Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹುಕ್ಕಾ ಬಾರ್‌ಗೆ ಪೂರ್ಣ ನಿಷೇಧ: ರಾಜ್ಯದಲ್ಲಿ ನೂತನ ತಂಬಾಕು ನಿಯಂತ್ರಣ ಕಾನೂನು ಜಾರಿಯಲ್ಲಿ

Spread the love

ಬೆಂಗಳೂರು: ಹುಕ್ಕಾ ಬಾರ್ ಗಳನ್ನು ಸಂಪೂರ್ಣವಾಗಿ ನಿಷೇಧಿಸಿರುವ ರಾಜ್ಯ ಸರಕಾರ, ತಂಬಾಕು ಉತ್ಪನ್ನಗಳನ್ನು ಖರೀದಿಸಲು ಕಾನೂನುಬದ್ದ ಈಗಿರುವ ವಯಸ್ಸನ್ನು 18 ವರ್ಷಗಳಿಂದ 21 ವರ್ಷಗಳಿಗೆ ಏರಿಕೆ ಮಾಡಿದ್ದು, ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ ಉತ್ಪಾದನೆ, ಸರಬರಾಜು ಮತ್ತು ವಿತರಣೆ ವಿನಿಯಮ) ತಿದ್ದುಪಡಿ ಅಧಿನಿಯಮ-2024ಕ್ಕೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ.

ಈ ಮಸೂದೆ 2024ರ ಫೆಬ್ರವರಿಯಲ್ಲಿ ಉಭಯ ಸದನಗಳಲ್ಲಿ ಅಂಗೀಕಾರವಾಗಿತ್ತು. 2003ರ ಕೇಂದ್ರ ಕಾಯ್ದೆಯನ್ನು ಕರ್ನಾಟಕ ರಾಜ್ಯಕ್ಕೆ ಅನ್ವಯಿಸಿ ತಿದ್ದುಪಡಿ ಮಾಡಲಾಗಿದೆ. ಕೇಂದ್ರ ಅಧಿನಿಯಮಕ್ಕೆ ತಿದ್ದುಪಡಿ ತಂದಿರುವುದರಿಂದ ಈ ಮಸೂದೆಯನ್ನು ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಳುಹಿಸಿಕೊಡಲಾಗಿತ್ತು.

ರಾಷ್ಟ್ರಪತಿಗಳ ಅಂಕಿತದ ನಂತರ ಇದೀಗ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದ್ದು, ಇನ್ನು ಮುಂದೆ ರಾಜ್ಯದಲ್ಲಿ 21 ವಯೋಮಿತಿ ಒಳಗಿನ ವ್ಯಕ್ತಿಗಳಿಗೆ ಸಿಗರೇಟು, ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ. ಪ್ರಸ್ತುತ ತಂಬಾಕು ಉತ್ಪನ್ನಗಳನ್ನು ಖರೀದಿಸುವುದಕ್ಕೆ ಕನಿಷ್ಠ ವಯೋಮಾನ 18 ಇದೆ. ಈಗ ಆ ವಯೋಮಾನವನ್ನು 21 ವರ್ಷಕ್ಕೆ ಏರಿಕೆ ಮಾಡಲಾಗಿದೆ. ಯಾವುದೇ ಶಿಕ್ಷಣ ಸಂಸ್ಥೆಯ 100 ಮೀಟರ್ ಸುತ್ತಳತೆಯೊಳಗಿನ ಪ್ರದೇಶದೊಳಗೆ, ಬಿಡಿಯಾಗಿ ಅಥವಾ ಒಂಟಿ ಕಡ್ಡಿಯಾಗಿ ಸಿಗರೇಟ್ ಮಾರಾಟವನ್ನು ನಿಷೇಧಿಸಲಾಗಿದೆ.

ಸಿಗರೇಟು ಅಥವಾ ಯಾವುದೇ ಇತರ ತಂಬಾಕು ಉತ್ಪನ್ನದ ಮಾರಾಟ ಮಾಡುವಂತಿಲ್ಲ. ಅಥವಾ ಮಾರಾಟಕ್ಕೆ ಅನುಮತಿ ನೀಡುವಂತಿಲ್ಲ. ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಉತ್ಪನ್ನಗಳ ಬಳಕೆಯನ್ನು ನಿಷೇಧಿಸಲಾಗಿದೆ. ಯಾವುದೇ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಉತ್ಪನ್ನವನ್ನು ಬಳಸುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಮತ್ತು ತಂಬಾಕು ಉಗಿಯುವಂತಿಲ್ಲ.

