ಬಂಟ್ವಾಳ ಬಟ್ಟೆ ಮಳಿಗೆಯಲ್ಲಿ ನಗದು ದೋಚಿದ ಪ್ರಕರಣ: ಪೊಲೀಸರಿಂದ ಆರೋಪಿಯ ಬಂಧನ

ಬಂಟ್ವಾಳ: ಫರಂಗಿಪೇಟೆಯ ಬಟ್ಟೆಮಳಿಗೆಯೊಂದರ ಬೀಗ ಮುರಿದು ನಗದು ದೋಚಿದ ಪ್ರಕರಣವನ್ನು ಬೇಧಿಸುವಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣದಲ್ಲಿ ಓರ್ವ ಆರೋಪಿ ಸಹಿತ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಅಡ್ಯಾರು ಗ್ರಾಮದ ಕಣ್ಣೂರು ನಿವಾಸಿ ನಝೀರ್ ಮಹಮ್ಮದ್ ಬಂಧಿತ ಆರೋಪಿಯಾಗಿದ್ದು, ಆತನಿಂದ 1,09,490 ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ಎ. 11ರ ತಡರಾತ್ರಿ ಫರಂಗಿಪೇಟೆಯ ವಿಶ್ವಾಸ್ ಸಿಟಿ ಸೆಂಟರ್ ಸಂಕೀರ್ಣದಲ್ಲಿದ್ದ ವೈಟ್‌ಲೆçನ್ ಕಿಡ್ಸ್ ವರ್ಲ್ಡ್ ಬಟ್ಟೆ ಮಳಿಗೆಯ ಶಟರ್‌ನ ಬೀಗ ಮುರಿದು ಒಳಪ್ರವೇಶಿಸಿ ಕ್ಯಾಶ್ ಕೌಂಟರ್‌ನಲ್ಲಿದ್ದ ಸುಮಾರು 4 ಲಕ್ಷ ರೂ.ಗಳನ್ನು ಕಳವು ಮಾಡಿದ್ದಾನೆ ಎಂದು ಮಾಲಕ ಇರ್ಫಾನ್ ಅವರು ಪೊಲೀಸರಿಗೆ ದೂರು ನೀಡಿದ್ದರು.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಶಿವಕುಮಾರ್ ಬಿ. ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ. ಆರೋಪಿ ನಝೀರ್ ಮಹಮ್ಮದ್‌ನು ಕಳೆದ ವರ್ಷ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಣ್ಣೂರು ಟಿವಿಎಸ್ ಶೊರೂಮ್‌ನ ಗಾಜು ಒಡೆದು ಹಣ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.