ಹಿಮಾಚಲದಲ್ಲಿ ಮೇಘಸ್ಫೋಟ ಮತ್ತು ರಣಪ್ರವಾಹ ತಾಂಡವ: ಇಬ್ಬರ ಸಾವು, 2000ಕ್ಕೂ ಹೆಚ್ಚು ಪ್ರವಾಸಿಗರು ಸಿಲುಕಿದ ಭೀತಿ

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಕುಂಭದ್ರೋಣ ಮಳೆಯಾಗಿದೆ. ಕೆಲವು ಪ್ರಮುಖ ಸ್ಥಳಗಳಲ್ಲಿ ಮೇಘಸ್ಫೋಟವಾಗಿದ್ದು ಭಾರೀ ಮಳೆಯಿಂದಾಗಿ ಹಲವೆಡೆ ಭೂಕುಸಿತ, ರಣಪ್ರವಾಹ ಮತ್ತು ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ. ಈವರೆಗೂ ಇಬ್ಬರು ಸಾವನ್ನಪ್ಪಿದ್ದು ಹನ್ನೊಂದು ಮಂದಿ ನಾಪತ್ತೆಯಾಗಿದ್ದಾರೆ. ಹಲವೆಡೆ ಪ್ರವಾಸಿಗರು ಸಿಲುಕಿದ್ದು ರಕ್ಷಣಾ ಕಾರ್ಯಚರಣೆ ಭರದಿಂದ ಸಾಗಿದೆ.
ಜನ ಜೀವನ ಅಸ್ಥವ್ಯಸ್ಥ
ಹಿಮಾಚಲ ಪ್ರದೇಶದಲ್ಲಿ ಕುಂಭದ್ರೋಣ ಮಳೆಗೆ ಜನ ಜೀವನ ಅಸ್ಥವ್ಯಸ್ಥಗೊಂಡಿದೆ. ಕುಲು ಜಿಲ್ಲೆಯ ಸೈನ್ಜ್ ಕಣಿವೆ, ಜೀಭಿ, ತೀರ್ಥನ್, ಮತ್ತು ಮಣಿಕರಣ್-ಬಂಜರ್ ಕಣಿವೆಗಳಲ್ಲಿ ಮೇಘಸ್ಫೋಟ ಸಂಭವಿಸಿದೆ. ಪಾರ್ವತಿ ನದಿಯು ಉಕ್ಕಿ ಹರಿದಿದ್ದು, ರಣಪ್ರವಾಹಕ್ಕೆ ಕಾರಣವಾಗಿದೆ. ಕಾಂಗ್ರಾ ಜಿಲ್ಲೆಯ ಧರ್ಮಶಾಲಾದಲ್ಲಿ ಭಾರೀ ಮಳೆಯಾಗುತ್ತಿದ್ದು ಪ್ರವಾಹದಲ್ಲಿ 15-20 ಕಾರ್ಮಿಕರು ನೀರಿನಲ್ಲಿ ಕೊಚ್ಚಿಹೋಗಿರುವ ಶಂಕೆಯಿದೆ. ರಾಂಪುರ್, ಜಮತ್ಖಾನಾ, ನಿರ್ಮಂದ್, ಮತ್ತು ಅನಿ ಪ್ರದೇಶಗಳಲ್ಲಿ ಮೇಘಸ್ಫೋಟದಿಂದ 15-25 ವಾಹನಗಳು ಕೊಚ್ಚಿಹೋಗಿವೆ ಮತ್ತು ರಸ್ತೆ-ಸೇತುವೆಗಳಿಗೆ ಹಾನಿಯಾಗಿದೆ.
