ಕೋರ್ಟ್ ಬಳಿ ಗನ್ ತೋರಿಸಿ ಸಿನಿಮೀಯ ಶೈಲಿಯಲ್ಲಿ ಅಪಹರಣ

ಬೆಂಗಳೂರು: ಗನ್ ತೋರಿಸಿ ಸಿನಿಮಾ ಸ್ಟೈಲ್‍ನಲ್ಲಿ ವ್ಯಕ್ತಿಯೊಬ್ಬನನ್ನು ಕಿಡ್ನ್ಯಾಪ್ (Kidnap) ಮಾಡಿದ ಘಟನೆ ಆನೇಕಲ್ (Anekal) ಕೋರ್ಟ್ (Court) ಬಳಿ ನಡೆದಿದೆ.

ವಾಬಸಂದ್ರ ನಿವಾಸಿ ಶ್ರೀನಿಧಿ (29) ಕಿಡ್ನ್ಯಾಪ್ ಆದ ವ್ಯಕ್ತಿ. ಆನೇಕಲ್ ಕೋರ್ಟ್ ಬಳಿಯ ವಕೀಲ ನಂದೀಶ್ ಕಛೇರಿ ಬಳಿ ಅಪಹರಣವಾಗಿದೆ. ಜು.4 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಆಸ್ತಿ ವಿವಾದ ಸಂಬಂಧ ಮಾತುಕತೆಗೆ ವಕೀಲ ನಂದೀಶ್, ಶ್ರೀನಿಧಿಯವರನ್ನು ಕರೆಸಿದ್ದರು. ಮಾತುಕತೆ ಮುಗಿಸಿ ಹೊರ ಬರುತ್ತಿದ್ದಂತೆ ಸ್ಕಾರ್ಪಿಯೋ ಕಾರಿನಲ್ಲಿ ಅವರನ್ನು ಅಪಹರಿಸಲಾಗಿತ್ತು. ಅಪಹರಣದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಣ್ಣಿಗೆ ಬಟ್ಟೆ ಕಟ್ಟಿ ಬಡಾವಣೆಯೊಂದಕ್ಕೆ ಕರೆದೊಯ್ದು ಹಲ್ಲೆ ನಡೆಸಲಾಗಿದೆ. ಅಲ್ಲದೇ ಗನ್ ತೋರಿಸಿ ನಿನ್ನ ಜಮೀನನ್ನು ಪದ್ಮನಾಭ ರಾವ್‍ಗೆ ರಿಜಿಸ್ಟರ್ ಮಾಡಬೇಕು. ಇಲ್ಲದಿದ್ದರೆ ನಿನ್ನ ಮತ್ತು ತಂದೆ ರಾಮಣ್ಣನ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಜೀವ ಭಯದಿಂದ ರಿಜಿಸ್ಟರ್ ಮಾಡಿಕೊಡಲು ಒಪ್ಪಿಕೊಂಡಿದ್ದರು. ಇತ್ತ ಸರ್ಜಾಪುರ ಸಬ್ ರಿಜಿಸ್ಟರ್ ಕಚೇರಿಯಲ್ಲಿ ತನ್ನದೇ ಅಕೌಂಟ್ ನಿಂದ ಹಣ ಪಾವತಿಸಿ ವಕೀಲ ನಂದೀಶ್ ರಿಜಿಸ್ಟರ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದ.
ತನ್ನ ಮೇಲ್ ಐಡಿಯಿಂದ ದಾಖಲೆಗಳನ್ನು ಅಪ್ಲೋಡ್ ಮಾಡಿ, ಕಿಡ್ನ್ಯಾಪರ್ಸ್‍ಗಾಗಿ ನಂದೀಶ್ & ಗ್ಯಾಂಗ್ ಕಾಯುತ್ತಿತ್ತು. ಶ್ರೀನಿಧಿಯವರನ್ನು ಕರೆತರುತ್ತಿದ್ದಂತೆ ತುಟಿ ಬಿಚ್ಚದೇ ಜಮೀನು ರಿಜಿಸ್ಟರ್ ಮಾಡುವಂತೆ ತಾಕೀತು ಮಾಡಿದ್ದರು. ಸಬ್ ರಿಜಿಸ್ಟರ್ ಒಳ ಹೋಗುತ್ತಿದ್ದಂತೆ ಕ್ಲರ್ಕ್ ಕೊಠಡಿಗೆ ಹೋಗಿ ನನ್ನನ್ನು ಕಿಡ್ನಾಪ್ ಮಾಡಿದ್ದು, ಪೊಲೀಸರಿಗೆ ಮಾಹಿತಿ ನೀಡಿ ಎಂದು ಶ್ರಿನಿಧಿ ಕಿರುಚಾಡಿದ್ದಾರೆ.
ಪೊಲೀಸರು ಬರುತ್ತಿದ್ದಂತೆ ವಕೀಲ ನಂದೀಶ್ & ಗ್ಯಾಂಗ್ ಪರಾರಿಯಾಗಿದೆ. ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
