ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಯುವಕ ರೂಮಿನಲ್ಲಿ ನಿಗೂಢ ಸಾವು: ಧಾರವಾಡದಲ್ಲಿ ಘಟನೆ

ಧಾರವಾಡ: ಸ್ಪರ್ಧಾತ್ಮಕ ಪರೀಕ್ಷೆ ಸಂಬಂಧ ಕೋಚಿಂಗ್ ಪಡೆಯಲು ಧಾರವಾಡಕ್ಕೆ ಬಂದು ಇಲ್ಲಿನ ಶಕ್ತಿ ಕಾಲೊನಿಯಲ್ಲಿ ರೂಮ್ ಮಾಡಿಕೊಂಡು ವಾಸವಿದ್ದ ಯುವಕನೋರ್ವ ತನ್ನ ರೂಮಿನಲ್ಲಿ ಮಲಗಿದ ಜಾಗದಲ್ಲೇ ಸಾವನ್ನಪ್ಪಿದ್ದಾನೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಯುವಕ ಗಂಗಾಧರ ಕರಿಗೌಡರ (32) ಎಂಬ ಯುವಕನೇ ಸಾವಿಗೀಡಾದವನು.
ಗಂಗಾಧರ ಎಂಜಿನಿಯರಿಂಗ್ ಪದವೀಧರನಾಗಿದ್ದ. ಕೆಎಎಸ್ ಮಾಡಬೇಕು ಎಂಬ ಕನಸು ಹೊಂದಿ ಧಾರವಾಡಕ್ಕೆ ಬಂದು ಕೋಚಿಂಗ್ ಪಡೆಯುತ್ತಿದ್ದ. ಧಾರವಾಡದ ಶಕ್ತಿ ಕಾಲೊನಿಯಲ್ಲಿ ರೂಮ್ ಮಾಡಿಕೊಂಡು ಓದುತ್ತಿದ್ದ. ಕಳೆದ ಎರಡ್ಮೂರು ದಿನಗಳ ಹಿಂದೆಯೇ ಆತ ತನ್ನ ರೂಮಿನಲ್ಲಿ ಮಲಗಿದ ಜಾಗದಲ್ಲೇ ಮಲಗಿ ಸಾವನ್ನಪ್ಪಿದ್ದು, ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಅಕ್ಕಪಕ್ಕದ ಜನರಿಗೆ ರೂಮಿನಿಂದ ವಾಸನೆ ಬಂದಾಗಲೇ ಅದರ ಬಗ್ಗೆ ಗೊತ್ತಾಗಿದೆ. ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಗಂಗಾಧರನ ಮನೆಯವರಿಗೆ ತಿಳಿಸಿ, ಅವರು ಸ್ಥಳಕ್ಕೆ ಬಂದ ನಂತರವೇ ರೂಮಿನ ಕದ ತೆಗೆದು ಒಳಹೋಗಲಾಗಿದೆ. ಗಂಗಾಧರನಿಗೆ ಹೃದಯಾಘಾತವಾಗಿರಬಹುದು ಎಂದು ಶಂಕಿಸಲಾಗಿದೆ. ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
