ಚೀನಾದ ಸುಳ್ಳು ಪ್ರಚಾರ ಬಯಲು: ಆಪರೇಷನ್ ಸಿಂಧೂರ್ ವೇಳೆ ರಫೇಲ್ ಬಗ್ಗೆ ದುಷ್ಪ್ರಚಾರ ನಡೆಸಿದ ಪಾಕಿಸ್ತಾನ-ಚೀನಾ ಸಂಚು

ಫ್ರಾನ್ಸ್: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ದಾಳಿಗೆ ಪ್ರತ್ಯುತ್ತರಾಗಿ ಭಾರತ ಪಾಕಿಸ್ತಾನದ ಮೇಲೆ ನಡೆಸಿದ ಆಪರೇಷನ್ ಸಿಂಧೂರ್ ಬಳಿಕ, ಪಾಕಿಸ್ತಾನವು ಸುಳ್ಳು ಪ್ರಚಾರ ಮಾಡಿ ಯುದ್ಧದಲ್ಲಿ ತನ್ನದೇ ಗೆಲುವು ಎಂದು ಬೀಗಿತ್ತು. ಆದರೆ ಸತ್ಯ ಏನೆಂಬುದು ಇಡೀ ವಿಶ್ವಕ್ಕೆ ತಿಳಿದಿದೆ.

ಈಗ ಫ್ರೆಂಚ್ ಗುಪ್ತಚರ ಸಂಸ್ಥೆ ಆಪರೇಷನ್ ಸಿಂಧೂರ್ ಸಮಯದಲ್ಲಿ ನಡೆದ ಮತ್ತೊಂದು ಕುತೂಹಲಕಾರಿ ಸಂಗತಿಯನ್ನು ಬಯಲಿಗೆಳೆದಿದೆ. ಇದರಲ್ಲಿ ಪಾಕಿಸ್ತಾನದ ಜತೆಗೆ ಚೀನಾ ಪಾತ್ರವು ಕೂಡ ಗೋಚರಿಸುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ವರದಿ ಪ್ರಕಾರ, ಚೀನಾ ರಫೇಲ್ ಯುದ್ಧ ವಿಮಾನಗಳ ಖ್ಯಾತಿಗೆ ಹಾನಿಯುಂಟು ಮಾಡುವ ಉದ್ದೇಶದಿಂದ ಈ ಯುದ್ಧ ವಿಮಾನಗಳ ಕುರಿತು ಅಪಪ್ರಚಾರ ಮಾಡಲು ಶುರು ಮಾಡಿತ್ತು. ರಫೇಲ್ ಯುದ್ಧ ವಿಮಾನದ ಖರೀದಿ ಕಡಿತಗತೊಳಿಸುವುದು ನಿಜವಾದ ಉದ್ದೇಶವಾಗಿತ್ತು ಎಂಬುದು ತಿಳಿದುಬಂದಿದೆ.

ಭಾರತ – ಪಾಕಿಸ್ತಾನ 2004 ರಲ್ಲಿ ನಡೆದ ಮಿಲಿಟರಿ ಘರ್ಷಣೆ ಮತ್ತು ಆಪರೇಷನ್ ಸಿಂಧೂರ್ ನಂತರ ಇದು ತೀವ್ರಗೊಂಡಿದೆ. ಭಾರತೀಯ ವಾಯುಪಡೆಯು SCALP ಕ್ಷಿಪಣಿಗಳೊಂದಿಗೆ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ನಿಖರವಾದ ದಾಳಿ ನಡೆಸಿದಾಗ, ಚೀನಾವು ಫ್ರೆಂಚ್ ಯುದ್ಧ ವಿಮಾನ ರಫೇಲ್ ಅನ್ನು ಪಾಕಿಸ್ತಾನ ಹೊಡೆದುರುಳಿಸಿತು ಎಂದು ಸುಳ್ಳು ಹೇಳಲು ಶುರು ಮಾಡಿತ್ತು. ಅಷ್ಟೇ ಅಲ್ಲದೆ ಚೀನಾದ ಶಸ್ತ್ರಾಸ್ತ್ರಗಳನ್ನು ಉಪಯೋಗಿಸಿಕೊಂಡೇ ರಫೇಲ್ ವಿಮಾನವನ್ನು ಹೊಡೆದುರುಳಿಸಿತ್ತು ಎಂದು ಹೇಳಿದೆ.
ಚೀನಾ ಉದ್ದೇಶವೇನಾಗಿತ್ತು? ಫ್ರೆಂಚ್ ಗುಪ್ತಚರ ವರದಿ ಪ್ರಕಾರ, ಚೀನಾ ತನ್ನ ರಾಯಭಾರ ಕಚೇರಿಗಳು, ಸಾಮಾಜಿಕ ಜಾಲತಾಣಗಳು ಹಾಗೂ ಪ್ರಾಕ್ಸಿ ಖಾತೆಗಳ ಮೂಲಕ ಸುಳ್ಳು ಸುದ್ದಿಗಳನ್ನು ಹರಡಿತ್ತು. ಈ ನಕಲಿ ವರದಿಗಳಲ್ಲಿ, ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ವಾಯುಪಡೆಯ ರಫೇಲ್ ಯುದ್ಧ ವಿಮಾನಗಳನ್ನು ನಾಶಪಡಿಸಲಾಗಿದೆ.
ಡಸಾಲ್ಟ್ ಏವಿಯೇಷನ್ ತಯಾರಿಸಿದ ರಫೇಲ್ ವಿಮಾನದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವುದು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಚೀನಾ ನಿರ್ಮಿತ ಜೆ -10 ಯುದ್ಧ ವಿಮಾನಗಳನ್ನು ಪ್ರಚಾರ ಮಾಡುವುದು ಈ ಅಭಿಯಾನದ ಉದ್ದೇಶವಾಗಿತ್ತು. ಇದರ ಪರಿಣಾಮವಾಗಿ ಇಂಡೋನೇಷ್ಯಾದಂತಹ ಸಂಭಾವ್ಯ ಗ್ರಾಹಕ ರಾಷ್ಟ್ರಗಳು ಈಗ ರಫೇಲ್ ಖರೀದಿಯನ್ನು ಮರುಪರಿಶೀಲಿಸುತ್ತಿವೆ.

