ಶಾರ್ಟ್ ಸರ್ಕ್ಯೂಟ್‌ಗೆ ಬಲಿಯಾದ ಬಾಲ ನಟ ವೀರ್ ಶರ್ಮಾ: ಕೋಟಾ ಮನೆಯ ಬೆಂಕಿಯಲ್ಲಿ ಇಬ್ಬರು ಮಕ್ಕಳು ಮೃತ್ಯು

ಹಿಂದಿ ಟಿವಿ ಧಾರವಾಹಿ ವೀರ್ ಹನುಮಾನ್‌ನಲ್ಲಿ ಲಕ್ಷಣನಾಗಿ ನಟನೆ ಮಾಡ್ತಿದ್ದ ಬಾಲ ಕಲಾವಿದ ವೀರ್ ಶರ್ಮಾ ಹಾಗೂ ಅವರ ಹಿರಿಯ ಸೋದರ ಶೌರ್ಯ ಶರ್ಮಾ ತಮ್ಮ ಮನೆಯಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಪುಟಾಣಿಗಳಿಬ್ಬರ ಈ ಹಠಾತ್ ಸಾವು ಅವರ ಪೋಷಕರು ಕುಟುಂಬವನ್ನು ಮಾತ್ರವಲ್ಲದೇ ಅವರ ಅಭಿಮಾನಿಗಳನ್ನು ತೀವ್ರ ಆಘಾತಕ್ಕೀಡು ಮಾಡಿದೆ. ಇಬ್ಬರು ಮಕ್ಕಳನ್ನು ಒಟ್ಟಿಗೆ ಕಳೆದುಕೊಂಡ ದಂಪತಿಗೆ ಈ ಘಟನೆ ಸಹಿಸಿಕೊಳ್ಳಲಾಗದಷ್ಟು ಆಘಾತ ನೀಡಿದೆ.

ಪೋಷಕರು ಮನೆಯಲ್ಲಿಲ್ಲದಾಗ ಬೆಂಕಿ ಕಾಣಿಸಿಕೊಂಡು ಮಕ್ಕಳಿಬ್ಬರು ಸಾವು
ವೀರ್ ಶರ್ಮಾಗೆ 10 ವರ್ಷವಾಗಿದ್ದರೆ, ಅವರ ಸೋದರ ಶೌರ್ಯಗೆ 15 ವರ್ಷ ವಯಸ್ಸಾಗಿತ್ತು. ಸುದ್ದಿಸಂಸ್ಥೆ ಐಎನ್‌ಎಸ್ ವರದಿಯ ಪ್ರಕಾರ, ಈ ಮಕ್ಕಳಿಬ್ಬರು ತಮ್ಮ ಮನೆಯಲ್ಲಿ ಮಲಗಿದ್ದ ವೇಳೆ ತಾವಿದ್ದ ದೀಪ್ ಶ್ರೀ ಅಪಾರ್ಟ್‌ಮೆಂಟ್‌ನ ಮನೆಯಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು, ಇಬ್ಬರು ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ. ರಾಜಸ್ಥಾನದ ಕೋಟಾದಲ್ಲಿದ್ದ ಮನೆಯಲ್ಲಿ ಈ ದುರಂತ ಸಂಭವಿಸಿದೆ. ಇವರು ಅಪಾರ್ಟ್‌ಮೆಂಟ್‌ನ 4ನೇ ಮಹಡಿಯಲ್ಲಿ ವಾಸವಿದ್ದರು. ಲೀವಿಂಗ್ ರೂಮ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಇವರಿದ್ದ ಕೋಣೆಗೆ ಬೆಂಕಿ ವ್ಯಾಪಿಸಿರಲಿಲ್ಲ. ಆದರೆ ದಟ್ಟವಾದ ಹೊಗೆ ಇವರ ಕೋಣೆಯನ್ನು ಆವರಿಸಿದ ಪರಿಣಾಮ ಉಸಿರುಕಟ್ಟಿ ಮಕ್ಕಳು ಸಾವನ್ನಪ್ಪಿದ್ದಾರೆ.
