ತೆಲಂಗಾಣದಲ್ಲಿ ‘ಬಾಲಿಕಾ ವಧು’ ಪ್ರಕರಣ: 13 ವರ್ಷದ ಬಾಲಕಿಯನ್ನು 40 ವರ್ಷದ ವ್ಯಕ್ತಿಗೆ ಮದುವೆ, ರಕ್ಷಿಸಿದ ಪೊಲೀಸರು!

ಹೈದರಾಬಾದ್: ತೆಲಂಗಾಣದಲ್ಲಿ ನಿಜ ಜೀವನದ ‘ಬಾಲಿಕಾ ವಧು’ (Balika Vadhu) ಪ್ರಕರಣ ಬೆಳಕಿಗೆ ಬಂದಿದ್ದು, 13 ವರ್ಷದ ಬಾಲಕಿಯನ್ನು 40 ವರ್ಷದ ವ್ಯಕ್ತಿಯೊಬ್ಬರು ಮದುವೆಯಾದ ಆಘಾತಕಾರಿ ಘಟನೆ (Shocking News) ನಡೆದಿದೆ. ರಂಗಾರೆಡ್ಡಿ ಜಿಲ್ಲೆಯಲ್ಲಿ 13 ವರ್ಷದ ಬಾಲಕಿಯ ಮದುವೆಯ ಬಗ್ಗೆ ಆಕೆಯ ಶಿಕ್ಷಕರು ಜಿಲ್ಲಾ ಮಕ್ಕಳ ರಕ್ಷಣಾ ಸೇವೆಗಳು ಮತ್ತು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಬಾಲ್ಯ ವಿವಾಹದಿಂದ ರಕ್ಷಿಸಲಾಗಿದೆ.

8ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಬಾಲಕಿಯನ್ನು ಮೇ 28ರಂದು ಕಂಡಿವಾಡಾದ 40 ವರ್ಷದ ಶ್ರೀನಿವಾಸ್ ಗೌಡ ಎಂಬ ವ್ಯಕ್ತಿಗೆ ಒತ್ತಾಯದಿಂದ ಮದುವೆ ಮಾಡಲಾಗಿದೆ.
ಬಾಲಕಿ ತನ್ನ ಶಿಕ್ಷಕರಿಗೆ ತನಗೆ ಮದುವೆಯಾದ ವಿಷಯವನ್ನು ತಿಳಿಸಿದಾಗ ಈ ಘಟನೆ ಬೆಳಕಿಗೆ ಬಂದಿತು. ನಂತರ ಆ ಶಿಕ್ಷಕಿ ತಹಶೀಲ್ದಾರ್ ರಾಜೇಶ್ವರ್ ಮತ್ತು ಇನ್ಸ್‌ಪೆಕ್ಟರ್ ಪ್ರಸಾದ್ ಅವರನ್ನು ಸಂಪರ್ಕಿಸಿದರು. “ಹುಡುಗಿ ತನ್ನ ತಾಯಿ ಮತ್ತು ಸಹೋದರನೊಂದಿಗೆ ವಾಸಿಸುತ್ತಿದ್ದಳು. ಆಕೆಯ ತಾಯಿ ತಾವು ಬಾಡಿಗೆಗೆ ವಾಸಿಸುತ್ತಿದ್ದ ಮನೆ ಮಾಲೀಕರ ಬಳಿ ತನ್ನ ಮಗಳನ್ನು ಮದುವೆ ಮಾಡುವುದಾಗಿ ತಿಳಿಸಿದ್ದಳು. ಹೀಗಾಗಿ, ಮಧ್ಯವರ್ತಿಯೊಬ್ಬರು 40 ವರ್ಷದ ವ್ಯಕ್ತಿಯನ್ನು ಕರೆತಂದರು. ಆ ಬಾಲಕಿಯ ಒಪ್ಪಿಗೆಯನ್ನೂ ಕೇಳದೆ ಅವರಿಬ್ಬರ ಮದುವೆ ಮೇ ತಿಂಗಳಲ್ಲಿ ನಡೆಯಿತು ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಹೇಳಿದ್ದಾರೆ.
“ಬಾಲಕಿಯನ್ನು ಮದುವೆಯಾದ 40 ವರ್ಷದ ವ್ಯಕ್ತಿಗೆ ಈಗಾಗಲೇ ಮದುವೆಯಾಗಿ ಹೆಂಡತಿಯೂ ಇದ್ದಾಳೆ. ಹೀಗಾಗಿ, ಆ ಪುರುಷ, ಹೆಂಡತಿ, ಹುಡುಗಿಯ ತಾಯಿ, ಮಧ್ಯವರ್ತಿ ಮತ್ತು ಅಕ್ರಮ ವಿವಾಹವನ್ನು ನಡೆಸಿದ ಪಾದ್ರಿಯ ವಿರುದ್ಧ ಬಾಲ್ಯವಿವಾಹ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯನ್ನು ಸುರಕ್ಷತೆ ಮತ್ತು ಬೆಂಬಲಕ್ಕಾಗಿ ಸಖಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಪ್ರವೀಣ್ ಕುಮಾರ್ ಅವರು ಆಕೆಗೆ ಕೌನ್ಸೆಲಿಂಗ್ ನಡೆಸುತ್ತಿದ್ದಾರೆ. “ಅವರು ಮದುವೆಯಾದ ಬಳಿಕ ಸುಮಾರು 2 ತಿಂಗಳಿನಿಂದ ಲೈಂಗಿಕ ಸಂಬಂಧವನ್ನು ಕೂಡ ಇಟ್ಟುಕೊಂಡಿದ್ದರು. ಹುಡುಗಿಯನ್ನು ಬಲವಂತವಾಗಿ ಲೈಂಗಿಕ ಸಂಬಂಧಕ್ಕೆ ಒಳಪಡಿಸಿದರೆ ಶ್ರೀನಿವಾಸ್ ಗೌಡ ಎಂಬ ವ್ಯಕ್ತಿಯ ವಿರುದ್ಧ POCSO ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು” ಎಂದು ಪೊಲೀಸರು ಹೇಳಿದ್ದಾರೆ.
ಅಪ್ರಾಪ್ತ ವಯಸ್ಕರೊಂದಿಗಿನ ಲೈಂಗಿಕ ಸಂಬಂಧವು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯಡಿಯಲ್ಲಿ ಶಿಕ್ಷಾರ್ಹವಾಗಿದೆ. ಈ ಘಟನೆಯು ತೆಲಂಗಾಣ ರಾಜ್ಯದಲ್ಲಿ ಬಾಲ್ಯವಿವಾಹದ ನಿರಂತರ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ. ರಾಜ್ಯ ಸರ್ಕಾರ ಕೂಡ ಈ ಪದ್ಧತಿಯನ್ನು ನಿಲ್ಲಿಸಲು ಹಲವಾರು ಕ್ರಮಗಳನ್ನು ಜಾರಿಗೆ ತಂದಿದೆ.