ಆದಾಗ್ಯೂ , ಫ್ರೆಂಚ್ ವರದಿಗಳ ಈ ಆರೋಪಗಳನ್ನು ಚೀನಾ ಸಂಪೂರ್ಣವಾಗಿ ತಿರಸ್ಕರಿಸಿದೆ. ಬೀಜಿಂಗ್ ಇದನ್ನು ಆಧಾರರಹಿತ ಮತ್ತು ರಾಜಕೀಯ ಪ್ರೇರಿತ ಎಂದು ಕರೆದಿದೆ. ಆಪರೇಷನ್ ಸಿಂಧೂರ್‌ನಲ್ಲಿ ರಫೇಲ್ ವಿಮಾನಗಳು ಪ್ರಮುಖ ಪಾತ್ರ ವಹಿಸಿವೆ ಮತ್ತು SCALP ಕ್ಷಿಪಣಿಗಳೊಂದಿಗೆ ನಡೆಸಿದ ದಾಳಿಗಳು ನಿಖರ ಮತ್ತು ಪರಿಣಾಮಕಾರಿ ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಡಸಾಲ್ಟ್ ಏವಿಯೇಷನ್ ಸಿಇಒ ಎರಿಕ್ ಟ್ರಾಪಿಯರ್ ಪಾಕಿಸ್ತಾನ ಮತ್ತು ಚೀನಾದ ಮಾಧ್ಯಮ ವರದಿಗಳನ್ನು ಸುಳ್ಳು ಮತ್ತು ದಾರಿತಪ್ಪಿಸುವಂತಿದೆ ಎಂದು ಕರೆದಿದ್ದಾರೆ. ಕಾರ್ಯಾಚರಣೆ ಸಂಪೂರ್ಣವಾಗಿ ಯಶಸ್ವಿಯಾಗಿದೆ ಮತ್ತು ರಫೇಲ್ ಸಾಮರ್ಥ್ಯದ ಬಗ್ಗೆ ಯಾವುದೇ ಪ್ರಶ್ನೆಯನ್ನು ಎತ್ತಲಾಗುವುದಿಲ್ಲ ಎಂದು ಅವರು ಹೇಳಿದರು.
ಚೀನಾದ ಈ ನಡೆಯಿಂದ ಪರಿಣಾಮ ಏನಾಗಬಹುದು? ಈ ಇಡೀ ಘಟನೆಯು ಭಾರತ-ಫ್ರಾನ್ಸ್ ನಡುವಿನ ರಕ್ಷಣಾ ಸಹಕಾರ ಪ್ರಬಲವಾಗಿದೆ ಎಂಬುದನ್ನು ತೋರಿಸುತ್ತದೆ. ಆದರೆ ಜಾಗತಿಕ ಶಸ್ತ್ರಾಸ್ತ್ರ ಮಾರುಕಟ್ಟೆಯಲ್ಲಿ ತಂತ್ರಜ್ಞಾನ ಮಾತ್ರವಲ್ಲದೆ ಪ್ರಚಾರ ಮತ್ತು ಮಾಹಿತಿ ಯುದ್ಧವೂ ನಿರ್ಣಾಯಕ ಪಾತ್ರ ವಹಿಸುತ್ತಿದೆ ಎಂಬುದು ಕಳವಳಕಾರಿ ವಿಷಯವಾಗಿದೆ. ಈ ವಿವಾದವು ಇಂಡೋನೇಷ್ಯಾ, ಮಲೇಷ್ಯಾ ಮತ್ತು ಅರಬ್ ದೇಶಗಳಂತಹ ಸಂಭಾವ್ಯ ರಫೇಲ್ ಖರೀದಿದಾರರ ಮೇಲೆ ಮತ್ತಷ್ಟು ಪರಿಣಾಮ ಬೀರಬಹುದು ಎಂದು ತಜ್ಞರು ಹೇಳಿದ್ದಾರೆ. ಕನಿಷ್ಠ ಪಕ್ಷ ಅವರು ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಲಾಗುತ್ತದೆ.
