ಬಸ್ಸಿನಿಂದ ಆಯತಪ್ಪಿ ಬಿದ್ದು ಮೃತಪಟ್ಟ ಕಾಲೇಜು ವಿದ್ಯಾರ್ಥಿ

ಬಸ್ ನಿಂದ ಆಯತಪ್ಪಿ ಬಿದ್ದು ವಿದ್ಯಾರ್ಥಿಯೊರ್ವ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ನಗರದ ಬಿ.ಎಚ್. ರಸ್ತೆಯ ಮೈಲಾರೇಶ್ವರ ದೇವಾಲಯದ ಬಳಿ ಬುಧವಾರ ಬೆಳಿಗ್ಗೆ ನಡೆದಿದೆ. ದ್ಯಾನಗರ ಬಳಿಯ ಹೊಳೆಹೊನ್ನೂರು ರಸ್ತೆಯಲ್ಲಿನ ಶಾಂತಮ್ಮ ಲೇಔಟ್ ನಿವಾಸಿಗಳಾದ ವೇದ- ತೀರ್ಥಯ್ಯ ದಂಪತಿಯ ಪುತ್ರ ಯಶವಂತ್ (18) ಮೃತಪಟ್ಟ ವಿದ್ಯಾರ್ಥಿ.
ಬೆಳಗ್ಗೆ ಕಾಲೇಜಿಗೆ ಹೊರಟಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಬಸ್ಸಿನ ಫುಟ್ ಬೋರ್ಡ್ ಮೇಲೆ ನಿಂತಿದ್ದ ಆತ ಆಯತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ಹೇಳಲಾಗಿದೆ.
ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.