ಕರಾವಳಿಯ ದೀಪಸ್ತಂಭ – ಬೇಲೂರು-ಬೈಂದೂರಿನ ಸೇನೇಶ್ವರ ದೇಗುಲ

ಕೊರೋನ ಕಾಲಘಟ್ಟವನ್ನು ದಾಟಿದ ಮೇಲೆ, ಪ್ರಪಂಚದಾದ್ಯಂತ ಪ್ರವಾಸೋದ್ಯಮ ಹೆಚ್ಚು ಗರಿಗೆದರಿತು. ತೀರ್ಥಯಾತ್ರೆ ಎಂಬುದು ನಮ್ಮ ಜನರ ಜೀವನದ ಒಂದು ಸಹಜ ಭಾಗವೇ ಆಗಿದೆ. ದೇಶದಲ್ಲಿ ಇದು ಇನ್ನೂ ಹೆಚ್ಚು ಬೆಳೆಯತೊಡಗಿದಾಗ, ದೇಶಾದ್ಯಂತ ಪ್ರವಾಸೋದ್ಯಮಕ್ಕೆ ಹಾಗೂ ಆಯಾ ಜಿ ಹಾಗೂ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವಂತಹ ಪ್ರೇಕ್ಷಣೀಯ, ಆಧ್ಯಾತ್ಮಿಕ, ಐತಿಹಾಸಿಕ ದೇಗುಲ ಕ್ಷೇತ್ರಗಳ ದರ್ಶನ ಕೈಗೊಳ್ಳಲು ಅನುಕೂಲವಾಗುವ ದೃಷ್ಟಿಯಿಂದ ಧಾರ್ಮಿಕ ಪ್ರವಾಸೋ ದ್ಯಮ ( Temple tourism ) ಎಂಬ ಪರಿಕಲ್ಪನೆಯನ್ನು 2014ರಲ್ಲಿ ಕೇಂದ್ರ ಸರಕಾರ ಪರಿಚಯಿಸಿತು.

ಪ್ರಸಾದ್ ( PRASAD-Pilgrimage Rejuvenation and Spiritual Augmentation Drive ) ಮತ್ತು ಸ್ವದೇಶ ದರ್ಶನ ( Swadesh Darshan ) ಯೋಜನೆಗಳ ನೆರವಿನಿಂದ ದೇವಾಲಯ ಪ್ರವಾಸೋದ್ಯಮ ಯೋಜನೆಗಳ ಮೂಲಕ ಪಕ್ಕದ ಆಂಧ್ರಪ್ರದೇಶ ರಾಜ್ಯವು ತನ್ನ ಪ್ರಮುಖ ತೀರ್ಥಕ್ಷೇತ್ರಗಳು ಮತ್ತು ಹೆರಿಟೇಜ್ ಕ್ಷೇತ್ರಗಳಲ್ಲಿ ಮೂಲಸೌಕರ್ಯ, ಸಂಪರ್ಕಮಾರ್ಗ ಹಾಗೂ ಯಾತ್ರಿಕರ ನಿವಾಸಸ್ಥಾನ ಗಳನ್ನು ಸಮರ್ಪಕವಾಗಿ ಒದಗಿಸುವ ಮೂಲಕ ಈ ಯೋಜನೆ ಯನ್ನು ಅತ್ಯಂತ ಯಶಸ್ವಿಯಾಗಿ ಸದುಪಯೋಗ ಪಡಿಸಿಕೊಳ್ಳುತ್ತಿದೆ.
ಉಳಿದ ರಾಜ್ಯಗಳು ಇದರಲ್ಲಿ ಹೆಚ್ಚು ಆಸಕ್ತಿ ತೋರುತ್ತಿವೆ. ಕಬ್ಬಿಣದ ಬೃಹತ್ ಐಫೆಲ್ ಟವರ್ ಒಂದನ್ನು ಇಟ್ಟುಕೊಂಡು, ವಿಶ್ವ ಪ್ರವಾಸೋದ್ಯಮದಲ್ಲಿ ತನ್ನ ಅಗ್ರಸ್ಥಾನ ಕಾಯ್ದುಕೊಂಡಿರುವ ಫ್ರಾನ್ಸ್ ದೇಶವನ್ನು ಗಮನಿಸಿದಾಗ, ನಾವು ನಮ್ಮ ಸುತ್ತಮುತ್ತಲಿರುವ ನಮ್ಮದೇ ಪೂರ್ವಜರ ಐತಿಹಾಸಿಕ ದಾಖಲೆಗಳಂತೆ ತಲೆಯೆತ್ತಿ ನಿಂತಿರುವ ದೇವಾಲಯ, ಶಿಲ್ಪಕಲಾ ಪರಂಪರೆಯನ್ನು ಗುರುತಿಸಿ ಗೌರವಿಸುವುದನ್ನು ಮತ್ತು ಅದನ್ನು ಪ್ರವಾಸೋದ್ಯಮದ ಪ್ರಮುಖ ಭಾಗವಾಗಿ ಜೋಡಿಸಿ ಕೊಳ್ಳುವುದನ್ನು ಮರೆಯುತ್ತಿದ್ದೇವೆ.
