ಚೆನ್ನೈ ಏರ್ ಇಂಡಿಯಾ ತುರ್ತು ಲ್ಯಾಂಡಿಂಗ್: ಸಂಸದ ಕೆಸಿ ವೇಣುಗೋಪಾಲ್ ಸೇರಿದಂತೆ ಪ್ರಯಾಣಿಕರಿಗೆ ಜೀವಾಪಾಯ

ಚೆನ್ನೈ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ ಕೆಸಿ ವೇಣುಗೋಪಾಲ್ ಸೇರಿದಂತೆ ಹಲವಾರು ಸಂಸದರನ್ನು ಕರೆದೊಯ್ಯುತ್ತಿದ್ದ ಏರ್ ಇಂಡಿಯಾ ವಿಮಾನ ತಾಂತ್ರಿಕ ದೋಷದ ಕಾರಣ ಚೆನ್ನೈಯಲ್ಲಿ ತುರ್ತು ಲ್ಯಾಂಡಿಗ್ ಮಾಡಿದೆ. ಭಾನುವಾರ ಸಂಜೆ ತಿರುವನಂತಪುರಂನಿಂದ ದೆಹಲಿಗೆ ಹೊರಟಿದ್ದ ವಿಮಾನ AI2455 ರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಅಲ್ಲದೆ, ಹವಾಮಾನ ವೈಪರೀತ್ಯವೂ ತುರ್ತು ಲ್ಯಾಂಡಿಂಗ್ಗೆ ಕಾರಣವಾಯಿತು ಎನ್ನಲಾಗಿದೆ. ಈ ವಿಚಾರವಾಗಿ ಕೆಸಿ ವೇಣುಗೋಪಾಲ್ ಅವರು ಎಕ್ಸ್ ಸಂದೇಶ ಪ್ರಕಟಿಸಿ, ವಿಮಾನಯಾನ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಕೆಸಿ ವೇಣುಗೋಪಾಲ್ ಸಂದೇಶದಲ್ಲೇನಿದೆ?
‘ನಾನು, ಹಲವಾರು ಸಂಸದರು ಮತ್ತು ನೂರಾರು ಪ್ರಯಾಣಿಕರನ್ನು ಒಳಗೊಂಡು ತಿರುವನಂತಪುರದಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI 2455 ಇಂದು ದುರಂತಕ್ಕೀಡಾಗುವುದರಿಂದ ಸ್ವಲ್ಪದರಲ್ಲೇ ಬಚವಾಯಿತು’ ಎಂದು ಕೆಸಿ ವೇಣುಗೋಪಾಲ್ ಎಕ್ಸ್ ಸಂದೇಶದಲ್ಲಿ ತಿಳಿಸಿದ್ದಾರೆ.
‘ತಡವಾಗಿ ಆರಂಭವಾದ ಪ್ರಯಾಣ ಕೆಲವೇ ಕ್ಷಣಗಳಲ್ಲಿ ಅತ್ಯಂತ ಭಯಾನಕವಾದ ಯಾನವಾಗಿ ಬದಲಾಯಿತು. ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಟರ್ಬೊಲೆನ್ಸ್ ಸಮಸ್ಯೆ ಎದುರಾಯಿತು. ಅದಾದ ಒಂದು ಗಂಟೆಯ ನಂತರ ವಿಮಾನದಲ್ಲಿ ಸಿಗ್ನಲ್ ತೊಂದರೆ ಇದೆ ಎಂದು ಕ್ಯಾಪ್ಟನ್ ಘೋಷಣೆ ಮಾಡಿದರು. ಬಳಿಕ ವಿಮಾನವನ್ನು ಚೆನ್ನೈ ಕಡೆಗೆ ತಿರುಗಿಸಲಾಯಿತು. ತಾಂತ್ರಿಕ ತೊಂದರೆ ಇದ್ದ ಹೊರತಾಗಿಯೂ ಸುಮಾರು ಎರಡು ಗಂಟೆ ಕಾಲ ವಿಮಾನ ನಿಲ್ದಾಣದ ಸುತ್ತ ಹಾರಾಡಿದ ನಂತರ ಲ್ಯಾಂಡಿಂಗ್ಗೆ ಅನುಮತಿ ದೊರೆಯಿತು. ಮೊದಲ ಲ್ಯಾಂಡಿಂಗ್ ಯತ್ನದ ವೇಳೆ ಅದೇ ರನ್ವೇಯಲ್ಲಿ ಮತ್ತೊಂದು ವಿಮಾನ ಇರುವುದು ತಿಳಿದು ಕೊನೇ ಕ್ಷಣದಲ್ಲಿ ಪೈಲೆಟ್ ಟೇಕ್ ಆಫ್ ಮಾಡಿ ನಮ್ಮನ್ನು ಬಚಾವ್ ಮಾಡಿದರು. ಎರಡನೇ ಪ್ರಯತ್ನದಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಯಿತು’ ಎಂದು ವೇಣುಗೋಪಾಲ್ ಉಲ್ಲೇಖಿಸಿದ್ದಾರೆ.
ಪೈಲಟ್ ಕೌಶಲ ಮತ್ತು ನಮ್ಮ ಅದೃಷ್ಟದಿಂದಾಗಿ ನಾವು ಬಚಾವಾದೆವು. ಪ್ರಯಾಣಿಕರ ಸುರಕ್ಷತೆ ಎಂಬುದು ಅದೃಷ್ಟದ ಮೇಲೆ ಅವಲಂಬಿತವಾಗಿರಬಾರದು. ಈ ಘಟನೆಯ ಬಗ್ಗೆ ತಕ್ಷಣವೇ ತನಿಖೆ ನಡೆಸಬೇಕು. ಇಂಥ ವಿಚಾರದಲ್ಲಿ ಹೊಣೆಗಾರಿಕೆ ಮುಖ್ಯ. ಮುಂದೆ ಇಂತಹ ಘಟನೆಗಳಾಗಬಾರದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯವನ್ನು ಕೆಸಿ ವೇಣುಗೋಪಾಲ್ ಆಗ್ರಹಿಸಿದ್ದಾರೆ.
ಏರ್ ಇಂಡಿಯಾ ತಿಳಿಸಿದ್ದೇನು?
ಶಂಕಿತ ತಾಂತ್ರಿಕ ದೋಷ ಮತ್ತು ಮಾರ್ಗಮಧ್ಯೆ ಹವಾಮಾನ ವೈಪರೀತ್ಯದಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ಚೆನ್ನೈಗೆ ಕಳುಹಿಸಿ ತುರ್ತು ಲ್ಯಾಂಡಿಂಗ್ ಮಾಡಲಾಗಿತ್ತು ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.
