ಹಿರಿಯ ಅಧಿಕಾರಿಗೆ ನೀರಿನ ಬದಲು ಮೂತ್ರ ಕುಡಿಸಿದ ಗುಮಾಸ್ತ ಬಂಧನ, ತನಿಖೆ ಆರಂಭ!

ಭುವನೇಶ್ವರ: ಆಘಾತಕಾರಿ ಸುದ್ದಿಯೊಂದು ಒಡಿಶಾದ (Odisha) ಗಜಪತಿ ಜಿಲ್ಲೆಯಿಂದ ಹೊರಬಿದ್ದಿದೆ. ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ (RWSS) ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಗುಮಾಸ್ತನೊಬ್ಬ ಹಿರಿಯ ಅಧಿಕಾರಿಗೆ ನೀರಿನ ಬದಲು ಮೂತ್ರ (Urine) ಕುಡಿಸಿರುವ ಆರೋಪ ಕೇಳಿಬಂದಿದೆ.

ಪ್ರಕರಣ ಸಂಬಂಧ ಆರೋಪಿ ಸಿಬಾ ನಾರಾಯಣ್ ನಾಯಕ್ ನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಜೂನಿಯರ್ ಎಂಜಿನಿಯರ್ ಸಚಿನ್ ಗೌಡ ಅವರ ಔಪಚಾರಿಕ ದೂರಿನ ಆಧಾರದ ಮೇಲೆ ಈತನನ್ನು ಬಂಧಿಸಲಾಗಿದೆ. ಜುಲೈ 23 ರ ರಾತ್ರಿ ಇಬ್ಬರೂ ಆರ್‌ಡಬ್ಲ್ಯೂಎಸ್‌ಎಸ್ ಕಚೇರಿಯಲ್ಲಿ ತಡರಾತ್ರಿಯವರೆಗೆ ಕೆಲಸ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.
ಸಚಿನ್ ಗೌಡ ದೂರಿನಲ್ಲೇನಿದೆ..?: ನಾನು ಮತ್ತು ಇತರ ಇಬ್ಬರು ಉದ್ಯೋಗಿಗಳು, SDO ಕ್ವಾರ್ಟರ್ಸ್‌ನಿಂದ ಉದ್ಯೋಗಿ ಸಿಬಾ ತಂದಿದ್ದ ಸ್ಟೇನ್‌ಲೆಸ್ ಸ್ಟೀಲ್ ಬಾಟಲಿಯಿಂದ ನೀರು ಕುಡಿದೆವು. ಕುಡಿದ ಸ್ವಲ್ಪ ಸಮಯದ ಬಳಿಕ ಅಸಾಮಾನ್ಯ ವಾಸನೆ ಮತ್ತು ರುಚಿಯನ್ನು ಗಮನಿಸಿದ್ದೇವೆ, ಅದು ನೀರಿನ ಗುಣಮಟ್ಟದ ಬಗ್ಗೆ ನಮಗೆ ಅನುಮಾನ ಮೂಡಿಸಿತು.
ಇದಾದ ನಂತರ ನೀರಿನ ಗುಣಮಟ್ಟವನ್ನು ಅಳೆಯಲು ಅದನ್ನು ಪಾರದರ್ಶಕ ಬಾಟಲಿಯಲ್ಲಿ ಇರಿಸಿ ಸೂಕ್ಷ್ಮವಾಗಿ ಪರಿಶೀಲಿಸಲಾಯಿತು. ಆಗ ನೀರು ಕಲುಷಿತವಾಗಿದೆ ಎಂದು ಇದು ಸ್ಪಷ್ಟವಾಗಿ ತೋರಿಸಿದೆ. ಮಾದರಿಯನ್ನು ಉಪ-ವಿಭಾಗೀಯ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಯಿತು. ನೀರಿನಲ್ಲಿ ಅಮೋನಿಯದ ಸಾಂದ್ರತೆಯು 2 ಮಿಗ್ರಾಂ/ಲೀಟರ್‌ಗಿಂತ ಹೆಚ್ಚಿರುವುದು ಕಂಡುಬಂದಿದೆ.
