ಸಿನಿಮಾ ಸ್ಟೈಲ್ನಲ್ಲಿ ವಿಮೆ ಹಣಕ್ಕಾಗಿ ಕೊಲೆ: ಬಳ್ಳಾರಿಯಲ್ಲಿ ಅನಾಥರ ಹೆಸರಿನಲ್ಲಿ ಕೋಟಿ ವಿಮೆ ಮಾಡಿಸಿದ ಜಾಲ ಭೇದಿಸಿದ ಹೊಸಪೇಟೆ ಪೊಲೀಸರು

ಬಳ್ಳಾರಿ: ಅನಾಥರು ಮತ್ತು ತೀವ್ರ ಅನಾರೋಗ್ಯ ಪೀಡಿತರ ಹೆಸರಲ್ಲಿ ಕೋಟ್ಯಂತ ರೂಪಾಯಿ ವಿಮೆ ಮಾಡಿಸಿ, ವಿಮೆ ಹಣಕ್ಕಾಗಿ ಸಿನಿಮಾ ಸ್ಟೈಲ್ನಲ್ಲಿ ಕೊಲೆ ಮಾಡುತ್ತಿದ್ದ ಜಾಲವೊಂದನ್ನ ಹೊಸಪೇಟೆ (Hospet) ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಇನ್ಶುರೆನ್ಸ್ ಹಣಕ್ಕಾಗಿ ಕೊಲೆ ಮಾಡಿ, ಅದನ್ನ ಅಪಘಾತ ಎಂದು ಈ ಗ್ಯಾಂಗ್ ಬಿಂಬಿಸುತ್ತಿತ್ತು ಎಂಬ ಆಘಾತಕಾರಿ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದ್ದು, ಓರ್ವ ಮಹಿಳೆ ಸೇರಿ 6 ಜನರನ್ನ ಅರೆಸ್ಟ್ ಮಾಡಲಾಗಿದೆ.

ಕಳೆದ ತಿಂಗಳ ಸೆಪ್ಟೆಂಬರ್ 28ರಂದು ಸಂಜೆ 6 ಗಂಟೆ ಸುಮಾರಿಗೆ ಸಂಡೂರು ರಸ್ತೆಯ ಎಚ್ಎಲ್ಸಿ ಕೆನಾಲ್ ಬಳಿ ಭೀಕರ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಕೌಲ್ಪೇಟೆ ನಿವಾಸಿ ಗಂಗಾಧರ ಕೆ. ಎಂಬುವವರು ಮೃತಪಟ್ಟಿದ್ದರು. ಮಾಹಿತಿ ಆಧರಿಸಿ ಸ್ಥಳಕ್ಕೆ ಭೇಟಿ ನೀಡಿದ್ದ ಸಂಚಾರಿ ಠಾಣೆ ಪೊಲೀಸರು, ಮೋಟರ್ ಸೈಕಲ್ ಬಿದ್ದಿದ್ದು ಸೇರಿ ಹಲವು ಅಂಶಗಳನ್ನ ಗಮನಿಸಿ ಇದು ಕೊಲೆಯಾಗಿರಬಹುದು ಎಂದು ಅನುಮಾನಿಸಿದ್ದರು. ಮೃತನ ಗುರುತು ಪತ್ತೆಯಾಗುತ್ತಿದ್ದಂತೆ ಆತನ ಪತ್ನಿ ಶಾರದಾಳನ್ನ ಕರೆಸಿ ಈ ಬಗ್ಗೆ ವಿಚಾರಣೆ ಮಾಡಲಾಗಿದೆ. ಈ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ ಶಾರದಾ, ಗಂಗಾಧರ ಅವರು ಕೆಲ ವರ್ಷಗಳಿಂದ ಪಾರ್ಶ್ವವಾಯು ರೋಗಿಯಾಗಿದ್ದರು. ನಡೆದಾಡಲೂ ಕಷ್ಟ ಎಂಬ ಸ್ಥಿತಿಯಲ್ಲಿದ್ದ ಅವರು, ಮೋಟರ್ ಸೈಕಲ್ ಓಡಿಸುವುದಾದರೂ ಹೇಗೆ? ಅವರ ಬಳಿ ದ್ವಿಚಕ್ರ ವಾಹನವೇ ಇಲ್ಲ ಎಂಬ ವಿಷಯ ತಿಳಿಸಿದ್ದಾರೆ. ಈ ವೇಳೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಖತರ್ನಾಕ್ ಪ್ಲ್ಯಾನ್
ಇದೊಂದು ಕೊಲೆ ಎಂದು ಗೊತ್ತಾಗುತ್ತಿದ್ದಂತೆ ಪ್ರಕರಣದ ಬೆನ್ನತ್ತಿದ ಪೊಲೀಸರು 6 ಜನ ಆರೋಪಿಗಳನ್ನ ಬಂಧಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿ ಕೃಷ್ಣಪ್ಪ, ಹೊಸಲಿಂಗಾಪುರದ ರವಿ ಗೋಸಂಗಿ, ವಿಜಯನಗರ ಜಿಲ್ಲೆಯ ಹೊಸಪೇಟೆ ನಿವಾಸಿಗಳಾದ ಅಜಯ್, ರಿಯಾಜ್, ಯೋಗರಾಜ್ ಸಿಂಗ್, ಹಾಗೂ ಹುಲಿಗೆಮ್ಮ ಬಂಧಿತ ಆರೋಪಿಗಳಾಗಿದ್ದಾರೆ. ಗಂಗಾಧರ್ ಗೆ 5 ಕೋಟಿ 25 ಲಕ್ಷ ರೂಪಾಯಿಗಳ ವಿಮೆ ಮಾಡಿಸಿದ್ದ ಗ್ಯಾಂಗ್, ನಾಮಿನ ಹಣ ಪಡೆಯಲು ರಿಜಿಸ್ಟರ್ ಮ್ಯಾರೇಜ್ ನ ನಕಲಿ ದಾಖಲೆಯನ್ನೂ ಸೃಷ್ಟಿ ಮಾಡಿತ್ತು ಎಂಬುದು ತನಿಖೆ ವೇಳೆ ಗೊತ್ತಾಗಿದೆ.