ಜಾತಿಗಣತಿ ತಲೆನೋವು: ಜಾತಿ ಪಟ್ಟಿಯಲ್ಲಿ ‘ಕ್ರಿಶ್ಚಿಯನ್’ ನಮೂದು; ಆಕ್ರೋಶ ಭುಗಿಲೆದ್ದು ಹೈಕೋರ್ಟ್ಗೆ ಪಿಐಎಲ್

ಬೆಂಗಳೂರು: ಈಗಾಗಲೇ ರಾಜ್ಯ ಸರ್ಕಾರಕ್ಕೆ ಜಾತಿ ಜಟಾಪಟಿ ಟೆನ್ಷನ್ ತಂದಿಟ್ಟಿದೆ. ಜಾತಿಗಣತಿ ಆರಂಭಕ್ಕೂ ಮುನ್ನವೇ ಆಕ್ರೋಶ ಭುಗಿಲೆದ್ದಿದೆ. ಈ ಮಧ್ಯೆ ಸರ್ಕಾರದಿಂದ ಹೊಸ ಉಪಜಾತಿಗಳ ಸೃಷ್ಟಿ ಆರೋಪ ಬೆನ್ನಲ್ಲೇ ಹೈಕೋರ್ಟ್ಗೆ (High Court) ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದ್ದು, ಸರ್ಕಾರದ ಈ ಜಾತಿ ಜನಗಣತಿ ರದ್ದುಪಡಿಸುವಂತೆ ಕೋರಲಾಗಿದೆ.

ವಕೀಲ ಕೆ.ಎನ್.ಸುಬ್ಬಾರೆಡ್ಡಿ ಮತ್ತಿತರರಿಂದ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಸರ್ಕಾರ, ಜಾತಿ ಮತ್ತು ಉಪಜಾತಿಗಳ ನಡುವೆ ಎತ್ತಿ ಕಟ್ಟುತ್ತಿದೆ. ಹೀಗಾಗಿ ಸರ್ಕಾರದ ಈ ಜಾತಿ ಜನಗಣತಿ ರದ್ದುಪಡಿಸುವಂತೆ ಕೋರಲಾಗಿದೆ.
ಜಾತಿ ಗಣತಿ ನಡೆಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರವಿದೆ
15 ದಿನಗಳಲ್ಲಿ ಸರ್ಕಾರ ತರಾತುರಿಯಲ್ಲಿ ಜಾತಿಗಣತಿ ನಡೆಸುತ್ತಿದೆ. ಅದರಲ್ಲೂ ದಸರಾ ರಜೆ ದಿನಗಳಲ್ಲಿ ಜಾತಿ ಗಣತಿ ನಡೆಸುತ್ತಿದೆ. ಜನರು ಹಬ್ಬ, ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾಗ ಗಣತಿ ಸರಿಯಲ್ಲ, ಸರ್ಕಾರ 1500 ಉಪಜಾತಿಗಳಿಗೂ ಪ್ರತ್ಯೇಕ ಅಸ್ತಿತ್ವ ನೀಡುತ್ತಿದೆ. ಜಾತಿ ಗಣತಿ ನಡೆಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರವಿದೆ. ಹೀಗಾಗಿ ರಾಜ್ಯ ಸರ್ಕಾರದ ನಿರ್ಧಾರ ರದ್ದುಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ.
ಸೆಪ್ಟೆಂಬರ್ 22ರಿಂದ ರಾಜ್ಯದಲ್ಲಿ ಜಾತಿಗಣತಿ ಆರಂಭವಾಗುತ್ತಿದೆ. ಜಾತಿಗಣತಿ ನಡೆಸುವ ಬಗ್ಗೆ ಸರ್ಕಾರದ ಕೈಪಿಡಿ ಪಟ್ಟಿಯಲ್ಲಿರುವ ಕೆಲ ಜಾತಿಗಳ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಏಕೆಂದರೆ ಸರ್ಕಾರ ರಾಜ್ಯದಲ್ಲಿ ಗುರುತಿಸಿರುವ ಜಾತಿ ಮತ್ತು ಉಪಜಾತಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಕೆಲ ಜಾತಿಗಳ ಮುಂದೆ ಕ್ರಿಶ್ಚಿಯನ್ ಅಂತಾ ನಮೂದಿಸಲಾಗಿದೆ.
ಕುರುಬ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ದೇವಾಂಗ ಕ್ರಿಶ್ಚಿಯನ್, ಜಂಗಮ ಕ್ರಿಶ್ಚಿಯನ್, ಮಡಿವಾಳ ಕ್ರಿಶ್ಚಿಯನ್, ನೇಕಾರ ಕ್ರಿಶ್ಚಿಯನ್, ವಿಶ್ವಕರ್ಮ ಕ್ರಿಶ್ಚಿಯನ್, ಅಷ್ಟೇ ಯಾಕೆ ಒಕ್ಕಲಿಗ ಕ್ರಿಶ್ಚಿಯನ್, ವಿಶ್ವಕರ್ಮ ಬ್ರಾಹ್ಮಣ ಕ್ರಿಶ್ಚಿಯನ್ ಅಂತಾ ಉಲ್ಲೇಖವಿದೆ. ಈ ಪಟ್ಟಿಯೇ ಈಗ ಆಕ್ರೋಶಕ್ಕೆ ಕಾರಣವಾಗಿದೆ.
ಹಿಂದೂಗಳ ಜಾತಿಗಳ ನಡುವೆ ಕ್ರಿಶ್ಚಿಯನ್ ನುಗ್ಗಿಸುವ ಹುನ್ನಾರ’ ಹೆಸರಿನಡಿ, ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ಹೋರಾಟಕ್ಕೆ ಕರೆ ನೀಡಿವೆ. ಸೆಪ್ಟೆಂಬರ್ 16 ರಂದು ಬೆಂಗಳೂರಿನಲ್ಲಿ ಸಭೆ ನಡೆಸಲು ಮುಂದಾಗಿವೆ.
