ಕೆಎಸ್‌ಆರ್‌ಟಿಸಿಯಲ್ಲಿ ಹೊಸ ಲಗೇಜ್ ನಿಯಮ ಗೊಂದಲಕ್ಕೆ ಸಾರಿಗೆ ಇಲಾಖೆ ಸ್ಪಷ್ಟನೆ

ಬೆಂಗಳೂರು ;ಭಾರೀ ಚರ್ಚೆಗೀಡಾಗಿದ್ದ ಕೆಎಸ್‌ಆರ್‌ಟಿಸಿಯಲ್ಲಿ ನೂತನ ಲಗೇಜ್ ನಿಯಮ ಜಾರಿ ಗೊಂದಲಕ್ಕೆ ಸಾರಿಗೆ ಇಲಾಖೆ ತೆರೆ ಎಳೆದಿದೆ. ನಮ್ಮ ಇಲಾಖೆಯಿಂದ ಯಾವುದೇ ಹೊಸ ನಿಯಮ ಜಾರಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

ಕೆಎಸ್‌ಆರ್‌ಟಿಸಿಯಲ್ಲಿ ನೂತನ ಲಗೇಜ್ ನಿಯಮ ಜಾರಿ ಎಂಬ ಸುದ್ದಿ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಬಿತ್ತರವಾಗಿ ಗೊಂದಲಕ್ಕೀಡು ಮಾಡಿತ್ತು.
ನಿಗಮದ ಬಸ್ಸುಗಳಲ್ಲಿ ಸಾರ್ವಜನಿಕ ಪ್ರಯಾಣಿಕರ ಲಗೇಜ್/ಸರಕುಗಳನ್ನು ಸಾಗಿಸಲು ಹಿಂದಿನಿಂದಲೂ ವ್ಯವಸ್ಥೆ ಜಾರಿಯಿದ್ದು, ಅಂದರೆ ವಾಷಿಂಗ್‍ಮೆಷಿನ್, ಫ್ರಿಡ್ಜ್, ಟ್ರಕ್ ಟಯರ್, ಅಲ್ಯೂಮಿನಿಯಂ ಪೈಪ್, ಕಬ್ಬಿಣದ ಪೈಪ್, ಪಾತ್ರೆ, ಬೆಕ್ಕು, ನಾಯಿ, ಮೊಲಗಳನ್ನು ಸಾಗಿಸಲು 1999ರ ನವೆಂಬರ್ 5ರಿಂದಲೂ (ಬಸ್ಸಿನಲ್ಲಿರುವ ಸ್ಥಳಾವಕಾಶಕ್ಕೆ ಅನುಗುಣವಾಗಿ) ಜಾರಿಯಲ್ಲಿದೆ. ಯಾವುದೇ ಹೊಸದಾಗಿ ಲಗೇಜ್ ನಿಯಮ ಜಾರಿಯಾಗಿಲ್ಲ ಎಂದು ನಿಗಮದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಈ ವ್ಯವಸ್ಥೆಯ ಅನುಷ್ಠಾನದಲ್ಲಿ ಕಾಲದಿಂದ ಕಾಲಕ್ಕೆ ದರಗಳ ಪರಿಷ್ಕರಣೆ ಆಗಿದೆ. ಆದರೆ 30 ಕೆಜಿವರೆಗೆ ಲಗೇಜ್ ಕೊಂಡೊಯ್ಯಲು ಉಚಿತ ಅವಕಾಶ, ಸಾಗಿಸಬಹುದಾದ ವಸ್ತುಗಳ ಪ್ರಮಾಣ ಇತ್ಯಾದಿಗಳನ್ನು ಉಲ್ಲೇಖಿಸಿ ಪ್ರಸ್ತುತ 2022ರ ಅ.28ರಿಂದ ಲಗೇಜ್ ನಿಯಮ / ಸುತ್ತೋಲೆ ಜಾರಿಯಲ್ಲಿದೆ. ಇದೀಗ ಯಾವ ಬದಲಾವಣೆಯೂ ಆಗಿಲ್ಲ.
ದಿನಾಂಕ: 28-10-2022ರ ನಂತರ ಇತ್ತೀಚೆಗೆ ಯಾವುದೇ ಹೊಸ ಲಗೇಜ್ ನಿಯಮ / ಸುತ್ತೋಲೆಯನ್ನು ನಿಗಮದಲ್ಲಿ ಜಾರಿಗೆ ತಂದಿರುವುದಿಲ್ಲ ಎಂಬುದನ್ನು ತಮ ಆದ್ಯ ಗಮನಕ್ಕೆ ತರಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಯಾಣಿಕರು ಉಚಿತವಾಗಿ ಬಸ್‍ನಲ್ಲಿ 30 ಕೆಜಿವರೆಗೂ ಲಗೇಜು ತೆಗೆದುಕೊಂಡು ಹೋಗಬಹುದು. 30 ಕೆಜಿಗಿಂತ ಹೆಚ್ಚಿನ ಲಗೇಜ್ ಇದ್ದರೆ ಮಾತ್ರ ಹಣ ಪಾವತಿ ಮಾಡಬೇಕಿದೆ. 40 ಕೆಜಿ ತೂಕವಿರುವ ವಾಷಿಂಗ್‍ಮೆಷಿನ್, ಫ್ರಿಡ್ಜ್, 25 ಕೆಜಿ ತೂಕದ ಖಾಲಿ ಕಂಟೈನರ್ ಬಸ್‌ನಲ್ಲಿ ಸಾಗಿಸಲೂ ಅವಕಾಶ ನೀಡಲಾಗಿದೆ ಎಂದು ವರದಿಯಾಗಿತ್ತು. 2022ರ ಅ.28 ನಂತರ ಯಾವುದೇ ಹೊಸ ಲಗೇಜ್ ನಿಯಮ / ಸುತ್ತೋಲೆ ಜಾರಿಗೆ ತಂದಿಲ್ಲ ಎಂದು ನಿಗಮ ಸ್ಪಷ್ಟನೆ ನೀಡಿದೆ.
