ಕದನ ವಿರಾಮದ ನಡುವೆಯೇ ಇರಾನ್ ತೈಲ ಸಂಸ್ಕರಣಾಗಾರದ ಮೇಲೆ ದಾಳಿ; ಯುಎಇ ಮತ್ತು ಕುವೈತ್ ಮೇಲೂ ಡ್ರೋನ್ ಪ್ರಹಾರ

ದುಬೈ: ಅಮೆರಿಕ ಹಾಗೂ ಇರಾನ್ ಎರಡು ವಾರಗಳ ಕದನವಿರಾಮವನ್ನು ಘೋಷಿಸಿದ ಕೆಲವೇ ತಾಸುಗಳ ಬಳಿಕ ಬುಧವಾರ ಬೆಳಗ್ಗೆ ಇರಾನ್ ಲಾವನ್ ದ್ವೀಪದಲ್ಲಿರುವ ತೈಲ ಸಂಸ್ಕರಣಾಗಾರದ ಮೇಲೆ ಕ್ಷಿಪಣಿ ದಾಳಿ ನಡೆಸಿರುವುದಾಗಿ ವರದಿಯಾಗಿದೆ. ಇತ್ತ ಯುಎಇ ಹೇಳಿಕೆಯೊಂದನ್ನು ನೀಡಿ, ತನ್ನೆಡೆಗೆ ಧಾವಿಸಿ ಬರುತ್ತಿದ್ದ ಕ್ಷಿಪಣಿಗಳ ಸಮೂಹವನ್ನು ತನ್ನ ವಾಯುರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿರುವುದಾಗಿ ತಿಳಿಸಿದೆ.
ಕುವೈತ್ ಮೇಲೂ ಇರಾನ್ ಡೋನ್ ದಾಳಿ ನಡೆಸಿರುವುದಾಗಿ ವರದಿಯಾಗಿದೆ. ಕದನವಿರಾಮದ ಬಳಿಕ ಇರಾನ್ ನಡೆಸಿದ ಈ ಡೋನ್ ದಾಳಿಯಲ್ಲಿ ಹಾನಿ ಅನುಭವಿಸಿರುವುದಾಗಿ ಕುವೈತ್ ತಿಳಿಸಿದೆ. ಬುಧವಾರ ಮುಂಜಾನೆಯಿಂದ ಇರಾನ್ ಉಡಾವಣೆಗೊಳಿಸಿರುವ ಇರಾನಿ ಟ್ರೋನ್‌ಗಳನ್ನು ತನ್ನ ವಾಯುರಕ್ಷಣಾ ವ್ಯವಸ್ಥೆ ಅಡ್ಡಗಟ್ಟಿರುವುದಾಗಿ ಕುವೈತ್ ಸೇನೆ ತಿಳಿಸಿದೆ.
ಇರಾನ್ ಲಾವನ್‌ನಲ್ಲಿರುವ ತೈಲಸಂಸ್ಕರಣಾಗಾರದ ಮೇಲೆ ಬುಧವಾರ 10 ಗಂಟೆಯ ವೇಳೆಗೆ ಕ್ಷಿಪಣಿ ದಾಳಿ ನಡೆದಿದ್ದು ಸಾವುನೋವು ಸಂಭವಿಸಿಲ್ಲ. ಆದರೆ ಸಂಸ್ಕರಣಾಗಾರಕ್ಕೆ ಹತ್ತಿಕೊಂಡ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ತಂಡಗಳು ಶ್ರಮಿಸುತ್ತಿರುವುದಾಗಿ ವರದಿ ತಿಳಿಸಿದೆ. ಇರಾನ್‌ನ ಸಿರಿ ದ್ವೀಪದಲ್ಲೂ ಬುಧವಾರ ಸ್ಫೋಟಗಳು ನಡೆದಿರುವ ಬಗ್ಗೆ ವರದಿಯಾಗಿದೆ. ಆದರೆ ಸ್ಫೋಟದ ಕಾರಣ ತಕ್ಷಣವೇ ತಿಳಿದು ಬಂದಿಲ್ಲವೆಂದು ಇರಾನ್ ಸರಕಾರಿ ಮಾಧ್ಯಮವೊಂದು ವರದಿ ಮಾಡಿದೆ.
