‘ಸ್ವಚ್ಛ ಕೊಡಗು ಸುಂದರ ಕೊಡಗು’: ತಲಕಾವೇರಿ ಬಳಿ ಕಸ ಎಸೆದ ಪೊಲೀಸರಿಗೆ ಸ್ಥಳೀಯರಿಂದ ಶಾಕ್; ಅವರ ಕೈಯಿಂದಲೇ ಕಸ ಹೆಕ್ಕಿಸಿ ದಿಟ್ಟತನ ಮೆರೆದ ಜನ

ಕರ್ನಾಟಕದ ಕಾಶ್ಮೀರ ಕರ್ನಾಟದ ಸ್ಕಾಟ್‌ಲ್ಯಾಂಡ್ ಎಂದೆಲ್ಲಾ ಕರೆಸಿಕೊಳ್ಳುವ ಕೊಡಗು ಸುಂದರ ಪ್ರವಾಸಿ ತಾಣ, ಇಲ್ಲಿಗೆ ಪ್ರತಿದಿನವೂ ಪ್ರವಾಸಿಗರು ಭೇಟಿ ನೀಡುತ್ತಲೇ ಇರುತ್ತಾರೆ. ಇಲ್ಲಿನ ಅಬ್ಬಿಪಾಲ್ಸ್, ರಾಜಾಸೀಟ್, ತಲಕಾವೇರಿ, ಚಿಕ್ಲಿ ಡ್ಯಾಂ, ಹೀಗೆ ಕೊಡಗು ತನ್ನ ಮಡಿಲಲ್ಲಿ ಹಲವು ಮನೋ ರಮಣೀಯ ಕಣ್ಣೀಗೆ ತಂಪೆರೆಯುವ ಜೊತೆ ಮನಸಿಗೆ ಮುದ ನೀಡುವ ಹಲವು ತಾಣಗಳನ್ನು ಹೊಂದಿದೆ. ಇಂತಹ ಕೊಡಗಿಗೆ ಪ್ರವಾಸಿಗರಿಗಿಂತ ಹೆಚ್ಚು ಸಮಸ್ಯೆಯಾಗಿರುವುದ ಅವರು ನಿಸರ್ಗದ ಮಡಿಲಲ್ಲಿ ಎಸೆದು ಹೋಗುತ್ತಿರುವ ಕಸ. ಇದು ಬರೀಯ ಕೊಡಗಿನ ಸಮಸ್ಯೆಯಲ್ಲ ಬಹುತೇಕ ಎಲ್ಲಾ ಪ್ರವಾಸಿ ತಾಣಗಳ ಕತೆಯೂ ಇದೇ ಆಗಿದೆ. ಪ್ರವಾಸಕ್ಕೆಂದು ಬರುವ ಪ್ರವಾಸಿಗರು ಕೊಡಗಿನ ಮಡಿಲಲ್ಲಿ ಪರಿಸರದಲ್ಲಿ ಕರಗದ ಕಸವನ್ನು ಎಸೆದು ಪರಿಸರ ಹಾಳು ಮಾಡಿ ಹೋಗುತ್ತಿದ್ದಾರೆ. ಇದರ ವಿರುದ್ಧ ಈ ಹಿಂದೆಯೂ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಕೊಡಗಿನ ಕೆಲ ಸಂಘಟನೆಗಳು ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡಿದ್ದರು. ಕೆಲ ದಿನಗಳ ಹಿಂದೆ ಇಲ್ಲಿ ಪ್ರವಾಸಿಗರು ಕಾರಿನಿಂದ ಎಸೆದ ಕಸವನ್ನು ಅವರನ್ನೇ ಹಿಂಬಾಲಿಸಿ ಹೋಗಿ ಮತ್ತೆ ಎತ್ತಿಸಿದಂತಹ ಘಟನೆ ನಡೆದಿತ್ತು.

ತಲಕಾವೇರಿ ಬಳಿ ಕಸ ಎಸೆದ ಪೊಲೀಸರು
ಈ ಎಲ್ಲಾ ಘಟನೆಗಳ ಮಧ್ಯೆ ಈಗ ಕೊಡಗಿನ ಜನ ಪರಿಸರದ ಶುಚಿತ್ವದ ಬಗ್ಗೆ ಮತ್ತಷ್ಟು ಜಾಗರೂಕರಾಗಿದ್ದು, ತಮ್ಮ ಪ್ರದೇಶದಲ್ಲಿ ಕಸ ಎಸೆದ ಪೊಲೀಸರಿಂದಲೇ ಕಸವನ್ನು ಹೆಕ್ಕಿಸುವ ಮೂಲಕ ದಿಟ್ಟತನ ಮೆರೆದಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. ಕಾವೇರಿ ಉಗಮ ಸ್ಥಾನವಾದ ಕೊಡಗಿನ ಭಾಗಮಂಡಲದ ತಲಕಾವೇರಿಯಲ್ಲಿ ನಿನ್ನೆಯಷ್ಟೇ ಕಾವೇರಿ ಸಂಕ್ರಮಣ ನಡೆದು ಹೋಯ್ತು. ಕಾವೇರಿತೀರ್ಥರೂಪಿಣಿಯಾಗಿ ಉಕ್ಕಿ ಹರಿದು ಬರುವ ಈ ಕ್ಷಣವನ್ನು ನೋಡುವುದಕ್ಕೆ ಸಾವಿರಾರು ಜನ ಈ ತಲಕಾವೇರಿಗೆ ಸಾಗಿ ಬರುತ್ತಾರೆ. ಕಾವೇರಿ ಎಲ್ಲೆಲ್ಲೆ ಹರಿದು ಹೋಗುವಳೋ ಅಲ್ಲಿನ ಜನರೆಲ್ಲರೂ ಕಾವೇರಿಯನ್ನು ಆರಾಧಿಸುವುದರಿಂದ ಬರೀ ಕರ್ನಾಟಕದ ಜನ ಮಾತ್ರವಲ್ಲ, ತಮಿಳುನಾಡಿಗರು ಈ ಕ್ಷಣವನ್ನು ನೋಡುವುದಕ್ಕೆ ಕಾವೇರಿ ಉಗಮ ಸ್ಥಾನಕ್ಕೆ ಆಗಮಿಸುತ್ತಾರೆ.
