆ ನಾವು ಸುಬಗರು, ಸತ್ಯಹರಿಶ್ಚಂದ್ರನ ವಂಶಸ್ಥರು, ಅಕ್ರಮ ಮರಳುಗಾರಿಕೆಯಲ್ಲಿ ನಮ್ಮ ಪಾತ್ರವೇ ಇಲ್ಲ ಎಂದು ಸಾಬೀತು ಮಾಡಲು ಕೆಡಿಪಿ ಸಭೆಯನ್ನೇ ವೇದಿಕೆಯನ್ನಾಗಿಸಿಕೊಂಡಿರುವುದು ದುರಂತ ಅಲ್ಲದೇ ಮತ್ತೇನು.?
ಪೊಲೀಸ್ ಇಲಾಖೆ ಖಡಕ್ಕಾಗಿ ತೀರ್ಮಾನ ಮಾಡಿದರೆ, ಅಕ್ರಮ ಮರಳುಗಾರಿಕೆಯ ಒಂದು ದೋಣಿಯಾದರೂ ಮಂಗಳೂರಿನ ನದಿಗೆ ಇಳಿಯುವ ಧೈರ್ಯ ತೋರಿಸಲು ಸಾಧ್ಯವೇ.? ಅಕ್ರಮ ಮರಳು ಸಾಗಾಟದ ಒಂದೇ ಒಂದು ಟಿಪ್ಪರ್ ಆದರೂ ರಸ್ತೆಗೆ ಇಳಿಯಲು ಸಾಧ್ಯವೇ.? ಉಡುಪಿ ಜಿಲ್ಲೆಯಲ್ಲಿ ಯಾಕೆ ಅಕ್ರಮ ಮರಳುಗಾರಿಕೆ ಸ್ಥಗಿತಗೊಂಡಿದೆ. ಉಡುಪಿಯಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಜಂಟಿಯಾಗಿ ಅಕ್ರಮ ಮರಳು ಮಾರಾಟಗಾರರ ಸೊಕ್ಕಡಗಿಸುತ್ತಿದ್ದರೆ, ಇಲ್ಲಿ ಎಲ್ಲಾ ಇಲಾಖೆಗಳು ಗಣಿ ಇಲಾಖೆಯ ಅಧಿಕಾರಿಯನ್ನೇ ಹೊಣೆಗಾರರು ಎಂಬಂತೆ ಕೈ ತೋರಿಸುತ್ತಿದೆ.
ಗಣಿ ಇಲಾಖೆಯ ಅಧಿಕಾರಿಣಿ ಕೃಷ್ಣವೇಣಿ ಗಟ್ಟಿಗಿತ್ತಿ ಮಹಿಳಾ ಅಧಿಕಾರಿ ಅನ್ನುವುದರಲ್ಲಿ ಎರಡು ಮಾತಿಲ್ಲ.
ಜಿಲ್ಲಾಧಿಕಾರಿಗಳು ಕಳುಹಿಸಿದ ಫೈಲನ್ನು ಅದು ಮಾಡಲು ಸಾಧ್ಯವಿಲ್ಲ. ಕಾನೂನು ಅಂಶ ಪರಿಗಣಿಸಿ ವಾಪಾಸು ಕಳುಹಿಸಿದ್ದಾರೆ. ಇಂತಹ ಕೆಫಾಸಿಟಿ ಕೆಲವೇ ಕೆಲವು ಅಧಿಕಾರಿಗಳಿಗೆ ಇರಲು ಮಾತ್ರ ಸಾಧ್ಯ. ಅದು ಮಹಿಳೆಯಾಗಿ ಕೃಷ್ಣವೇಣಿಗಿದೆ. ಇದೇ ಕಾರಣದಿಂದ ಇಲಾಖೆಯ ಇತರ ಮೇಲಾಧಿಕಾರಿಗಳು ಕೃಷ್ಣವೇಣಿ ವಿರುದ್ಧ ಆರೋಪ ಮಾಡುತ್ತಿರುವುದು. ನ್ಯಾಯ ಯಾವತ್ತೂ ಸೋತ ಉದಾಹರಣೆ ಇಲ್ಲ..
