ಚಿಕ್ಕಮಗಳೂರು: ಅಯ್ಯಪ್ಪ ಮಾಲೆ ಧರಿಸಿದ್ದಕ್ಕೆ ವಿದ್ಯಾರ್ಥಿ ಮೇಲೆ ಶಿಕ್ಷಕರಿಂದ ಹಲ್ಲೆ ಆರೋಪ; ರೊಚ್ಚಿಗೆದ್ದ ಭಜರಂಗದಳ ಹಾಗೂ ಮಾಲಾಧಾರಿಗಳಿಂದ ಶಾಲೆಗೆ ಮುತ್ತಿಗೆ!

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಶಾಲಾ-ಕಾಲೇಜುಗಳಲ್ಲಿ ಅಯ್ಯಪ್ಪ ಮಾಲೆ ಧರಿಸುವ ವಿಚಾರವು ಇದೀಗ ಭಾರಿ ಸಂಘರ್ಷಕ್ಕೆ ಕಾರಣವಾಗಿದ್ದು, ನಗರದ ಸಂತ ಜೋಸೆಫ್ ಶಾಲೆಯಲ್ಲಿ ಮಾಲೆ ಧರಿಸಿದ ವಿದ್ಯಾರ್ಥಿಯ ಮೇಲೆ ಶಿಕ್ಷಕರು ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಧಾರ್ಮಿಕ ವ್ರತದ ಅಂಗವಾಗಿ ಮಾಲೆ ಧರಿಸಿ ಶಾಲೆಗೆ ಬಂದಿದ್ದ ವಿದ್ಯಾರ್ಥಿಯನ್ನು ಶಿಕ್ಷಕರು ದೈಹಿಕವಾಗಿ ಶಿಕ್ಷಿಸಿ, ಶಾಲೆಯಿಂದ ಹೊರಹಾಕಿದ್ದಾರೆ ಎಂದು ಪೋಷಕರು ಮತ್ತು ಸಹಪಾಠಿಗಳು ದೂರಿದ್ದಾರೆ. ಈ ವಿಷಯ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆಯೇ ಆಕ್ರೋಶಗೊಂಡ ಭಜರಂಗದಳ ಕಾರ್ಯಕರ್ತರು ಹಾಗೂ ನೂರಾರು ಅಯ್ಯಪ್ಪ ಮಾಲಾಧಾರಿಗಳು ಶಾಲಾ ಆವರಣಕ್ಕೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿದರು.


ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಶಾಲಾ ಆಡಳಿತ ಮಂಡಳಿಯು ಅಂತಿಮವಾಗಿ ಪ್ರತಿಭಟನಾಕಾರರ ಮುಂದೆ ಬಂದು ಅಯ್ಯಪ್ಪ ಮಾಲಾಧಾರಿಗಳ ಭಾವನೆಗೆ ಧಕ್ಕೆಯಾಗಿರುವುದಕ್ಕೆ ಬಹಿರಂಗವಾಗಿ ಕ್ಷಮೆಯಾಚಿಸಿದೆ. ಈ ಘಟನೆಯು ಜಿಲ್ಲೆಯಲ್ಲಿ ಧಾರ್ಮಿಕ ಆಚರಣೆ ಮತ್ತು ಶಾಲಾ ಶಿಸ್ತಿನ ನಡುವಿನ ಸಂಘರ್ಷವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

ಜಿಲ್ಲೆಯಲ್ಲಿ ಇಂತಹ ಘಟನೆಗಳು ಕಳೆದ ಒಂದು ತಿಂಗಳಿನಿಂದ ಸರಣಿಯಾಗಿ ನಡೆಯುತ್ತಿರುವುದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಕಳೆದ ಡಿಸೆಂಬರ್ 1 ರಂದು ನಗರದ MES ಪಿಯು ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿಗಳನ್ನು ಅಯ್ಯಪ್ಪ ಮಾಲೆ ಧರಿಸಿದ್ದಕ್ಕೆ ಪ್ರಿನ್ಸಿಪಾಲ್ ಅವರು ತರಗತಿಯಿಂದ ಹೊರಗೆ ಕಳುಹಿಸಿದ್ದರು. ಅಂದು ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ವೇಳೆ, ವಿದ್ಯಾರ್ಥಿಗಳಿಗೆ ಧಾರ್ಮಿಕ ಹಕ್ಕು ನಿರಾಕರಿಸಿದರೆ ನೂರಾರು ಮಕ್ಕಳಿಗೆ ಮಾಲೆ ಹಾಕಿಸುವ ಎಚ್ಚರಿಕೆಯನ್ನು ನೀಡಲಾಗಿತ್ತು. ಇದರ ಬೆನ್ನಲ್ಲೇ ಬುಧವಾರವಷ್ಟೇ (ಡಿ.17) ಮತ್ತೊಂದು ಶಾಲೆಯಲ್ಲಿ ಆರನೇ ತರಗತಿಯ ಇಬ್ಬರು ವಿದ್ಯಾರ್ಥಿಗಳನ್ನು ಮಾಲೆ ಧರಿಸಿದ್ದಕ್ಕೆ ಮನೆಗೆ ವಾಪಸ್ ಕಳುಹಿಸಿದ ಆರೋಪ ಪ್ರಭಾರಿ ಮುಖ್ಯ ಶಿಕ್ಷಕಿ ಭಾಗ್ಯ ಅವರ ಮೇಲೆ ಕೇಳಿಬಂದಿತ್ತು. ಇಷ್ಟೆಲ್ಲಾ ವಿವಾದಗಳ ನಡುವೆಯೂ ಈಗ ಸಂತ ಜೋಸೆಫ್ ಶಾಲೆಯಲ್ಲಿ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಿಗೊಳಿಸಿದೆ. ಸಾರ್ವಜನಿಕರು ಮತ್ತು ಪೋಷಕರು ಈ ವಿಚಾರದಲ್ಲಿ ಶಿಕ್ಷಣ ಇಲಾಖೆಯು ಮಧ್ಯಪ್ರವೇಶಿಸಿ ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟಿಸಬೇಕು ಮತ್ತು ತಪ್ಪಿತಸ್ಥ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
