‘ಬಾಲಕರ ಮೇಲಿನ ಅತ್ಯಾಚಾರ ಕಟ್ಟುಕತೆ ಅಲ್ಲ’: ದೆಹಲಿ ನ್ಯಾಯಾಲಯದ ಮಹತ್ವದ ತೀರ್ಪು

ನವದೆಹಲಿ: ಬಾಲಕನ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಗೆ ದೆಹಲಿ ನ್ಯಾಯಾಲಯವೊಂದು 15 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ್ದು, ಬಾಲಕಿಯರು ಮಾತ್ರವೇ ಇಂಥ ಹೀನ ಅಪರಾಧಗಳಿಗೆ ಒಳಗಾಗುತ್ತಾರೆ ಎಂಬುದು ‘ಕಟ್ಟುಕತೆ’ ಎಂದು ಅಭಿಪ್ರಾಯಪಟ್ಟಿದೆ.

ಘಟನೆಯು 2019ರಲ್ಲಿ ನಡೆದಿತ್ತು.
ಹೆಚ್ಚವರಿ ಸೆಪನ್ಸ್ ನ್ಯಾಯಾಧೀಶ ಅನು ಅಗರ್ವಾಲ್ ಅವರು ಪ್ರಕರಣದ ವಿಚಾರಣೆ ನಡೆಸಿದರು. ಪೋಕ್ಸೊ ಕಾಯ್ದೆಯ ಸೆಕ್ಷನ್ 6 (ಬಲವಂತದ ಲೈಂಗಿಕ ದೌರ್ಜನ್ಯ) ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377ರ (ಅಸ್ವಾಭಾವಿಕ ಅಪರಾಧ) ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ. ಒಂದು ತಿಂಗಳಲ್ಲಿ ₹2 ಲಕ್ಷ ಪರಿಹಾರ ನೀಡುವಂತೆಯೂ ಸೂಚಿಸಲಾಗಿದೆ.
‘ಈ ಸಮಾಜವು ತೋಳ್ಬಲವನ್ನು ಭಾವನಾತ್ಮಕ ಶಕ್ತಿಯನ್ನಾಗಿ ತಪ್ಪಾಗಿ ಅರ್ಥೈಸಿದೆ. ಈ ಕಾರಣದಿಂದ ಇಂಥ ಅಪರಾಧ ಕೃತ್ಯಗಳಲ್ಲಿ ಸಂತ್ರಸ್ತರಾಗುವ ಬಾಲಕರು ಹೆಚ್ಚಿನ ಮಾನಸಿಕ ತುಮುಲಕ್ಕೆ ಒಳಗಾಗುತ್ತಾರೆ. ನಮಗೆ ಶಕ್ತಿಯಿಲ್ಲ ಎಂದುಕೊಳ್ಳುತ್ತಾರೆ. ನಾಚಿಕೆ ಪಟ್ಟುಕೊಳ್ಳುತ್ತಾರೆ’ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.
‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಂಥ ಪ್ರಕರಣಗಳಲ್ಲಿ ಶೇ 54.68ರಷ್ಟು ಸಂತ್ರಸ್ತರು ಬಾಲಕರೇ ಆಗಿದ್ದಾರೆ’ ಎನ್ನುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ನೀಡಿದ ಮಾಹಿತಿಯನ್ನು ವಿಚಾರಣೆ ವೇಳೆ, ಪಬ್ಲಿಕ್ ಪ್ರಾಸಿಕ್ಯೂಟರ್ ಅರುಣ್ ಕೆ.ವಿ. ನ್ಯಾಯಾಲಯದ ಮುಂದಿಟ್ಟಿದ್ದರು.
