ರೈಲ್ವೆ ಬೋಗಿಗಳಲ್ಲಿ ಸಿಸಿಟಿವಿ ಕ್ಯಾಮರಾಗಳು ಹಾಗೂ ಉಚಿತ ವೈಫೈ: ಪ್ರಯಾಣಿಕರಿಗೆ ಸುಧಾರಿತ ಅನುಕೂಲ

ನವದೆಹಲಿ: ಟ್ರೈನುಗಳಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ಸೌಕರ್ಯ ಹೆಚ್ಚಿಸಲು ರೈಲ್ವೆ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಈ ಪೈಕಿ ಸಾವಿರಾರು ಕೋಚ್ಗಳಿಗೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿದೆ. ಸಾವಿರಾರು ರೈಲ್ವೆ ನಿಲ್ದಾಣಗಳಲ್ಲಿ ವೈಫೈ ಸೌಕರ್ಯಗಳನ್ನೂ ಒದಗಿಸಿದೆ. ಕೇಂದ್ರ ರೈಲ್ವೆ ಸಚಿವ ಡಾ. ಅಶ್ವಿನಿ ವೈಷ್ಣವ್ ಇತ್ತೀಚೆಗೆ ರಾಜ್ಯಸಭೆ ಹಾಗೂ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಈ ವಿವರ ನೀಡಿದ್ದಾರೆ.

ರೈಲು ಬೋಗಿಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ
ಭಾರತೀಯ ರೈಲ್ವೆ ಇಲಾಖೆಯು ಈವರೆಗೆ ದೇಶಾದ್ಯಂತ ವಿವಿಧ ಟ್ರೈನುಗಳಲ್ಲಿಯ 11,535 ಬೋಗಿಗಳಿಗೆ ಸಿಸಿಟಿವಿ ಕ್ಯಾಮರಾ ಅಳವಡಿಸಿದೆ ಎನ್ನುವ ಮಾಹಿತಿಯನ್ನು ಸಚಿವರು ನೀಡಿದ್ದಾರೆ.
ಮುಂದಿನ ದಿನಗಳಲ್ಲಿ 74,000 ಕೋಚ್ಗಳು ಹಾಗೂ 15,000 ಲೊಕೋಮೋಟಿವ್ಗಳಲ್ಲೂ ಸಿಸಿಟಿವಿ ಕ್ಯಾಮರಾ ಹಾಕಲಾಗುವುದು. ಪ್ರತೀ ಬೋಗಿಯಲ್ಲೂ ನಾಲ್ಕು ಕ್ಯಾಮರಾಗಳಿರುತ್ತವೆ. ಬೋಗಿಯ ಎರಡೂ ಬದಿಯ ದ್ವಾರಗಳಲ್ಲಿ ಎರಡೆರಡು ಕ್ಯಾಮರಾಗಳನ್ನು ಹಾಕಲಾಗುವುದು ಎಂದು ತಿಳಿಸಿದ್ದಾರೆ.
6,115 ರೈಲ್ವೆ ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ
ದೇಶಾದ್ಯಂತ 6,115 ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಅನುಕೂಲಕ್ಕೆಂದು ಉಚಿತವಾಗಿ ವೈಫೈ ಸೌಲಭ್ಯಗಳನ್ನು ಸ್ಥಾಪಿಸಲಾಗಿದೆ ಎಂದು ಡಾ. ವೈಷ್ಣವ್ ತಿಳಿಸಿದ್ದಾರೆ.
‘ಬಹುತೇಕ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ 4ಜಿ, 5ಜಿ ಕವರೇಜ್ ಕೊಡಲಾಗಿದೆ. ರೈಲು ಪ್ರಯಾಣಿಕರಿಗೆ ಇದರಿಂದ ಸಾಕಷ್ಟು ಅನುಕೂಲವಾಗಿದೆ. 6,116 ನಿಲ್ದಾಣಗಳಲ್ಲಿ ಉಚತಿ ವೈಫೈ ಸೇವೆಗಳನ್ನೂ ಒದಗಿಸಲಾಗಿದೆ’ ಎಂದು ರೈಲ್ವೆ ಸಚಿವರು ಹೇಳಿದ್ಧಾರೆ.
ನಿಲ್ದಾಣದಲ್ಲಿ ಉಚಿತ ವೈಫೈ ಬಳಸುವುದು ಹೇಗೆ?
- ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ತಮ್ಮ ಸ್ಮಾರ್ಟ್ಫೋನ್ನಲ್ಲಿ ವೈಫೈ ಆನ್ ಮಾಡಬೇಕು.
- ರೈಲ್ವೈರ್ ಎನ್ನುವ ವೈಫೈ ನೆಟ್ವರ್ಕ್ ಆಯ್ದುಕೊಳ್ಳಬೇಕು.
- ಮೊಬೈಲ್ ನಂಬರ್ ನಮೂದಿಸಿ ಒಟಿಪಿ ಪಡೆದು, ಅದನ್ನು ಹಾಕಬೇಕು.
- ಈ ಮೂಲಕ ಪ್ರಯಾಣಿಕರು ಹೈಸ್ಪೀಡ್ ವೈಫೈ ನೆಟ್ವರ್ಕ್ ಅನ್ನು ಬಳಸಬಹುದು.
