ನ್ಯಾ. ಕುನ್ಹಾ ವರದಿ ವಿರುದ್ಧ DNA ಕೋರ್ಟ್ ದಾರಿ: ಚಿನ್ನಸ್ವಾಮಿ ಘಟನೆಗೆ ಹೊಸ ತಿರುವು

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟ ಘಟನೆ ಸಂಬಂಧ ನ್ಯಾ.ಮೈಕೆಲ್ ಕುನ್ಹಾ ವರದಿಯನ್ನು ರದ್ದುಗೊಳಿಸಬೇಕು ಎಂದು ತುರ್ತು ವಿಚಾರಣೆ ಕೋರಿ ಡಿಎನ್ಎ ಎಂಟರ್ಟೇನ್ಮೆಂಟ್ ನೆಟ್ವರ್ಕ್ ಕರ್ನಾಟಕ ಹೈಕೋರ್ಟ್ಗೆ ಮನವಿ ಮಾಡಿದೆ. ನ್ಯಾ.ಜಯಂತ್ ಬ್ಯಾನರ್ಜಿ, ನ್ಯಾ.ಎಸ್.ಜಿ.ಪಂಡಿತ್ ಅವರಿದ್ದ ಪೀಠಕ್ಕೆ ಮನವಿ ಸಲ್ಲಿಕೆಯಾಗಿದೆ. ನ್ಯಾ.ಮೈಕೆಲ್ ಕುನ್ಹಾ ವರದಿಯನ್ನು ಕರ್ನಾಟಕ ಸಚಿವ ಸಂಪುಟ ಅಂಗೀಕರಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಸದ್ಯ, ಈ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಜುಲೈ 28ಕ್ಕೆ ನಿಗದಿಪಡಿಸಿದೆ.

ಸರ್ಕಾರ ತನ್ನ ಮುಖ ಉಳಿಸಿಕೊಳ್ಳಲು ಆಯೋಗ ರಚಿಸಿದಂತಿದೆ. ನ್ಯಾ.ಕುನ್ಹಾ ಆಯೋಗದ ವರದಿ ಏಕಪಕ್ಷೀಯವಾಗಿದೆ. ಸಾಕ್ಷಿಗಳ ಪಾಟೀಸವಾಲಿಗೆ ಅವಕಾಶ ನೀಡಲಾಗಿಲ್ಲ. ಅರ್ಜಿದಾರರ ವರ್ಚಸ್ಸಿಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಪೂರ್ವಯೋಜಿತವಾಗಿಯೇ ವರದಿ ಲೀಕ್ ಮಾಡಲಾಗಿದೆ. ಹೀಗಾಗಿ ವರದಿಯನ್ನೇ ರದ್ದುಪಡಿಸಬೇಕು ಎಂದು ರಿಟ್ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ್ದ ಕಾಲ್ತುಳಿತ ಘಟನೆ ಸಂಬಂಧ ಕರ್ನಾಟಕ ಸಚಿವ ಸಂಪುಟ ಗುರುವಾರ ಮಹತ್ವದ ತೀರ್ಮಾನ ಕೈಗೊಂಡಿತ್ತು. ಪ್ರಕರಣ ಸಂಬಂಧ ಪೊಲೀಸರ ವಿರುದ್ಧ ಇಲಾಖಾ ತನಿಖೆಗೆ ಮತ್ತು ಆರ್ಸಿಬಿ, ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಡಿಎನ್ಎ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಸಚಿವ ಸಂಪುಟ ತೀರ್ಮಾನಿಸಿತ್ತು. ಇದರಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ರಘುರಾಮ್ ಭಟ್, ಮಾಜಿ ಕಾರ್ಯದರ್ಶಿ ಎ.ಶಂಕರ್, ಮಾಜಿ ಖಜಾಂಚಿ ಜಯರಾಂ, ಆರ್ಸಿಬಿ ತಂಡದ ರಾಜೇಶ್ ಮೆನನ್, ಡಿಎನ್ಎ ನೆಟ್ವರ್ಕ್ ಲಿಮಿಟೆಡ್ ಎಂಡಿ ವೆಂಕಟ್ ವರ್ಧನ್ , ಡಿಎನ್ಎ ನೆಟ್ವರ್ಕ್ ಲಿಮಿಟೆಡ್ ಉಪಾಧ್ಯಕ್ಷ ಸುನೀಲ್ ಮಾಥೂರ್ ಇವರಿಗೆ ಸಂಕಷ್ಟ ಎದುರಾಗಿದೆ. ಇದರ ಬೆನ್ನಲ್ಲೇ ಹೈಕೋರ್ಟ್ಗೆ ಡಿಎನ್ಎ ಅರ್ಜಿ ಸಲ್ಲಿಸಿದೆ.
ಸದ್ಯ ಡಿಎನ್ಎ ಎಂಟರ್ಟೇನ್ಮೆಂಟ್ ನೆಟ್ವರ್ಕ್ ರಿಟ್ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿರುವ ಹೈಕೋರ್ಟ್, ಜುಲೈ 28ಕ್ಕೆ ವಿಚಾರಣೆ ನಡೆಸಲಿದೆ. ಹೈಕೋರ್ಟ್ ತೀರ್ಪು ಯಾರ ಪರ ಬರಲಿದೆ ಎಂಬುದನ್ನು ಕಾದುನೋಡಬೇಕಿದೆ.