ಎಸೆದ ಕಸವನ್ನು ಪೊಲೀಸರಿಂದಲೇ ಎತ್ತಿಸಿದ ಸ್ಥಳೀಯರು
ಹೀಗಾಗಿ ನಿನ್ನೆ ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದು, ಜನರನ್ನು ನಿಯಂತ್ರಿಸುವುದಕ್ಕಾಗಿ ಅಲ್ಲಿ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ಕೂಡ ನಿಯೋಜಿಸಲಾಗಿತ್ತು. ಆದರೆ ಕರ್ತವ್ಯದಲ್ಲಿದ್ದ ಪೊಲೀಸರು ತಮ್ಮ ವಾಹನದಲ್ಲಿದ್ದ ಕಸವನ್ನು ಅಲ್ಲಿ ರಸ್ತೆ ಬದಿ ಎಸೆದಿದ್ದಾರೆ. ಆದರೆ ಅಲ್ಲಿದ್ದ ಸ್ಥಳೀಯರು ಧೈರ್ಯ ತೋರಿದ್ದು, ಕಸವನ್ನು ಅಲ್ಲಿಂದ ಎತ್ತುವಂತೆ ಪೊಲೀಸರಿಗೆ ಹೇಳಿದ್ದು, ಪೊಲೀಸರಿಂದಲೇ ಕಸವನ್ನು ಎತ್ತಿಸಿದ್ದಾರೆ. ಇನ್ಸ್ಟಾಗ್ರಾಮ್ ಪೇಜ್ coorg_buzzನಲ್ಲಿ ಈ ವೀಡಿಯೋ ಪೋಸ್ಟ್ ಆಗಿದ್ದು, ಸ್ಥಳೀಯರ ಕೆಲಸಕ್ಕೆ ಅನೇಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಸ್ವಚ್ಛ ಕೊಡಗು ಸುಂದರ ಕೊಡಗು, ಜನ ಜಾಗೃತರಾಗಿದ್ದಾರೆ… ತಲಕಾವೇರಿ ತೀರ್ಥೋದ್ಭವ ಹಿನ್ನೆಲೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಹೊರ ಜಿಲ್ಲೆಯ ಪೊಲೀಸ್ ಸಿಬ್ಬಂದಿ ತಮ್ಮ ವಾಹನದಲ್ಲಿದ್ದ ಕಸವನ್ನು ಭಾಗಮಂಡಲ ಮುಖ್ಯ ದ್ವಾರದ ಬಳಿ ರಸ್ತೆ ಬದಿ ಎಸೆದಿದ್ದರು. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮನವರಿಕೆ ಮಾಡಿ ಅದನ್ನು ಅಲ್ಲಿಂದ ತೆಗೆಸಿದ್ದಾರೆ ಎಂದು ವೀಡಿಯೋ ಪೋಸ್ಟ್ ಮಾಡಿ ಬರೆಯಲಾಗಿದೆ. ವೀಡಿಯೋ ನೋಡಿದ ಅನೇಕರು ಕಾಮೆಂಟ್ ಮಾಡಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಜನ ಪ್ರಶ್ನೆ ಮಾಡಲು ಆರಂಭಿಸಿದಾಗ ದೇಶ ಉದ್ಧಾರವಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಅನೇಕರು ಕೊಡಗಿನ ಜನರ ಧೈರ್ಯವನ್ನು ಶ್ಲಾಘಿಸಿದ್ದಾರೆ. ಪ್ರತಿ ಗ್ರಾಮದಲ್ಲಿ ಪ್ರತಿ ಜಿಲ್ಲೆಯಲ್ಲಿ ಜನ ಹೀಗೆ ವರ್ತಿಸಬೇಕು ಹಾಗಾದಾಗ ಮಾತ್ರ ನಮ್ಮ ದೇಶ ಸ್ವಚ್ಛ ಸುಂದರ ಆಗುವುದಕ್ಕೆ ಸಾಧ್ಯ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಈಗ ಭಾರಿ ವೈರಲ್ ಆಗಿದೆ.