ತೆರಿಗೆದಾರರಿಗೆ ಗೊಂದಲ ತಪ್ಪಿಸಲು 2025ರ ಆದಾಯ ತೆರಿಗೆ ಬಿಲ್ ಹಿಂಪಡೆದ ಕೇಂದ್ರ ಸರ್ಕಾರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಆದಾಯ ತೆರಿಗೆಯಲ್ಲಿ ಮಹತ್ತರ ಬದಲಾವಣೆ ತಂದಿದೆ. ತೆರಿಗೆ ವಿನಾಯಿತಿಯನ್ನು ಹಂತ ಹಂತವಾಗಿ ಏರಿಕೆ ಮಾಡಿದೆ. ಇದರ ಜೊತೆ ತೆರಿಗೆ ಸಲ್ಲಿಕೆ, ಟಿಡಿಎಸ್ ಸೇರಿದಂತೆ ಹಲವು ರಿಫಂಡ್ ಕೂಡ ತ್ವರಿತಗತಿಯಲ್ಲಿ ಪ್ರಕ್ರಿಯೆ ಪೂರ್ಣಗೊಲಿಸಲು ವೆಬ್ಸೈಟ್ ಕೂಡ ನವೀಕರಿಸಲಾಗಿದೆ.

ಇದೀಗ ಕೇಂದ್ರ ಸರ್ಕಾರ 2025ರ ಫೆಬ್ರವರಿ ತಿಂಗಳಲ್ಲಿ ಮಂಡಿಸಿದ ಆದಾಯ ತೆರಿಗೆ ಬಿಲ್ ಹಿಂಪಡೆದಿದೆ. 1961ರ ಆದಾಯ ತೆರಿಗೆ ಕಾಯ್ದೆಗೆ ಬದಲು ಹೊಸ ಬಿಲ್ ಮಂಡಿಸಲಾಗಿತ್ತು. ಆದರೆ ಇದೀಗ ಈ ಬಿಲ್ ವಾಪಾಸ್ ಪಡೆದಿದೆ.
ಯಾವ ಕಾಯ್ದೆಯಡಿ ಈಗ ತೆರಿಗೆ ಸಲ್ಲಿಕೆ?
ಕೇಂದ್ರ ಸರ್ಕಾರ ಫೆಬ್ರವರಿ 13ರಂದು ಲೋಕಸಭೆಯಲ್ಲಿ 2025ರ ಆದಾಯ ತೆರಿಗೆ ಬಿಲ್ ಮಂಡಿಸಿತ್ತು. ಬಿಲ್ ಮಂಡನೆ ಬಳಿಕ ಕೇಂದ್ರ ಸರ್ಕಾರ ಈ ಮಸೂದೆಯನ್ನು ಆಯ್ದ ಕಮಿಡಿಗೆ ಪರಾಮರ್ಶೆಗೆ ಕಳುಹಿಸಿತ್ತು. ಇದೀಗ ಈ ಮಸೂದೆ ಕುರಿತು ಪರಾಮರ್ಶೆ ನಡೆಸಿದ ಸಮಿತಿ ಜುಲೈ 21ರಂದು ಲೋಕಸಭೆಗೆ ವರದಿ ನೀಡಿದೆ. ಹೊಸ ತೆರಿಗೆ ಬಿಲ್ ಕುರಿತು ಸಮಿತಿ ಕೆಲ ಶಿಫಾರಸುಗಳನ್ನು ಮಾಡಿದೆ. ಈ ಶಿಫಾಸುಗಳನ್ನು ಒಪ್ಪಿಕೊಂಡಿರುವ ಕೇಂದ್ರ ಸರ್ಕಾರ ತಿದ್ದುಪಡಿಗಾಗಿ ಮಸೂದೆ ವಾಪಸ್ ಪಡೆದಿದೆ.
ಆಗಸ್ಟ್ 11ರಂದು ಪರಿಷ್ಕೃತ ತೆರಿಗೆ ಬಿಲ್ ಮಂಡನೆ
ಸಮಿತಿ ಮಾಡಿರುವ ಕೆಲ ಶಿಫಾರಸ್ಸುಗಳನ್ನು ಒಪ್ಪಿಕೊಂಡಿರುವ ಕೇಂದ್ರ ಸರ್ಕಾರ ಇದೀಗ 2025ರ ಆದಾಯ ತೆರಿಗೆ ಮಸೂದೆಗೆ ತಿದ್ದುಪಡಿ ತರಲಿದೆ. ಸದ್ಯ ಹಿಂಪಡೆದಿರುವ ಬಿಲ್ನ್ನು ಪರಿಷ್ಕರಣೆಗೊಳಿಸಿ ಆಗಸ್ಟ್ 11 ರಂದು ಲೋಕಸಭೆಯಲ್ಲಿ ಮಂಡಿಸಲಾಗುತ್ತಿದೆ. ಈ ಬಿಲ್ 1961ರ ಆದಾಯ ತೆರಿಗೆ ಕಾಯ್ದೆಗೆ ಬದಲು ಮಂಡನೆಯಾಗಲಿದೆ.
ನಿರ್ಮಲಾ ಸೀತಾರಾಮನ್ ಹೇಳಿದ್ದೇನು?
1961ರ ಆದಾಯ ತೆರಿಗೆ ಕಾಯ್ದೆಗೆ ಬದಲಾಗಿ ಫೆಬ್ರವರಿ 13 ರಂದು ಲೋಕಸಭೆಯಲ್ಲಿ ಮಂಡಿಸಲಾಗಿದ್ದ ಆದಾಯ ತೆರಿಗೆ ಮಸೂದೆಯನ್ನು ವಾಪಸ್ ಪಡೆಯಲಾಗಿದೆ. ಹೊಸದಾಗಿ ತಿದ್ದುಪಡಿ ಮಾಡಿದ ಮಸೂದೆಯನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾಗುವುದು. ಮಸೂದೆಯ ಹಲವು ಆವೃತ್ತಿಗಳಿಂದ ಉಂಟಾಗುವ ಗೊಂದಲವನ್ನು ತಪ್ಪಿಸಲು ಮತ್ತು ಸ್ಪಷ್ಟ ಹಾಗೂ ನವೀಕೃತ ಆವೃತ್ತಿಯನ್ನು ಒದಗಿಸುವ ಸಲುವಾಗಿ ಹಳೆಯ ಮಸೂದೆಗೆ ತಿದ್ದುಪಡಿ ತಂದು ಹೊಸ ಆವೃತ್ತಿಯನ್ನು ಆಗಸ್ಟ್ 11 ರಂದು ಸದನದ ಮುಂದೆ ಮಂಡಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