ಅಮೆರಿಕ ಹಾಗೂ ಇರಾನ್ ನಡುವೆ ಏರ್ಪಟ್ಟ ಎರಡು ವಾರಗಳ ಕದನವಿರಾಮ ಒಪ್ಪಂದದನ್ವಯ ಅಮೆರಿಕವು ಇರಾನ್ ಮೇಲೆ ಎರಡು ವಾರಗಳವರೆಗೆ ದಾಳಿಗಳನ್ನು ನಡೆಸದಿರಲು ಒಪ್ಪಿಕೊಂಡಿದೆ. ಇದಕ್ಕೆ ಪ್ರತಿಯಾಗಿ ಟೆಹ್ರಾನ್, ಜಗತ್ತಿನ ಐದನೇ ಒಂದರಷ್ಟು ತೈಲಸಂಪತ್ತು ಸಾಗಣೆಯಾಗುವ ಆಯಕಟ್ಟಿನ ಹಾರ್ಮುಝ್ ಜಲಸಂಧಿಯನ್ನು ತೆರೆಯಲಿದೆ.
ದಾಳಿ ನಿಲ್ಲಿಸುವಂತೆ ಇರಾನ್‌ಗೆ ಸೇನೆಗೆ ಮೊಜ್ಜಾಬಾ ಖಾಮಿನ್ನೆ ಆದೇಶ
ಅಮೆರಿಕ ಹಾಗೂ ಇರಾನ್ ನಡುವೆ ಕದನವಿರಾಮ ಒಪ್ಪಂದ ಘೋಷಣೆಯಾದ ಬೆನ್ನಲ್ಲೇ ದಾಳಿಯನ್ನು ನಿಲ್ಲಿಸುವಂತೆ ದೇಶದ ಎಲ್ಲಾ ಮಿಲಿಟರಿ ಘಟಕಗಳಿಗೆ, ಇರಾನ್ ಸರ್ವೋಚ್ಚ ನಾಯಕ ಮೊಜ್ವಾಬಾ ಖಾಮಿನೈ ಅವರು ಆದೇಶ ನೀಡಿದ್ದಾರೆಂದು ಸಿಎನ್ಎನ್ ಸುದ್ದಿಸಂಸ್ಥೆ ಇರಾನಿನ ಮಾಧ್ಯಮವೊಂದರಲ್ಲಿ ಪ್ರಸಾರವಾದ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.
ಮೊಜ್ಜಾಬಾ ಖಾಮಿನೈ ಅವರು ನೀಡಿದ್ದಾರೆನ್ನಲಾದ ಈ ಆದೇಶವನ್ನು ಇರಾನಿನ ಸರಕಾರಿ ಸುದ್ದಿವಾಹಿನಿ ಐರ್‌ಐಬಿ, ಎರಡೂ ದೇಶಗಳ ನಡುವೆ ಕದನವಿರಾಮ ಘೋಷಣೆಯಾದ ಎರಡು ತಾಸುಗಳ ಬಳಿಕ ಪ್ರಸಾರ ಮಾಡಿದೆಯೆಂದು ಸಿಎನ್‌ಎನ್ ವರದಿ ತಿಳಿಸಿದೆ.
“ಇದು ಯುದ್ಧದ ಅಂತ್ಯವಲ್ಲ. ಆದರೆ ಎಲ್ಲಾ ಮಿಲಿಟರಿ ಶಾಖೆಗಳು ಸರ್ವೋಚ್ಚ ನಾಯಕನ ಆದೇಶವನ್ನು ಪಾಲಿಸಬೇಕು ಹಾಗೂ ದಾಳಿಯನ್ನು ನಿಲ್ಲಿಸಬೇಕು ಹೇಳಿಕೆ ತಿಳಿಸಿದೆ. ಸಂಘರ್ಷದ ನಿಲುಗಡೆಯು ಶರತ್ತುಬದ್ಧವಾಗಿದೆ ಮತ್ತು ಅದು ಈಗ ನಡೆಯುತ್ತಿರುವ ಮಾತುಕತೆಗಳ ಜೊತೆ ನಂಟು ಹೊಂದಿದೆ” ಎಂದು ಸಂದೇಶದಲ್ಲಿ ಒತ್ತಿ ಹೇಳಲಾಗಿದೆ.