ಹೆಚ್ಚಿನ ತನಿಖೆಯಲ್ಲಿ ನೀರಿನಲ್ಲಿ ಮೂತ್ರ ಇರುವುದು ದೃಢಪಟ್ಟಿತು. ಕುಡಿದ ನಂತರ, ನನಗೆ ಗಂಟಲಿನಲ್ಲಿ ಸೋಂಕು ತಗುಲಿ ಚಿಕಿತ್ಸೆಗೆ ಒಳಗಾಗಬೇಕಾಯಿತು. ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ಸ್ಪಷ್ಟವಾಗಿ ತೋರಿಸುತ್ತವೆ. ನನಗೆ ಹಾನಿ ಮಾಡಲು ಪಿತೂರಿ ನಡೆಸಲಾಗಿತ್ತು. ಇದು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯೂ ಆಗಿದೆ ಎಂದಿದ್ದಾರೆ.
ಅಲ್ಲದೇ ಸಚಿನ್ ಗೌಡ ತಮ್ಮ ದೂರಿನಲ್ಲಿ, ತಮ್ಮ ಜೊತೆ ವಾಸಿಸುತ್ತಿದ್ದ ಇತರ ಇಬ್ಬರು ಸಿಬ್ಬಂದಿ ಕೂಡ ಅದೇ ನೀರನ್ನು ಸೇವಿಸಿದ್ದಾರೆ ಮತ್ತು ಅದರ ರುಚಿ ಮತ್ತು ಗುಣಮಟ್ಟದ ಬಗ್ಗೆ ಇದೇ ರೀತಿಯ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಆರೋಪಿ ಹೇಳಿದ್ದೇನು..?: ನಾನು ಅಕ್ವಾ ಗಾರ್ಡ್ ನಿಂದ ನೀರು ತಂದಿದ್ದೆ. ರಾತ್ರಿ ಸರ್ (ಇಂಜಿನಿಯರ್) ಗೆ ಊಟ ತಂದ ನಂತರ, ನಾನು ಬಾಟಲಿಯನ್ನು ಆಹಾರದ ಜೊತೆಗೆ ತೆಗೆದುಕೊಂಡು ಹೋಗಿ ಅಲ್ಲಿಯೇ (ಜೆಇ ಕೋಣೆಯಲ್ಲಿ) ಇಟ್ಟಿದ್ದೆ. ಅಷ್ಟರಲ್ಲಿ ಏನಾಯಿತು ಎಂದು ನನಗೆ ತಿಳಿದಿಲ್ಲ. ಅಧಿಕಾರಿಗಳು ಹೇಳಿಕೊಳ್ಳುತ್ತಿರುವಂತೆ ನಾನು ಏನನ್ನೂ ಮಾಡಿಲ್ಲ. ನಾನು ಅಸಹಾಯಕ, ಆದ್ದರಿಂದ ನಾನು ಎಲ್ಲವನ್ನೂ ದೇವರಿಗೆ ಬಿಟ್ಟಿದ್ದೇನೆ ಎಂದು ಆರೋಪಿ ಹೇಳಿರುವುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಇತ್ತ ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಸಚಿನ್ ಗೌಡ ಅವರು ಪಟ್ನಾಯಕ್ ಪೊಲೀಸ್ ದೂರು ದಾಖಲಿಸಿದರು. ಈ ದೂರಿನ ಮೇರೆಗೆ ಪೊಲೀಸರು ನಾಯಕ್ ಅವರನ್ನು ಬಂಧಿಸಿದರು. ಅಧಿಕಾರಿಗಳು ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಮತ್ತು ಕೃತ್ಯದ ಹಿಂದಿನ ಉದ್ದೇಶವನ್ನು ಕಂಡುಹಿಡಿಯಲು ತನಿಖೆಯನ್ನು ಪ್ರಾರಂಭಿಸಿದ್ದಾರೆ.