ಹವಮಾನ ಇಲಾಖೆ ಪ್ರಕಾರ ಪಾಲಂಪುರ್ 145, ನಹಾನ್ 99, ಪೌಂಟಾ ಸಾಹಿಬ್ 58, ಧರ್ಮಶಾಲಾ 54 ಕಂಗ್ರಾ 44, ನರಕಂದ 40, ಕಸೌಲಿ 22, ಮಂಡಿ 16, ಶಿಮ್ಲಾ 14 ಮಿಲಿ ಮೀಟರ್ ಮಳೆಯಾಗಿದೆ. ಮುಂದಿನ 24 ಗಂಟೆಗಳಲ್ಲಿ ಹಗುರಿಂದ ಮಳೆ ಮುಂದುವರಿಯುವ ಸಾಧ್ಯತೆಯಿದೆ, ಮತ್ತು ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಬಹುದು ಎಂದು ಎಚ್ಚರಿಕೆ ನೀಡಿದೆ.


ವರುಣಾರ್ಭಟಕ್ಕೆ ಪ್ರವಾಸಿ ತಾಣದಲ್ಲಿ ಅನಾಹುತ
ಭಾರಿ ಮಳೆಯಿಂದ ಹಲವೆಡೆ ಭೂ ಕುಸಿತ ಸಂಭವಿಸಿದೆ. ಧರ್ಮಶಾಲಾ-ಚಟಾರೊ-ಗಗ್ಗಲ್ ರಸ್ತೆಯಲ್ಲಿ ಭೂಕುಸಿತದಿಂದ ಸಂಚಾರ ಸ್ಥಗಿತಗೊಂಡಿದೆ. 8-10 ವಾಹನಗಳು ಕೊಚ್ಚಿಹೋಗಿವೆ, 10 ವಾಹನಗಳು ನೀರಿನಲ್ಲಿ ಸಿಲುಕಿವೆ. ಕುಲುವಿನ ಸೈನ್ಜ್ ಕಣಿವೆಯಲ್ಲಿ ಮನೆಗಳು, ರಸ್ತೆಗಳು, ಮತ್ತು ಸೇತುವೆಗಳಿಗೆ ಹಾನಿಯಾಗಿದೆ. ಜಮತ್ಖಾನಾದಲ್ಲಿ 24-25 ವಾಹನಗಳಿಗೆ ತೀವ್ರ ಹಾನಿಯಾಗಿದೆ. ರಾಜ್ಯದಲ್ಲಿ ಒಟ್ಟು 171 ರಸ್ತೆಗಳು ಹಾಳಾಗಿದ್ದು, 550 ವಿದ್ಯುತ್ ಟ್ರಾನ್ಸಫಾರಂಗಳು ಕೆಟ್ಟುಹೋಗಿವೆ. ವಿಮಾನ ಹಾರಾಟಲ್ಲೂ ವ್ಯತ್ಯಯವಾಗಿದೆ.
ಸೈನ್ಜ್ ಕಣಿವೆಯಲ್ಲಿ ಮೇಘಸ್ಫೋಟದಿಂದಾಗಿ, ಸಿಯುಂಡ್‌ನಲ್ಲಿರುವ NHPC ಯ ಪವರ್ ಹೌಸ್‌ನಲ್ಲಿ ನಿಯೋಜಿಸಲಾದ ಮೂರನೇ ಬೆಟಾಲಿಯನ್ ಪಾಂಡೋಹ್‌ನ ಗಾರ್ಡ್‌ನ ವಸತಿ ಕೊಠಡಿ ಹಾನಿಗೊಳಗಾಗಿದೆ. ಇಲ್ಲಿ ನಿಯೋಜಿಸಲಾದ ಸುಮಾರು 10 ಪೊಲೀಸ್ ಜವಾನ್‌ಗಳು ಧರಿಸಿದ್ದ ಬಟ್ಟೆಗಳನ್ನು ಬಿಟ್ಟು ಎಲ್ಲವೂ ಕೊಚ್ಚ ಹೋಗಿದೆ. ಸೈನಿಕರ 3-4 ಶಸ್ತ್ರಾಸ್ತ್ರಗಳೂ ಕೂಡಾ ಕೊಚ್ಚಿ ಹೋಗಿವೆ. ಒಬ್ಬ ಪೊಲೀಸ್ ಜವಾನ್ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಕುಲ್ಲು ಆಸ್ಪತ್ರೆಗೆ ಕರೆತರಲಾಗಿದೆ.

