ಕರಾವಳಿಗೆ ಮತ್ತೆ ಮಳೆಯ ಎಚ್ಚರಿಕೆ – ಐಎಂಡಿ ಆರೆಂಜ್ ಅಲರ್ಟ್ ಪ್ರಕಟ

ದಕ್ಷಿಣ ಕನ್ನಡ/ಉಡುಪಿ: ಭಾರತ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆಯ ಪ್ರಕಾರ, ಜುಲೈ 10 ರಿಂದ 15 ರವರೆಗೆ ಕರಾವಳಿ ಪ್ರದೇಶಕ್ಕೆ ಆರೆಂಜ್ ಅಲರ್ಟ್ ನೀಡಲಾಗಿದ್ದು, ಈ ಅವಧಿಯಲ್ಲಿ ಮಧ್ಯಮದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಕರಾವಳಿ ಪ್ರದೇಶದಾದ್ಯಂತ ಬುಧವಾರ ಸಾಧಾರಣ ಮಳೆ ಸುರಿದಿದೆ, ಜಿಲ್ಲೆಯ ಹಲವು ಭಾಗಗಳಲ್ಲಿ ತುಂತುರು ಮಳೆಯಾಗಿದೆ ಎನ್ನಲಾಗಿದೆ. ಮಂಗಳೂರಿನಲ್ಲಿ ಬಿಸಿಲು ಮತ್ತು ಮೋಡ ಕವಿದ ವಾತಾವರಣವಿದೆ. ಉಡುಪಿ ಜಿಲ್ಲೆಯಲ್ಲಿ ಬುಧವಾರ ಸಾಧಾರಣ ಮಳೆಯಾಗಿದೆ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಮೋಡ ಕವಿದ ವಾತಾವರಣವಿದ್ದು, ಸಾಂದರ್ಭಿಕವಾಗಿ ಬಿಸಿಲು ಇತ್ತು ಎನ್ನಲಾಗಿದೆ.ಮಧ್ಯಾಹ್ನದ ನಂತರ, ಉಡುಪಿ, ಮಣಿಪಾಲ, ಬೈಂದೂರು, ಕುಂದಾಪುರ, ಕೋಟ, ಬ್ರಹ್ಮಾವರ, ಮಲ್ಪೆ, ಕಾರ್ಕಳ, ಹೆಬ್ರಿ, ಶಿರ್ವ, ಪಡುಬಿದ್ರಿ, ಕಾಪು ಮತ್ತು ಉಚ್ಚಿಲ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಮಳೆಯ ಚಟುವಟಿಕೆ ಚುರುಕುಗೊಂಡಿದ್ದು, ಎಲ್ಲೆಡೆ ಸಾಧಾರಣ ಮಳೆಯಾಗಿದೆ. ಐಎಂಡಿ ಮುನ್ಸೂಚನೆಯ ಪ್ರಕಾರ, ಮುಂದಿನ ಕೆಲವು ದಿನಗಳಲ್ಲಿ ಈ ಪ್ರದೇಶದಾದ್ಯಂತ ಮಧ್ಯಮ ಮಳೆ ಮುಂದುವರಿಯುವ ಸಾಧ್ಯತೆಯಿದೆ.
