ಭಾರತದೊಂದಿಗೆ ಸಂಘರ್ಷ, ಆದರೆ ಆರ್ಥಿಕ ಪೆಟ್ಟು ಪಾಕಿಸ್ತಾನಕ್ಕೇ!

ಇಸ್ಲಾಮಾಬಾದ್: ಭಾರತದ ಮೇಲೆ ವೀರಾವೇಶದಿಂದ ಎರಗಿ ಬೀಳುತ್ತಿರುವ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಅಧಃಪತನದಲ್ಲಿರುವುದು ಮಾರ್ಮಿಕ ಎನಿಸುವ ಸಂಗತಿ. ಆರ್ಥಿಕ ಚಟುವಟಿಕೆ ಉಸಿರಾಡಲು ಸಾಲವನ್ನು ನೆಚ್ಚಿಕೊಂಡಿರಬೇಕಾದ ಅನಿವಾರ್ಯತೆಯಲ್ಲಿರುವ ಪಾಕಿಸ್ತಾನಕ್ಕೆ ಚೇತರಿಕೆಯ ಹಾದಿ ಕ್ಲಿಷ್ಟಕರ. 400 ಬಿಲಿಯನ್ ಡಾಲರ್ಗೂ ಕಡಿಮೆ ಮೊತ್ತದ ಜಿಡಿಪಿ ಇರುವ ಪಾಕಿಸ್ತಾನಕ್ಕೆ ಫಾರೆಕ್ಸ್ ರಿಸರ್ವ್ಸ್ ಕೂಡ 15 ಬಿಲಿಯನ್ ಡಾಲರ್ ಮಾತ್ರವೇ ಇರುವುದು. ಜಿಡಿಪಿಯ ಶೇ. 4ರಷ್ಟು ಭಾಗ ಮಾತ್ರವೇ ವಿದೇಶೀ ವಿನಿಮಯ ಮೀಸಲು ನಿಧಿ ಇರುವುದು.

ಇತ್ತ, ಭಾರತದ ಫಾರೆಕ್ಸ್ ರಿಸರ್ವ್ಸ್ ಇತ್ತೀಚಿನ ವಾರಗಳಿಂದ ನಿರಂತರವಾಗಿ ಏರಿಕೆ ಆಗುತ್ತಾ ಬಂದಿದೆ. ಕೆಲ ತಿಂಗಳ ಹಿಂದೆ 700 ಬಿಲಿಯನ್ ಡಾಲರ್ ಮಟ್ಟ ದಾಟಿದ್ದ ಫಾರೀನ್ ಎಕ್ಸ್ಚೇಂಜ್ ರಿಸರ್ವ್ಸ್ ಈಗ ಮತ್ತೆ ಆ ಮಟ್ಟಕ್ಕೆ ಸಮೀಪಿಸುತ್ತಿದೆ. ಕಳೆದ ವಾರ ಭಾರತದ ಫಾರೆಕ್ಸ್ ರಿಸರ್ವ್ಸ್ 688 ಬಿಲಿಯನ್ ಡಾಲರ್ ಮೊತ್ತ ತಲುಪಿತ್ತು. ನಾಲ್ಕು ಟ್ರಿಲಿಯನ್ ಡಾಲರ್ ಜಿಡಿಪಿ ಹೊಂದಿರುವ ಭಾರತಕ್ಕೆ ಜಿಡಿಪಿ ಮತ್ತು ಫಾರೆಕ್ಸ್ ರಿಸರ್ವ್ಸ್ ಅನುಪಾತ ಶೇ. 17ರಷ್ಟಿದೆ. ಅಂದರೆ, ಜಿಡಿಪಿಯ ಶೇ. 17ರಷ್ಟು ಮೊತ್ತದಷ್ಟು ಫಾರೆಕ್ಸ್ ರಿಸರ್ಸ್ ಇದೆ.
ಆದರೆ, ಪಾಕಿಸ್ತಾನದ ಫಾರೆಕ್ಸ್ ರಿಸರ್ವ್ಸ್ ಅದರ ಜಿಡಿಪಿಯ ಶೇ. 4ರಷ್ಟು ಮಾತ್ರವೇ ಇರುವುದು. ಕರೆನ್ಸಿ ಮೌಲ್ಯ ಕಾಪಾಡಲು, ಅಂತಾರಾಷ್ಟ್ರೀಯ ವ್ಯಾಪಾರ ವಹಿವಾಟು ರಕ್ಷಿಸಲು ಫಾರೆಕ್ಸ್ ರಿಸರ್ವ್ಸ್ ಮುಖ್ಯ ಎನಿಸುತ್ತದೆ.
ಪಾಕಿಸ್ತಾನ ಸದ್ಯ ತನ್ನ ಆರ್ಥಿಕ ಸಂಕಷ್ಟದಿಂದ ಪಾರಾಗಲು ಐಎಂಎಫ್, ವಿಶ್ವಬ್ಯಾಂಕ್ಗಳ ಸಾಲವನ್ನು ನೆಚ್ಚಿಕೊಂಡಿದೆ. ಆದರೆ, ಭಾರತದೊಂದಿಗೆ ಸಂಘರ್ಷಕ್ಕಿಳಿದಿರುವ ಪಾಕಿಸ್ತಾನಕ್ಕೆ ಈ ದುಸ್ಸಾಹಸವು ಆರ್ಥಿಕವಾಗಿ ಬಲವಾದ ಪೆಟ್ಟು ಕೊಡುವ ನಿರೀಕ್ಷೆ ಇದೆ. ಪಹಲ್ಗಾಂ ಘಟನೆ ಬಳಿಕ ಪಾಕಿಸ್ತಾನದ ವಾಯು ಪ್ರದೇಶವನ್ನು ಬಳಸಲು ಹೆಚ್ಚಿನ ಇಂಟರ್ನ್ಯಾಷನಲ್ ಫ್ಲೈಟ್ಗಳು ಹಿಂದೇಟು ಹಾಕಿವೆ. ಮೇ 7ಕ್ಕೆ ಮುಂಚೆ ಪಾಕಿಸ್ತಾನದ ಏರ್ಸ್ಪೇಸ್ ಬಳಸುತ್ತಿದ್ದ ಫ್ಲೈಟ್ಗಳ ಸಂಖ್ಯೆ 15 ಮಾತ್ರವೇ. ಇದರಿಂದ ಪಾಕಿಸ್ತಾನಕ್ಕೆ ಓವರ್ಫ್ಲೈಟ್ ಶುಲ್ಕದಿಂದ ಸಿಗುತ್ತಿದ್ದ ಸಾಕಷ್ಟು ಆದಾಯ ಕೈತಪ್ಪಿತು.
