ಜಾತಿ ಜನಗಣತಿ ಕರ್ತವ್ಯ: ಬೀದಿನಾಯಿಗಳ ದಾಳಿಯಿಂದ ದ್ವಿಚಕ್ರ ವಾಹನದಿಂದ ಬಿದ್ದು ಶಿಕ್ಷಕಿಯ ಕೈ ಮೂಳೆ ಮುರಿತ; ಬೇಲೂರಿನಲ್ಲಿ ಘಟನೆ

ಜಾತಿ ಜನಗಣತಿ ಮುಗಿಸಿ ಹಿಂತಿರುಗುತ್ತಿದ್ದಾಗ ಬೇಲೂರಿನಲ್ಲಿ ಬೀದಿನಾಯಿಗಳ ದಾಳಿಯಿಂದ ಶಿಕ್ಷಕಿಯೊಬ್ಬರು ಬಿದ್ದು ಕೈ ಮುರಿದುಕೊಂಡಿದ್ದಾರೆ. ಮತ್ತೊಂದು ಘಟನೆಯಲ್ಲಿ, ಯಾದಗಿರಿಯಲ್ಲಿ ಶೈಕ್ಷಣಿಕ ಗಣತಿ ನಡೆಸುತ್ತಿದ್ದ ಶಿಕ್ಷಕಿಯೊಬ್ಬರು ಕಡಿಮೆ ರಕ್ತದೊತ್ತಡದಿಂದ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ.

ಬೇಲೂರು (ಅ.8): ಜಾತಿ ಜನಗಣತಿ ಮುಗಿಸಿ ಹಿಂತಿರುಗುವಾಗ ಬೀದಿನಾಯಿಗಳು ದಾಳಿ ಮಾಡಿದ್ದರಿಂದ ದ್ವಿಚಕ್ರವಾಹನದಿಂದ ಶಿಕ್ಷಕಿ ಕೆಳಗೆ ಬಿದ್ದಿದ್ದು ಕೈಗೆ ಪೆಟ್ಟಾಗಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಳೆ ಗೆಂಡೇಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗೆಂಡೇಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆಯ ಶಿಕ್ಷಕಿ ರುಕ್ಮಾ ಅವರು ಜಾತಿಗಣತಿಗೆಂದು ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳಿದ್ದರು. ಬೀದಿನಾಯಿಗಳು ಅಟ್ಟಿಸಿಕೊಂಡು ಬಂದಿದ್ದರಿಂದ ಭಯದಿಂದ ಸ್ಕೂಟಿಯಿಂದ ಬಿದ್ದು ಎಡಗೈ ಮೂಳೆ ಮುರಿದಿದ್ದು ಹೆಚ್ಚಿನ ಚಿಕಿತ್ಸೆಗೆ ಹಾಸನದ ಆಸ್ಪತ್ರೆಗೆ ಕಳಿಸಲಾಗಿದೆ.
ಸಮೀಕ್ಷೆ ಮಾಡುವಾಗ ಮೂರ್ಛೆ ತಪ್ಪಿದ ಶಿಕ್ಷಕಿ
ಜಾತಿ ಗಣತಿ ಗೊಂದಲದ ಗೂಡಾಗಿದೆ: ಸರ್ಕಾರದ ವಿರುದ್ಧ ಹರಿಹಾಯ್ದ ಛಲವಾದಿ ನಾರಾಯಣಸ್ವಾಮಿ
ಸೈದಾಪುರ (ಯಾದಗಿರಿ): ರಾಜ್ಯ ಸರ್ಕಾರದ ಆರ್ಥಿಕ ಹಾಗೂ ಶೈಕ್ಷಣಿಕ ಗಣತಿ ನಡೆಸಲು ಮನೆಗಳ ಹುಡುಕಾಟ ಮಾಡುವ ವೇಳೆ ಕಡಿಮೆ ರಕ್ತದೊತ್ತಡದಿಂದ ಅಸ್ವಸ್ಥಗೊಂಡು ಶಿಕ್ಷಕಿ ಕುಸಿದು ಬಿದ್ದ ಘಟನೆ ಯಾದಗಿರಿ ಜಿಲ್ಲೆಯ ಸೈದಾಪುರದಲ್ಲಿ ಮಂಗಳವಾರ ನಡೆದಿದೆ.
ಬಂದಳ್ಳಿ ಗ್ರಾಮದ ಪ್ರಾಥಮಿಕ ಶಾಲೆ ಶಿಕ್ಷಕಿ ಸುನೀತಾ ಗೌಡ್ ಅಳಳ್ಳಿ ಎಂಬುವವರು ಮೂರ್ಛೆ ತಪ್ಪಿದ ಶಿಕ್ಷಕಿ. ಅವರನ್ನು ತಕ್ಷಣವೇ ಸ್ಥಳೀಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಅವರ ಆರೋಗ್ಯವು ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.