ಗಣಿ ಇಲಾಖೆಯ ಕಿರಿಯ ಸಡೇಸಾಥ್ ಅಧಿಕಾರಿಯೊಬ್ಬ 3500 ರೂಪಾಯಿ ಲಂಚ ಪಡೆಯುವಾಗ ಸಿಕ್ಕಿಬಿದ್ದು ಅಮಾನತ್ತಾಗಿ ಡಿಸ್ಮಿಸ್ ಆದರೂ, ಅದೇ ಲಂಚದ ಹಣದ ಪ್ರಭಾವ ಬಳಸಿ ಮತ್ತೆ ದ.ಕ. ಜಿಲ್ಲೆಯಲ್ಲಿ ಬಂದು ವಕ್ಕರಿಸಿದ ಈತ ಬಲು ಚಾಲಾಕಿ ಮನಷ್ಯ. ಉಡುಪಿ ಮೂಲದ ಆರ್ಟಿಐ ಕಾರ್ಯಕರ್ತನ ಮೂಲಕ ಎಲಿಗೇಷನ್ ಹಾಕಿಸುವುದು, ಗಣಿ ಮಾಲಿಕರ ಮಾಹಿತಿ ನೀಡಿ ಅರ್ಟಿಐ ಮೂಲಕ ಅತನಿಂದ ಬೆದರಿಸಿ ಆ ನಂತರ ಸೆಟ್ಟಿಂಗ್ ನಡೆಸುತ್ತಾನೆ ಅನ್ನುವ ಗುಪ್ತ ಮಾಹಿತಿ ಕೇಳಿಬರುತ್ತಿದೆ. ತನ್ನ ಮೇಲಾಧಿಕಾರಿಗಳ ವಿರುದ್ಧ ಷಡ್ಯಂತ್ರ ನಡೆಸುವ ಈ ಕಿರಿಯ ಅಧಿಕಾರಿ ಇಡೀ ಇಲಾಖೆಯನ್ನೇ ನುಂಗಿ ನೀರು ಕುಡಿದು ಮೇಲಾಧಿಕಾರಿಗಳ ಹೆಸರಿಗೆ ಮಸಿ ಬಳಿಯುತ್ತಿದ್ದಾನಂತೆ. ಈ ಕಿರಿಯ ಅಧಿಕಾರಿಯ ‘ಮೋಹನ’ ರಾಗಕ್ಕೆ ತಕ್ಕಂತೆ ಕುಣಿದವರಿಗೆ ಮಾತ್ರ ನುಂಗುಬಾಕತನಕ್ಕೆ ಅನುಮತಿಯಂತೆ.! ಬಗಲಲ್ಲಿಯೇ ಇದ್ದುಕೊಂಡು ಷಡ್ಯಂತ್ರ ಹೂಡುವ ಇಂತಹ ಅಧಿಕಾರಿಗಳ ಬಗ್ಗೆ ಮೇಲಾಧಿಕಾರಿಗಳು ಎಚ್ಚರಿಕೆಯಿಂದ ಇರಬೇಕಾಗಿದೆ.
ಕೃಷ್ಣವೇಣೀಯ ಮನೆಗೆ ನಡೆದ ಲೋಕಾಯುಕ್ತ ದಾಳಿಯ ಹಿಂದೆ ಈತನದ್ದೇ ಕೈವಾಡವಂತೆ.! ಇತ್ತೀಚೆಗೆ ನಡೆದ ಹನಿಟ್ರಾಪ್ ಪ್ರಕರಣದ ಕುಖ್ಯಾತ ಒಬ್ಬ ಆರೋಪಿಯೊಂದಿಗೆ ಈತನಿಗೆ ಗಪ್ಚುಪ್ ಸಂಬಂಧವಿದೆಯಂತೆ.! ಈ ಖಧೀಮ ಅಧಿಕಾರಿಯ ಕೋಟಿ ಕೋಟಿ ಕಮಾಯಿ ಆತನಿಗೆ ನೀಡಿ ಆತನ ಹರಾಮಿತನಕ್ಕೆ ಸಹಕರಿಸುತ್ತಿದ್ದಾನಂತೆ.! ಈತನ ಮಧ್ಯರಾತ್ರಿಯ ಕಿಲಕಿಲದ ಕರ್ಮಕಾಂಡ ಇನ್ನಷ್ಟು ಹೊರಬರಲಿದೆ. ಈತ ನೇರವಾಗಿ ಅಮೇದ್ಯ ಪಡೆಯುವುದಿಲ್ಲ. ಇದಕ್ಕಾಗಿ ಒಬ್ಬ ಮಧ್ಯವರ್ತಿಯನ್ನು ನೇಮಕ ಮಾಡಿರುತ್ತಾನೆ. ಈತ ಬಹಳ ಸೂಕ್ಷ್ಮಜೀವಿ. ಕಾರಣ ಒಮ್ಮೆ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದ. ಕಾನೂನು ಪದವಿ ಪಡೆದು, ಕಾನೂನನ್ನು ದುರುಪಯೋಗಪಡಿಸಿ ಮುಕ್ಕುವುದರಲ್ಲಿ ಕರಗತ ಮಾಡಿಕೊಂಡಿರುವ ಈತ ದೊಡ್ಡ ಸುಬಗನಂತೆ ವರ್ತಿಸುತ್ತಿದ್ದಾನೆ. ಈತ ಜಿಲ್ಲೆಯಲ್ಲಿ ಇನ್ನೂ ಮುಂದುವರಿದರೆ ಇಡೀ ಜಿಲ್ಲೆಯನ್ನೆ ನುಂಗಿ ಬಿಡುತ್ತಾನೆ. ಸಂಬಂಧ ಪಟ್ಟವರು ಇತ್ತ ಗಮನಿಸಿ.