ಚೆನ್ನೈ ಕಸ್ಟಡಿ ಸಾವು: ಅಜಿತ್ ದೇಹದ ಮೇಲೆ 44 ಗಾಯಗಳು, ಹಲ್ಲೆಯಿಂದಲೇ ಸಾವು ಎಂದ ಮರಣೋತ್ತರ ಪರೀಕ್ಷೆ!

ಚೆನ್ನೈ: ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿ ಪೋಲೀಸರ ವಿಚಾರಣೆ ಮೇಲೆ ಕಸ್ಟಡಿಯಲ್ಲೇ ದೇವಸ್ಥಾನದ ಭದ್ರತಾ ಸಿಬ್ಬಂದಿ ಅಜಿತ್ ಕುಮಾರ್ ಮೃತಪಟ್ಟಿದ್ದು ಈ ವಿಚಾರ ತಮಿಳುನಾಡಿನಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು ಇದೀಗ ಮೃತ ಯುವಕನ ಮರಣೋತ್ತರ ಪರೀಕ್ಷಾ ವರದಿ ಬಂದಿದ್ದು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಜೊತೆಗೆ ಯುವಕನ ದೇಹದ ಮೇಲೆ 44 ಗಾಯದ ಗುರುತುಗಳು ಪತ್ತೆಯಾಗಿದ್ದು ಅಲ್ಲದೆ ಮೆದುಳಿನಲ್ಲಿ ರಕ್ತ ಸ್ರಾವವಾಗಿದೆ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

ನಡೆದಿದ್ದೇನು?:
ಅಜಿತ್ ಕುಮಾರ್ (28) ತಮಿಳುನಾಡಿನ ಮಾದಾಪುರಂ ಕಾಳಿಯಮ್ಮನ್ ದೇವಸ್ಥಾನದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ, ಕಳೆದ ತಿಂಗಳು ಜೂನ್. 29 ರಂದು ವೃದ್ದ ಮಹಿಳೆಯೊಬ್ಬರು ತನ್ನ ಮೊಮ್ಮಗಳೊಂದಿಗೆ ದೇವಸ್ಥಾನಕ್ಕೆ ಕಾರಿನಲ್ಲಿ ಬಂದಿದ್ದರು ಈ ವೇಳೆ ಕಾರಿನ ಕೀ ಭದ್ರತಾ ಸಿಬ್ಬಂದಿ ಅಜಿತ್ ಕೈಗೆ ಕೊಟ್ಟು ಕಾರನ್ನು ಪಾರ್ಕ್ ಮಾಡುವಂತೆ ತಿಳಿಸಿದ್ದರು ಅದರಂತೆ ಅಜಿತ್ ಕಾರನ್ನು ಪಾರ್ಕ್ ಮಾಡಿ ಬಂದಿದ್ದ. ದೇವರ ದರ್ಶನ ಮಿಗಿಸಿ ವಾಪಸ್ಸಾಗುವ ವೇಳೆ ಕಾರಿನಲ್ಲಿದ್ದ ಚಿನ್ನಾಭರಗಳ ಬ್ಯಾಗ್ ಕಳವಾಗಿತ್ತು, ಈ ಕುರಿತು ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಅದರಂತೆ ಪೊಲೀಸರು ದೇವಳದ ಭದ್ರತಾ ಸಿಬ್ಬಂದಿ ಅಜಿತ್ ಹಾಗೂ ಇತರ ಮೂವರನ್ನು ವಿಚಾರಣೆ ಒಳಪಡಿಸಿದ್ದರು, ಈ ವೇಳೆ ಅಜಿತ್ ತಾನು ಚಿನ್ನಾಭರಣಗಳನ್ನು ಕಳವು ಮಾಡಿಲ್ಲ ಎಂದು ಹೇಳಿಕೊಂಡಿದ್ದ ಆದರೆ ಇಷ್ಟಕ್ಕೆ ಸುಮ್ಮನಿರದ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ ಈ ವೇಳೆ ಅಜಿತ್ ಕಸ್ಟಡಿಯಲ್ಲೇ ನಿಗೂಢವಾಗಿ ಮೃತಪಟ್ಟಿದ್ದ ಈ ವಿಚಾರ ಗೊತ್ತಾಗುತ್ತಿದ್ದಂತೆ ತಮಿಳುನಾಡಿನಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಯಿತು.

ಮರಣೋತ್ತರ ಪರೀಕ್ಷಾ ವರದಿಯಲ್ಲಿ ಬಯಲಾಯ್ತು ಸತ್ಯ:
ಇನ್ನು ಕಸ್ಟಡಿಯಲ್ಲಿ ನಿಗೂಢವಾಗಿ ಮೃತಪಟ್ಟ ಅಜಿತ್ ಮರಣೋತ್ತರ ಪರೀಕ್ಷಾ ವರದಿ ಬಹಿರಂಗಗೊಂಡಿದ್ದು ಅದರಲ್ಲಿ ಅಜಿತ್ ದೇಹದ ಮೇಲೆ ಸಿಗರೇಟ್ ನಿಂದ ಸುಟ್ಟ ಗಾಯದ ಕಲೆ ಸೇರಿದಂತೆ ಒಟ್ಟು ೪೪ ಗಾಯದ ಗುರುತುಗಳು ಪತ್ತೆಯಾಗಿವೆ ಅಲ್ಲದೆ ಹಲ್ಲೆಯಿಂದ ಅಜಿತ್ ಮೆದುಳಿನಲ್ಲಿ ರಕ್ತಸ್ರಾವವಾಗಿರುವುದು ಬೆಳಕಿಗೆ ಬಂದಿದೆ. ಗಂಭೀರ ಹಲ್ಲೆಗಳೇ ಅಜಿತ್ ಸಾವಿಗೆ ಕಾರಣ ಎಂಬುದು ಪರೀಕ್ಷಾ ವರದಿಯಿಂದ ಬಯಲಾಗಿದೆ.
ಆರು ಪೊಲೀಸರ ಅಮಾನತು:
ಇನ್ನು ಅಜಿತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಘಟನೆಗೆ ಸಂಬಂಧಿಸಿ ಆರು ಮಂದಿ ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