ಘಟನೆ ವೇಳೆ ಮುಂಬೈನಲ್ಲಿದ್ದ ತಾಯಿ: ಭಜನೆಗೆ ಹೋಗಿದ್ದ ತಂದೆ
ಅಕ್ಕ ಪಕ್ಕದ ಮನೆಯ ನಿವಾಸಿಗಳು ಮನೆಯಿಂದ ದಟ್ಟವಾದ ಹೊಗೆ ಬರುತ್ತಿರುವುದನ್ನು ಗಮನಿಸಿ ಸ್ಥಳಕ್ಕೆ ಬಂದು ಬಾಗಿಲು ಮುರಿದು ಒಳನುಗ್ಗಿದ್ದಾರೆ. ಕೂಡಲೇ ಇಬ್ಬರು ಮಕ್ಕಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವವರಿಬ್ಬರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಹಠಾತ್ ಆಗಿ ಸಂಭವಿಸಿದ ಈ ಘಟನೆಯಿಂದ ಪೋಷಕರು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದರೆ, ಅಕ್ಕಪಕ್ಕದ ಮನೆಯವರು ಹಾಗೂ ವೀರ್ ಶರ್ಮಾ ಅವರ ಅಭಿಮಾನಿಗಳು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಘಟನೆ ನಡೆಯುವ ವೇಳೆ ವೀರ್ ಹಾಗೂ ಶೌರ್ಯ ಶರ್ಮಾ ತಾಯಿ ನಟಿಯೂ ಆಗಿರುವ ರೀತಾ ಶರ್ಮಾ ಅವರು ಮುಂಬೈನಲ್ಲಿದ್ದರು. ಇತ್ತ ಅವರ ತಂದೆ ಜೀತೇಂದ್ರ ಶರ್ಮಾ ಅವರು ಭಜನಾ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಹೊರಗೆ ಹೋಗಿದ್ದರು ಎಂದು ತಿಳಿದು ಬಂದಿದೆ.
ಬೆಂಕಿ ಸಂಭವಿಸಿದ್ದು ಹೇಗೆ?
ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಈ ಬೆಂಕಿ ಅನಾಹುತ ಸಂಭವಿಸಿದೆ ಎಂದು ವರದಿಯಾಗಿದೆ. ಎಸ್‌ಪಿ ತೇಜೇಶ್ವಾನಿ ಗೌತಮ್ ಅವರು ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದು, ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಮಕ್ಕಳ ಡ್ರಾಯಿಂಗ್ ರೂಮ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದನ್ನು ಸುಟ್ಟು ಬೂದಿ ಮಾಡಿತು. ಘಟನೆಗ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 194ರ ಅಡಿ ಎಫ್‌ಐಆರ್ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಹಲವು ಪೌರಾಣಿಕ ಧಾರವಾಹಿಗಳಲ್ಲಿ ನಟಿಸಿ ಸಿನಿಮಾಗೂ ಸಜ್ಜಾಗಿದ್ದ ವೀರ್ ಶರ್ಮಾ
ಬಾಲಕ ವೀರ್ ಶರ್ಮಾ ಅವರು ಶ್ರೀಮದ್ ರಾಮಾಯಣ ಮತ್ತು ವೀರ್ ಹನುಮಾನ್ ಧಾರಾವಾಹಿಗಳಲ್ಲಿನ ಪಾತ್ರಗಳಿಂದ ಹೆಸರುವಾಸಿಯಾಗಿದ್ದಾರೆ. ಪೌರಾಣಿಕ ಧಾರಾವಾಹಿ ವೀರ್ ಹನುಮಾನ್ ನಲ್ಲಿ ಅವರು ಯುವ ‘ಲಕ್ಷ್ಮಣ’ನ ಪಾತ್ರದಲ್ಲಿ ನಟಿಸುವ ಮೂಲಕ ಜನಮನ್ನಣೆ ಗಳಿಸಿದ್ದರು. ಸೀರಿಯಲ್‌ನಲ್ಲಿ ಪಾತ್ರದ ಬಳಿಕ ಅವರು ಸಿನಿಮಾರಂಗಕ್ಕೂ ಪ್ರವೇಶ ಮಾಡಲು ಸಜ್ಜಾಗಿದ್ದರು. ನಟ ಜೈದೀಪ್ ಅಹ್ಲಾವತ್ ಅವರೊಂದಿಗೆ ಸಿನಿಮಾಗೂ ಪಾದಾರ್ಪಣೆ ಮಾಡಲು ರೆಡಿಯಾಗಿದ್ದರು. ವೀರ್ ಅವರ ಅಣ್ಣ ಶೌರ್ಯ ಐಐಟಿ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು.
