ಕಾಫಿ ಬೆಲೆ ಕುಸಿತ: ಲಾಭದ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ತೀವ್ರ ನಿರಾಸೆ!

ಸಕಲೇಶಪುರ: ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿ ಕಾಫಿ ಬೀಜವನ್ನು ಮಾರಾಟ ಮಾಡದೆ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದ ಬೆಳೆಗಾರರು ಈಗ ತೀವ್ರ ನಿರಾಸೆ ಅನುಭವಿಸುವಂತಾಗಿದೆ. ಧಾರಣೆ ತೀವ್ರ ಕುಸಿತ ಕಾಣುತ್ತಿದೆ

ಮಾರುಕಟ್ಟೆಯಲ್ಲಿ ಕಾಫಿ ಬೆಲೆ ನಿತ್ಯ ಇಳಿಕೆಯಾಗುತ್ತಿದ್ದು, ಮಾರ್ಚ್‌ನಲ್ಲಿ 14 ಸಾವಿರ ರೂ.ಕ್ಕೂ ಹೆಚ್ಚು ಧಾರಣೆ ಹೊಂದಿದ್ದ 28 ಒಟಿ (ಔಟ್ ಟನ್) 50 ಕೆ.ಜಿ.
ರೋಬಸ್ಟಾ ಕಾಫಿಗೆ ಈಗ 8,500 ರೂ.ನಿಂದ 9,000 ರೂ. ಸಿಗುತ್ತದಷ್ಟೆ. ಶೇಖರಿಸಿಟ್ಟ ಕಾಫಿಯ ಗುಣಮಟ್ಟ ಹಾಳಾಗುವುದರಿಂದ ಬೆಳೆಗಾರರು ಮಾರಲೇ ಬೇಕಾದ ಅನಿವಾರ್ಯಕ್ಕೆ ಸಿಲುಕಿದ್ದಾರೆ.
ಸಾಮಾನ್ಯವಾಗಿ ಡಿಸೆಂಬರ್‌ನಿಂದ ಎಪ್ರಿಲ್ ತಿಂಗಳ ಅವಧಿಯಲ್ಲಿ ಶೇ.90 ಕಾಫಿ ಮಾರುಕಟ್ಟೆ ಸೇರುತ್ತಿತ್ತು. ಆದರೆ ಕಳೆದ 2 ವರ್ಷಗಳ ಮಾರುಕಟ್ಟೆ ಏರಿಳಿತವನ್ನು ಗಮನಿಸಿದ್ದ ಬೆಳೆಗಾರ ಈ ಬಾರಿ ದಾಸ್ತಾನು ಮಾಡಿ ಕಾದು ನೋಡುವ ತಂತ್ರ ಅನುಸರಿಸಿದ್ದರಿಂದ ಮಾರುಕಟ್ಟೆ ನಡೆಯುವ ಈ 3 ತಿಂಗಳ ಅವಧಿಯಲ್ಲಿ ಶೇ.40 ಮಾತ್ರ ಕಾಫಿ ಮಾರುಕಟ್ಟೆ ಪ್ರವೇಶಿಸಿದೆ. ಉಳಿಕೆ ಫಸಲನ್ನು ಸಂಗ್ರಹಿಸಿಡಲಾಗಿತ್ತು. ಆದರೆ ತಿಂಗಳುಗಳು ಉರುಳಿದರೂ ಬೆಲೆ ಏರಿಕೆಯಾಗದ ಹಿನ್ನೆಲೆಯಲ್ಲಿ ನಿಧಾನಗತಿಯಲ್ಲಿ ಕಾಫಿಯನ್ನು ಮಾರುಕಟ್ಟೆಗೆ ಬೆಳೆಗಾರರು ತರಲು ಆರಂಭಿಸಿರುವುದರಿಂದ ಬೆಲೆ ಕುಸಿತ ಕಂಡಿದೆ. ಬೆಲೆ ಇಳಿಕೆಯಿಂದ ಆತಂಕಗೊಂಡಿರುವ ಸ್ಥಳೀಯ ವ್ಯಾಪಾರಿಗಳು ನಷ್ಟದ ಭಯದಿಂದ ಕಾಫಿ ಖರೀದಿಸುವುದನ್ನೇ ನಿಲ್ಲಿಸಿದ್ದಾರೆ.
ಕಾಫಿ ವಿಧ ಪ್ರಸ್ತುತ ಧಾರಣೆ ಮಾರ್ಚ್ ಧಾರಣೆ
ಅರೇಬಿಕಾ ಚೆರಿ 12,000-12,500 ರೂ. 15,000 ರೂ.
ಅರೇಬಿಕಾ ಪಾರ್ಚ್‌ಮೆಂಟ್ 22,000-23,000 ರೂ. 29,000 ರೂ.
ರೋಬಸ್ಟಾ ಪಾರ್ಚ್‌ಮೆಂಟ್ 16,000-17,000 ರೂ. 24,000 ರೂ.
ರೋಬಸ್ಟಾ ಚೆರಿ 8,500-9,500 ರೂ. 14,000 ರೂ.