ಪ್ರತ್ಯೇಕ ಧೂಮಪಾನ ಪ್ರದೇಶಕ್ಕೆ ಅವಕಾಶ: ಮೂವತ್ತು ಕೊಠಡಿಗಳನ್ನು ಹೊಂದಿರುವ ಹೋಟೆಲ್ ಅಥವಾ ಮೂವತ್ತು ಅಥವಾ ಅದಕ್ಕೂ ಹೆಚ್ಚಿನ ವ್ಯಕ್ತಿಗಳಿಗೆ ಆಸನ ಸಾಮರ್ಥ್ಯ ಹೊಂದಿರುವ ರೆಸ್ಟೋರೆಂಟ್ ಮತ್ತು ವಿಮಾನ ನಿಲ್ದಾಣಗಳಲ್ಲಿ ಒಂದು ಪ್ರತ್ಯೇಕ ಧೂಮಪಾನ ಪ್ರದೇಶ ಅಥವಾ ಸ್ಥಳಕ್ಕೆ ಅವಕಾಶವನ್ನು ಕಲ್ಪಿಸಬಹುದಾಗಿದೆ.

ಹುಕ್ಕಾಬಾರ್ ನಿಷೇಧ: ಈ ತಿದ್ದುಪಡಿ ಕಾಯ್ದೆ ಪ್ರಕಾರ ಹುಕ್ಕಾ ಬಾರ್ ತೆರೆಯುವುದು ಅಥವಾ ನಡೆಸುವುದಕ್ಕೆ ನಿಷೇಧಿಸಲಾಗಿದೆ. ಯಾರೇ ವ್ಯಕ್ತಿಯು ತಾನಾಗಿಯಾಗಲಿ ಅಥವಾ ಯಾರೇ ಇತರ ವ್ಯಕ್ತಿಯ ಪರವಾಗಿಯಾಗಲಿ ಉಪಹಾರ ಗೃಹ ಅಥವಾ ಪಬ್ ಅಥವಾ ಬಾರು ಅಥವಾ ರೆಸ್ಟೋರೆಂಟ್ ಒಳಗೊಂಡಂತೆ ಯಾವುದೇ ಸ್ಥಳದಲ್ಲಿ ಹುಕ್ಕಾ ಬಾರನ್ನು ತೆರೆಯುವಂತಿಲ್ಲ ಹಾಗೂ ನಡೆಸುವಂತಿಲ್ಲ. ಹುಕ್ಕಾ ಎಂದರೆ, ಪ್ರತ್ಯೇಕವಾಗಿ ಒದಗಿಸಲಾಗುವ ಸಾಮೂಹಿಕ ಹುಕ್ಕಾ ಅಥವಾ ನರ್ಫಿಲ್ನಿಂದ ತಂಬಾಕನ್ನು ಅಥವಾ ಇತರೆ ಅದೇ ರೀತಿಯ ತಂಬಾಕು ಉತ್ಪನ್ನಗಳನ್ನು ಧೂಮಪಾನ ಮಾಡಲು ಜನರು ಸೇರುವ ಸ್ಥಳವಾಗಿದೆ.

ಹುಕ್ಕಾ ಬಾರ್ ನಡೆಸಿದರೆ ದಂಡನೆ: ಯಾವುದೇ ವ್ಯಕ್ತಿ ಈ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಒಂದು ವರ್ಷಕ್ಕೆ ಕಡಿಮೆಯಲ್ಲದೆ, ಮೂರು ವರ್ಷಗಳಿಗೆ ವಿಸ್ತರಿಸಬಹುದಾದ ಅವಧಿಗೆ ಜೈಲುವಾಸ ಮತ್ತು ಐವತ್ತು ಸಾವಿರ ರೂಪಾಯಿಗಳಿಗಿಂದ ಒಂದು ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಲಾಗುವುದು.

ಸಾರ್ವಜನಿಕ ಸ್ಥಳ ಹಾಗೂ ಶಾಲಾ ಕಾಲೇಜುಗಳ ನೂರು ಮೀಟರ್ ಒಳಗೆ ಸಿಗರೇಟ್ ಸೇವನೆ, ತಂಬಾಕು ಸೇವನೆ ಹಾಗೂ ಮಾರಾಟ ಮಾಡಿದ್ದಲ್ಲಿ ಮತ್ತು 21 ವರ್ಷಕ್ಕೂ ಕಡಿಮೆ ಇರುವ ವ್ಯಕ್ತಿಗಳಿಗೆ ಸಿಗರೇಟ್ ಅಥವಾ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಿದರೆ 200 ರೂ.ಗಳಿಂದ 1000 ರೂ.ಗಳವರೆಗೆ ದಂಡ ವಿಧಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.


Spread the love
Share:

administrator

Leave a Reply

Your email address will not be published. Required fields are marked *