ಕೇಂದ್ರ ಸರಕಾರದದ ಯೋಜನೆಗಳು ಜನಪರವಾಗಿದ್ದರೂ ಸ್ಥಳೀಯ ವ್ಯವಸ್ಥೆಯು ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳದಿದ್ದರೆ ಸ್ಮಾರಕಗಳು ಉಳಿಯುವ ಬಗೆಯಾದರೂ ಹೇಗೆ? ಎಂಬು ದನ್ನು ನಾವೆಲ್ಲ ಪ್ರಶ್ನಿಸಿಕೊಳ್ಳಬೇಕಾಗಿದೆ. ಇಂತಹ ವಿಚಾರದಲ್ಲಿ ನಮ್ಮ ಕರಾವಳಿ ಭಾಗವು ಇಡೀ ರಾಜ್ಯದ ವಿಭಿನ್ನ ಮತ್ತು ವಿಶಿಷ್ಟವಾಗಿ ನಿಲ್ಲುತ್ತದೆ. ಸಮರ್ಪಕ ರಾಷ್ಟ್ರೀಯ ಹೆದ್ದಾರಿಗಳು ಇಲ್ಲಿನ ಎಲ್ಲ ಪ್ರಮುಖ ದೇಗುಲ, ಪ್ರೇಕ್ಷಣೀಯ ಸ್ಥಳಗಳನ್ನು ಜೋಡಿಸುತ್ತವೆ.
ವಿಮಾನ ಯಾನ, ರಸ್ತೆಸಾರಿಗೆ, ರೈಲುನಿಲ್ದಾಣಗಳಂತಹ ಸೌಕರ್ಯಗಳ ಮೂಲಕ ಕರ್ನಾಟಕದ ಕರಾವಳಿ ಪ್ರದೇಶವು ರಾಷ್ಟ್ರಮಟ್ಟದ ಧಾರ್ಮಿಕ ಪ್ರವಾಸೋದ್ಯಮದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆಯುವಷ್ಟು ಸಾಮರ್ಥ್ಯ ಹೊಂದಿದೆ. ಕೊಲ್ಲೂರು ಮೂಕಾಂಬಿಕಾ ದೇವಾಲಯ ದೇಶದ ಹಲವೆಡೆಗಳಿಂದ ಭಕ್ತರನ್ನು ಸೆಳೆಯುವ ಮೂಲಕ ರಾಜ್ಯ, ಅಂತರಾಜ್ಯ ಶಕ್ತಿ ಕ್ಷೇತ್ರವಾಗಿ ಗುರುತಿಸಿ ಕೊಂಡಿದ್ದರೆ, ಬೈಂದೂರಿನ ಇತಿಹಾಸ ಪ್ರಸಿದ್ಧ ಸೋಮೇಶ್ವರ ದೇವಸ್ಥಾನ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಇಂತಹ ಒಂದು ಐತಿಹಾಸಿಕ, ನಾಡಿನ ದೇವಾಲ ಯಗಳ ಶಿಲ್ಪಕಲೆಯ ವಿಶಿಷ್ಟ ಸ್ಥಾನ ಹೊಂದಿರುವ ಬೈಂದೂರಿನ ಮತ್ತೊಂದು ಐತಿಹಾಸಿಕ ಸೇನೇಶ್ವರ ದೇವಸ್ಥಾನ ಈ ಸಾಲಿಗೆ ಸೇರುತ್ತದೆ. ಬೆರಗಿನ ಶಿಲಕ್ಪಕಲೆಯ ವಿನ್ಯಾಸ ಹೊಂದಿರುವ ಈ ದೇಗುಲವು ಧಾರ್ಮಿಕ ಪ್ರವಾಸೋದ್ಯಮಕ್ಕೆ ( Temple tourism ) ಹೇಳಿ ಮಾಡಿಸಿದ ದೇವಾಲಯಗಳಲ್ಲಿ ಇದೂ ಒಂದಾಗಿದೆ ಎಂದರೆ ಅತಿಶಯೋಕ್ತಿಯಾಗ ಲಾರದು!