2000 ಪ್ರವಾಸಿಗರಿಗೆ ಸಂಕಷ್ಟ
ಕುಲುವಿನಲ್ಲಿ ರಣಪ್ರವಾಹಕ್ಕೆ ಇಬ್ಬರು ಬಲಿಯಾಗಿದ್ದಾರೆ, ಸ್ಥಳೀಯ ಮಾಹಿತಿ ಪ್ರಕಾರ ಅಪ್ಪ-ಮಗಳು ಸೇರಿದಂತೆ ಮೂವರು ಕೊಚ್ಚಿಹೋಗಿರುವ ಶಂಕೆಯಿದೆ. ಧರ್ಮಶಾಲಾ ಬಳಿಯ ಖಾನಿಯಾರಾದ ಮನುನಿ ಖಾದ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಜಲವಿದ್ಯುತ್ ಯೋಜನೆಯ 10ಕ್ಕೂ ಹೆಚ್ಚು ಕಾರ್ಮಿಕರು ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ ಎಂದು ವರದಿಯಾಗಿದೆ. ಇಲ್ಲಿಯವರೆಗೆ, ಇಬ್ಬರ ಶವಗಳನ್ನು ಹೊರತೆಗೆಯಲಾಗಿದೆ. ಎಸ್‌ಡಿಆರ್‌ಎಫ್ ತಂಡಗಳು ಸ್ಥಳದಲ್ಲಿದ್ದು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಸೈನ್ಜ್ ಕಣಿವೆಯ ಶಂಶಾರ್, ಶಂಘಾಡ್ ಮತ್ತು ಸುಚೈಹಾನ್ ಪಂಚಾಯತ್ ಪ್ರದೇಶಗಳಲ್ಲಿ 2,000 ಕ್ಕೂ ಹೆಚ್ಚು ಪ್ರವಾಸಿಗರು ಮತ್ತು 150ಕ್ಕೂ ಹೆಚ್ಚು ಪ್ರವಾಸಿ ವಾಹನಗಳು ಸಿಲುಕಿಕೊಂಡಿವೆ, 25 ಪ್ರವಾಸಿಗರು ಲಹೌಲ್‌ನಲ್ಲಿಯೂ ಸಿಲುಕಿಕೊಂಡಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಗಳು ಮತ್ತು ಸ್ಥಳೀಯ ರಕ್ಷಣಾ ತಂಡಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ, ಆದರೆ ರಸ್ತೆಗಳ ಹಾನಿಯಿಂದಾಗಿ ಕೆಲವು ಪ್ರದೇಶಗಳಿಗೆ ತಲುಪುವುದು ಕಷ್ಟವಾಗಿದೆ. ಉನಾ, ಬಿಲಾಸ್ಪುರ್, ಹಮೀರ್ಪುರ್, ಚಂಬಾ, ಕಾಂಗ್ರಾ, ಮಂಡಿ, ಸೋಲನ್ ಮತ್ತು ಸಿರ್ಮೌರ್ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕುಲ್ಲು ಮತ್ತು ಶಿಮ್ಲಾ ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ ನೀಡಲಾಗಿದೆ. ಮುಂದಿನ 24 ಗಂಟೆಗಳಲ್ಲಿ, ಕೆಲವು ಜಲಾನಯನ ಪ್ರದೇಶಗಳು ಮತ್ತು ಹಿಮಾಚಲ ಪ್ರದೇಶದ ಚಂಬಾ, ಕಾಂಗ್ರಾ, ಮಂಡಿ, ಶಿಮ್ಲಾ ಮತ್ತು ಸಿರ್ಮೌರ್ ಜಿಲ್ಲೆಗಳ ಪಕ್ಕದ ಪ್ರದೇಶಗಳಲ್ಲಿ ಹಗುರದಿಂದ ಮಧ್ಯಮ ಪ್ರವಾಹ ಉಂಟಾಗುವ ಸಾಧ್ಯತೆಯಿದೆ. ಸ್ಥಳೀಯ ಆಡಳಿತ ತುರ್ತು ಕ್ರಮ ತೆಗೆದುಕೊಳ್ತಿದೆ.